ಮಡಿಕೇರಿ, ಜೂ. 4: ರಾಜ್ಯ ವಿಧಾನಸಭೆಗೆ ಚುನಾವಣೆ ನಡೆದು ಇಪ್ಪತ್ತು ದಿನಗಳು ಕಳೆದರೂ ಇನ್ನೂ ಆಡಳಿತ ಸ್ಥಿರಗೊಂಡಿಲ್ಲ. ಮೇ 12 ರಂದು ಮತದಾನ... 15 ರಂದು ಫಲಿತಾಂಶ ಹೊರಬಿದ್ದಿದ್ದರೂ ಮುಂದೇನು...? ಎಂಬ ಗೊಂದಲಗಳೇ ಇನ್ನೂ ಮುಂದುವರಿದಿವೆ. ರಾಜ್ಯದಲ್ಲಿ ಈ ಬಾರಿ ಮತದಾರ ಒಂದೇ ಪಕ್ಷಕ್ಕೆ ಬಹುಮತ ನೀಡದಿರುವ ಹಿನ್ನೆಲೆ ಫಲಿತಾಂಶ ಹೊರಬಿದ್ದ ಬಳಿಕದಿಂದ ಈ ತನಕವೂ ಒಂದಲ್ಲಾ ಒಂದು ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಬಿ.ಜೆ.ಪಿ. ಅತಿದೊಡ್ಡ ಪಕ್ಷವಾಗಿ 104 ಸ್ಥಾನ ಪಡೆದು ಹೊರ ಹೊಮ್ಮಿದ್ದರೂ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ವಿಫಲವಾಗಿದೆ. ಈ ಅತಂತ್ರತೆಯ ಲಾಭ ಪಡೆದು ಪರಸ್ಪರ ಆರೋಪ - ಪ್ರತ್ಯಾರೋಪದಲ್ಲಿ ನಿರತವಾಗಿದ್ದ ಜೆ.ಡಿ.ಎಸ್. ಹಾಗೂ ಕಾಂಗ್ರೆಸ್ ಪಕ್ಷಗಳು ಇದನ್ನು ಬದಿಗೊತ್ತಿ ಹೊಸ ಸ್ನೇಹಚಾರದೊಂದಿಗೆ ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರಕಾರ ರಚಿಸಿವೆ.

ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಯಾಗಿ ಜೆ.ಡಿ.ಎಸ್.ನ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿಯಾಗಿ ಕಾಂಗ್ರೆಸ್‍ನ ಡಾ. ಜಿ. ಪರಮೇಶ್ವರ್ ಅವರುಗಳು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದಾಗಿ ಹಲವು ದಿನ ಕಳೆದರೂ ಸಚಿವ ಸಂಪುಟ ಇನ್ನೂ ಅಂತಿಮಗೊಂಡಂತೆ ಕಂಡು ಬರುತ್ತಿಲ್ಲ. ಈ ನಡುವೆ ಜೆ.ಡಿ.ಎಸ್. ಹಾಗೂ ಕಾಂಗ್ರೆಸ್ ಪಕ್ಷಗಳು ಹಲವು ಚರ್ಚೆಗಳ ಬಳಿಕ ಯಾವ ಪಕ್ಷಕ್ಕೆ ಯಾವ ಖಾತೆ, ಯಾರಿಗೆ ಎಷ್ಟು ಸ್ಥಾನ ಎಂಬ ಒಪ್ಪಂದಕ್ಕೆ ಬಂದಿದ್ದು, ತಾ. 2 ರಂದು ಜಂಟಿ ಪತ್ರಿಕಾಗೋಷ್ಠಿಯ ಮೂಲಕ ಇದನ್ನು ಪ್ರಕಟಿಸಿವೆ. ಜೆ.ಡಿ.ಎಸ್.ಗೆ 12 ಹಾಗೂ ಕಾಂಗ್ರೆಸ್‍ಗೆ 22 ಸಚಿವ ಸ್ಥಾನ ಎಂಬ ಹೊಂದಾಣಿಕೆ ಮಾಡಿಕೊಂಡಿರುವದು ಈಗಿನ ಹೊಸ ಬೆಳವಣಿಗೆಯಾಗಿದೆ. ಆದರೂ ಖಾತೆಗಳಿಗೆ ಸಂಬಂಧಿಸಿದಂತೆ ಸಂಭಾವ್ಯ ಸಚಿವರುಗಳಿಂದ ಇನ್ನೂ ಸೂಕ್ತ ಒಪ್ಪಿಗೆಯ ಲಕ್ಷಣಗಳು ಕಂಡುಬರುತ್ತಿಲ್ಲ.

