ಸೋಮವಾರಪೇಟೆ,ಜೂ.5: ಪ.ಪಂ. ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ವಾಗಿ ನಿಷೇಧಿಸಲಾಗಿದ್ದು, ಇದರ ಉಲ್ಲಂಘನೆಯಾದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವದು ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ನಾಚಪ್ಪ ಎಚ್ಚರಿಸಿದ್ದಾರೆ.
ವಿಶ್ವ ಪರಿಸರ ದಿನದ ಅಂಗವಾಗಿ ಪಟ್ಟಣದಲ್ಲಿ ಪರಿಸರ ಜಾಗೃತಿ ಜಾಥಾ ನಡೆಸಿದ ನಂತರ ಮಾತನಾಡಿದ ಅವರು, ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಎಲ್ಲಾ ವಿಧದ ಪ್ಲಾಸ್ಟಿಕ್ ವಸ್ತುಗಳ ಬಳಕೆ ಹಾಗೂ ಮಾರಾಟವನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಪಟ್ಟಣದ ವರ್ತಕರಲ್ಲಿ ಜಾಗೃತಿ ಮೂಡಿಸುವದರೊಂದಿಗೆ ಅಂಗಡಿಗಳ ಮೇಲೆ ದಿಡೀರ್ ಧಾಳಿ ನಡೆಸಿ ದಂಡ ವಿಧಿಸಲಾಗಿದೆ. ಆದರೂ ಕೆಲವೆಡೆ ಪ್ಲಾಸ್ಟಿಕ್ ಮಾರಾಟ ಹಾಗೂ ಬಳಕೆ ಬೆಳಕಿಗೆ ಬರುತ್ತಿದೆ. ಇದು ಮುಂದು ವರೆದರೆ ಕಠಿಣ ಕ್ರಮ ಜರುಗಿಸಲಾಗು ವದು ಎಂದು ಎಚ್ಚರಿಕೆ ನೀಡಿದರು.
ಇದರೊಂದಿಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಕಗ್ಗಂಟಾಗಿರುವದರಿಂದ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತಡೆಯಲೇಬೇಕಾಗಿದೆ. ಈ ನಿಟ್ಟಿನಲ್ಲಿ ವರ್ತಕರು ಹಾಗೂ ಸಾರ್ವಜನಿಕರು ಪ.ಪಂ.ಯೊಂದಿಗೆ ಕೈಜೋಡಿಸ ಬೇಕೆಂದು ಮನವಿ ಮಾಡಿದರು.
ಘನ ನ್ಯಾಯಾಲಯದ ಆದೇಶದಂತೆ ಯಾವದೇ ರೀತಿಯ ಪ್ಲಾಸ್ಟಿಕ್ ಕೈಚೀಲಗಳು, ಬಿತ್ತಿ ಪತ್ರ, ತೋರಣ, ಫ್ಲೆಕ್ಸ್, ಬಾವುಟ, ತಟ್ಟೆ, ಲೋಟ, ಚಮಚ ಹಾಗೂ ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆಗಳ ಮಾರಾಟ ಹಾಗೂ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇಂತಹ ಪ್ರಕರಣ ಕಂಡು ಬಂದಲ್ಲಿ 2 ರಿಂದ 5 ಸಾವಿರ ದವರೆಗೆ ದಂಡ ಹಾಗೂ ಕ್ರಿಮಿನಲ್ ಮೊಕದ್ದಮೆ ದಾಖಲಿಸುವದ ರೊಂದಿಗೆ ವ್ಯಾಪಾರೋದ್ಯಮದ ಪರವಾನಗಿ ರದ್ದು ಪಡಿಸಲಾಗುವದು ಎಂದು ಎಚ್ಚರಿಸಿದರು.
ಪರಿಸರ ಜಾಗೃತಿ ಹಾಗೂ ಪ್ಲಾಸ್ಟಿಕ್ ಬಳಕೆ ನಿಷೇಧದ ಬಗ್ಗೆ ಜಾಗೃತಿ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಯಿತು. ಈ ಸಂದರ್ಭ ಪ.ಪಂ. ಆರೋಗ್ಯಾಧಿಕಾರಿ ಉದಯ್ ಕುಮಾರ್ ಸೇರಿದಂತೆ ಸಿಬ್ಬಂದಿಗಳು ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.