ಸಮ್ಮಿಶ್ರ ಸರಕಾರದಲ್ಲಿ ಸಚಿವ ಸ್ಥಾನದ ಲಾಭಿ ಒಂದೆಡೆಯಾಗಿದ್ದರೆ ಮತ್ತೊಂದೆಡೆ ಚುನಾವಣೆಗೆ ಮುನ್ನ ಕುಮಾರಸ್ವಾಮಿ ಅವರು ತಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದ ಸಾಲ ಮನ್ನಾ ವಿಚಾರವನ್ನು ಅಧಿಕಾರ ವಂಚಿತವಾಗಿರುವ ಬಿ.ಜೆ.ಪಿ. ಗಟ್ಟಿಯಾಗಿ ಹಿಡಿದುಕೊಂಡಿದೆ. ಈ ಕಾರಣಗಳಿಂದಾಗಿ ಇನ್ನೂ ಸ್ಥಿರವಾಗಿ ಸರಕಾರ ಅಸ್ತಿತ್ವಗೊಳ್ಳದೆ ಇನ್ನೂ ಗೊಂದಲಗಳೇ ಮುಂದುವರಿಯುತ್ತಿವೆ.

ಕೊಡಗಿನಲ್ಲಿ ಬಿ.ಜೆ.ಪಿ.

ರಾಜ್ಯದಲ್ಲಿ ಜೆ.ಡಿ.ಎಸ್. - ಕಾಂಗ್ರೆಸ್ ಸಮ್ಮಿಶ್ರ ಸರಕಾರ ರಚನೆಗೊಂಡಿದೆಯಾದರೂ ಕೊಡಗು ಜಿಲ್ಲೆ ಹೊಂದಿರುವ ಎರಡು ವಿಧಾನಸಭಾ ಕ್ಷೇತ್ರಗಳಾದ ಮಡಿಕೇರಿ ಹಾಗೂ ವೀರಾಜಪೇಟೆಯಲ್ಲಿ ಜಯಗಳಿಸಿರುವದು ಬಿ.ಜೆ.ಪಿ.ಯ ಶಾಸಕರು. ಅಪ್ಪಚ್ಚು ರಂಜನ್ ಹಾಗೂ ಕೆ.ಜಿ. ಬೋಪಯ್ಯ ಅವರು ಈಬಾರಿ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ವಿರೋಧ ಪಕ್ಷದ ಶಾಸಕರಾಗುವಂತಹ ಅನಿವಾರ್ಯತೆ ಎದುರಾಗಿದೆ.

ಉಸ್ತುವಾರಿ ಯಾರು...?

ಸಮ್ಮಿಶ್ರ ಸರಕಾರದ ಮಂತ್ರಿಮಂಡಲ ಪೂರ್ಣ ಪ್ರಮಾಣದಲ್ಲಿ ರಚನೆಗೊಂಡ ಬಳಿಕ ಕೊಡಗು ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ಯಾರು ಬರಲಿದ್ದಾರೆ ಎಂಬದು ಜಿಲ್ಲೆಯ ಜನತೆಯ ಸದ್ಯದ ಕುತೂಹಲವಾಗಿದೆ.

ಹುಣಸೂರು ಕ್ಷೇತ್ರದಿಂದ ಜೆ.ಡಿ.ಎಸ್.ನಿಂದ ಜಯಗಳಿಸಿರುವ ಕೊಡಗನ್ನು ಪ್ರತಿನಿಧಿಸಿದ್ದ ಮಾಜಿ ಸಂಸದ ಹೆಚ್. ವಿಶ್ವನಾಥ್ ಹಾಗೂ ಕೊಡಗು ಮೂಲದವರಾದ ಮಾಜಿ ಸಿ.ಎಂ. ದಿ. ಗುಂಡೂರಾವ್ ಅವರ ಪುತ್ರ ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರುಗಳು ಸಮ್ಮಿಶ್ರ ಸರಕಾರದ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವದು ಬಹುತೇಕ ಖಚಿತವೆನ್ನಲಾಗುತ್ತಿದೆ. ಇವರಲ್ಲಿ ದಿನೇಶ್ ಗುಂಡೂರಾವ್ ಅವರು ಕಳೆದ ಅವಧಿಯಲ್ಲಿ ಒಂದಷ್ಟು ಸಮಯ ಕೊಡಗಿನ ಉಸ್ತುವಾರಿ ಸಚಿವರೂ ಆಗಿದ್ದರು. ಈ ಇಬ್ಬರ ಪೈಕಿ ಒಬ್ಬರು ಕೊಡಗಿನ ಉಸ್ತುವಾರಿ ಸಚಿವರಾಗಬಹುದು ಎಂಬ ಮಾತು ದಟ್ಟವಾಗಿದೆ. ಏಕೆಂದರೆ ಇವರಿಬ್ಬರೂ ಕೊಡಗಿನ ನಂಟು ಹೊಂದಿರುವವರೇ ಆಗಿದ್ದಾರೆ. ಇನ್ನು ನೆರೆ ಜಿಲ್ಲೆ ಮಂಗಳೂರಿನಲ್ಲಿ ಕಾಂಗ್ರೆಸ್‍ನಿಂದ ಯು.ಟಿ. ಖಾದರ್ ಅವರು ಮಾತ್ರ ಜಯಗಳಿಸಿದ್ದು ಇವರ ಹೆಸರು ಕೇಳಿಬಂದಿತ್ತಾದರೂ ಅಲ್ಲಿ ಸಮ್ಮಿಶ್ರ ಸರಕಾರದ ಇತರರು ಯಾರೂ ಜಯಗಳಿಸದ ಹಿನ್ನೆಲೆ ಅವರನ್ನು ಕೊಡಗಿಗೆ ನಿಯೋಜಿಸುವ ಮಾತು ದೂರವೆನ್ನಲಾಗುತ್ತಿದೆ.

ದಿನೇಶ್ ಗುಂಡೂರಾವ್ ಅವರು ಬೆಂಗಳೂರಿನ ಗಾಂಧಿ ನಗರವನ್ನು ಪ್ರತಿನಿಧಿಸುತ್ತಿದ್ದು ಸದ್ಯಕ್ಕೆ ಪಕ್ಷದ ಕಾರ್ಯಾಧ್ಯಕ್ಷರೂ ಆಗಿದ್ದಾರೆ. ಹೆಚ್. ವಿಶ್ವನಾಥ್ ಅವರು ನೆರೆ ಜಿಲ್ಲೆಯ ಕ್ಷೇತ್ರವಾದ ಹುಣಸೂರಿನಿಂದ ಜಯಗಳಿಸಿದ್ದು ಇವರು ಒಂದು ರೀತಿಯಲ್ಲಿ ಕೊಡಗಿಗೆ ಹತ್ತಿರದಲ್ಲಿರುವವರಾಗಿದ್ದಾರೆ. ಈ ಹಿನ್ನೆಲೆ ಹೊಸ ಸರಕಾರದಲ್ಲಿ ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವರು ಯಾರಾಗಬಹುದು ಎಂಬ ಕುತೂಹಲ ಸದ್ಯಕ್ಕೆ ಜನತೆಯಲ್ಲಿದೆ. ಜಿಲ್ಲೆಯಲ್ಲಿ ಜಯಗಳಿಸಿರುವ ಅಭ್ಯರ್ಥಿಗಳು ಪ್ರತಿನಿಧಿಸುವ ಪಕ್ಷ ಬೇರೆ ಹಾಗೂ ಅಧಿಕಾರ ನಡೆಸುವ ಪಕ್ಷ ಬೇರೆಯಾಗಿರುವದರಿಂದ ಸಹಜವಾಗಿ ಈ ಕೌತುಕ ಮುಂದುವರಿಯುತ್ತಿದೆ.

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಸಿದ್ದರಾಮಯ್ಯ ಅವರನ್ನು ಮಣಿಸಿರುವ ಜಿ.ಟಿ. ದೇವೇಗೌಡ ಅವರ ಹೆಸರೂ ಉಸ್ತುವಾರಿ ಸಚಿವರಾಗಬಹುದೆಂದು ಕೆಲವರಿಂದ ಕೇಳಿ ಬಂದಿದೆಯಾದರೂ ಇನ್ನೂ ಯಾವದೇ ಖಚಿತತೆ ಇಲ್ಲವೆನ್ನಬಹುದು.

12 - 22 ರ ಹಂಚಿಕೆ ಪ್ರಶ್ನಾರ್ಹ

ಜೆ.ಡಿ.ಎಸ್. ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದರೂ 39 ಸ್ಥಾನದಲ್ಲಿ ಗೆದ್ದಿರುವ ಈ ಪಕ್ಷಕ್ಕೆ 12 ಸಚಿವ ಸ್ಥಾನ ಹಾಗೂ 78 ಸ್ಥಾನದಲ್ಲಿ ಜಯಗಳಿಸಿರುವ ಕಾಂಗ್ರೆಸ್‍ಗೆ 22 ಸ್ಥಾನ ಎಂದು ಮಾಡಿಕೊಳ್ಳಲಾಗಿರುವ ಒಡಂಬಡಿಕೆಯೂ ಇದೀಗ ಇನ್ನಷ್ಟು ಕುತೂಹಲ ಉಂಟು ಮಾಡುತ್ತಿದೆ. 30 ಜಿಲ್ಲೆಗಳನ್ನು ಹೊಂದಿರುವ ರಾಜ್ಯದಲ್ಲಿ ಜೆ.ಡಿ.ಎಸ್.ನ ಸಚಿವರಿಗೆ ಯಾವ, ಯಾವ ಜಿಲ್ಲೆಗಳು ಹಾಗೂ ಕಾಂಗ್ರೆಸ್‍ನ ಸಚಿವರಿಗೆ ಯಾವ ಯಾವ ಜಿಲ್ಲೆಗಳ ಉಸ್ತುವಾರಿ ಸಿಗಬಹುದು ಎಂಬದೂ ಪ್ರಸ್ತುತದ ಚರ್ಚೆಯಾಗಿದೆ. ಏಕೆಂದರೆ ಇಲ್ಲಿ ಆಯಾ ಪಕ್ಷಗಳು ಹೊಂದಿರುವ ಪ್ರಾಬಲ್ಯವೂ ಪರಿಗಣನೆಗೆ ಬರುವ ಸಾಧ್ಯತೆ ಇದೆ.

ಎರಡು ಪಕ್ಷಗಳು ಸೇರಿ ಸಮನ್ವಯ ಸಮಿತಿಯೊಂದನ್ನು ರಚಿಸಿಕೊಂಡಿದೆ. ಈ ಸಮಿತಿ ಹಾಗೂ ಮುಖ್ಯಮಂತ್ರಿಗಳ ವಿವೇಚನೆಯಂತೆ ಉಸ್ತುವಾರಿ ಸಚಿವ ಸ್ಥಾನದ ಹಂಚಿಕೆಯಾಗುವ ಸಾಧ್ಯತೆ ಇರುವದರಿಂದ ಸದ್ಯದ ಮಟ್ಟಿಗೆ ಎಲ್ಲವೂ ಪ್ರಶ್ನಾರ್ಹವಾಗಿಯೇ ಉಳಿದುಕೊಂಡಿದೆ.

ಕಾಂಗ್ರೆಸ್‍ನ ಸಂಭವನೀಯ ಸಚಿವರ ಪಟ್ಟಿಯಲ್ಲಿ ಈ ಹಿಂದೆ ಕೊಡಗು ಜಿಲ್ಲಾ ಉಸ್ತುವಾರಿಗಳಾಗಿದ್ದ ಕೆ.ಜೆ. ಜಾರ್ಜ್, ದಿನೇಶ್, ಗುಂಡೂರಾವ್, ತನ್ವೀರ್ ಸೇಠ್ ಅವರುಗಳ ಹೆಸರು ಇರುವದು ಮತ್ತೊಂದು ವಿಶೇಷ.

- ಶಶಿ ಸೋಮಯ್ಯ