ಪೊನ್ನಂಪೇಟೆ, ಜೂ. 4: ಜಾಗದ ಕಂದಾಯ ನಿಗದಿಪಡಿಸಲು ಮತ್ತು ಪರಿವರ್ತನೆಗೊಳಿಸಲು ಇದೀಗ ಕಂದಾಯ ಇಲಾಖೆ 1912 ನೇ ಇಸವಿಯ ಜಮಾಬಂದಿಯನ್ನು ಕಡ್ಡಾಯಗೊಳಿಸಿರುವ ಕ್ರಮ ಸರಿಯಲ್ಲ. ಕಂದಾಯ ನಿಗದಿ ಮತ್ತು ಜಾಗ ಪರಿವರ್ತನೆ ಕಡತಗಳನ್ನು ಜಮಾಬಂದಿಯ ನೆಪ ಹೇಳಿ ಉಪ ವಿಭಾಗಾಧಿಕಾರಿಗಳು ಹಿಂತಿರುಗಿಸುತ್ತಿದ್ದಾರೆ. ಇಲಾಖೆಯ ಇದೊಂದು ಜನವಿರೋಧಿ ನೀತಿಯಾಗಿದ್ದು, ಇದನ್ನು ತಕ್ಷಣ ಹಿಂಪಡೆಯುವಂತೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಆಗ್ರಹಿಸಿದ್ದಾರೆ.

ಪೊನ್ನಂಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2013ರಲ್ಲಿ ರಾಜ್ಯದಲ್ಲಿ ಬಿ.ಜೆ.ಪಿ. ಸರಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ಮಾಡಲಾಯಿತು. ಈ ತಿದ್ದುಪಡಿಯ ಹಿನ್ನೆಲೆಯಲ್ಲಿ ಬಾಣೆ ಸೇರಿದಂತೆ ಇನ್ನಿತರ ಜಾಗಕ್ಕೆ ಕಂದಾಯ ನಿಗದಿಪಡಿಸುವದು ಇಲಾಖೆಯ ಕರ್ತವ್ಯವಾಗಿದೆ. ಆದರೆ ಇದೀಗ ಕಂದಾಯ ಇಲಾಖೆ ಕಾನೂನನ್ನು ಗಾಳಿಗೆ ತೂರಿ ಜನರಿಗೆ ಕಿರುಕುಳ ನೀಡುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಇದು ಕಂದಾಯ ಇಲಾಖೆ ಜನತೆಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಕಿಡಿಕಾರಿದ್ದಾರೆ.

ಜಾಗದ ಕಂದಾಯ ನಿಗದಿಪಡಿಸಲು ಮತ್ತು ಜಾಗ ಪರಿವರ್ತನೆಗೊಳಿಸುವ ಜನರ ನೂರಾರು ಕಡತಗಳನ್ನು ಉ¥ Àವಿಭಾಗಾಧಿಕಾರಿಗಳು ಇತ್ತಿಚೇಗೆ ಹಿಂದಕ್ಕೆ ಕಳಿಸಿದ್ದಾರೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಹಲವಾರು ಬಡ ಜನರು ಇದರಿಂದ ಸಂಕಷ್ಟಕ್ಕೆ ಒಳಗಾಗಿದ್ದು, ಪ್ರತಿನಿತ್ಯ ಕಂದಾಯ ಕಚೇರಿಗಳಿಗೆ ಅಲೆದಾಡಿ ಸುಸ್ತಾಗಿ ಹೋಗಿದ್ದಾರೆ. ಉಪವಿಭಾಗಾಧಿಕಾರಿಗಳ ಈ ಕ್ರಮ ಇಲಾಖೆಯಲ್ಲಿ ಮತ್ತಷ್ಟು ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಂತಿದೆ. ಜನತೆ ಇದರಿಂದಾಗಿ ರೋಸಿ ಹೋಗಿದ್ದು, ಜನರ ತಾಳ್ಮೆಯ ಕಟ್ಟೆಯೊಡೆಯುವ ಮುನ್ನ ಕಂದಾಯ ಇಲಾಖಾಧಿಕಾರಿಗಳು ಎಚ್ಚೆತ್ತುಕೊಳ್ಳುವದು ಉತ್ತಮ ಎಂದು ಅಭಿಪ್ರಾಯಪಟ್ಟಿರುವ ಅವರು, ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೇ ಗಮನ ಹರಿಸಿ ಆದೇಶ ಹಿಂಪಡೆಯಲು ಕ್ರಮ ತೆಗೆದುಕೊಳ್ಳಬೇಕು. ಮುಂದಿನ 8 ದಿನಗೊಳಗಾಗಿ ಆದೇಶ ಹಿಂಪಡೆದು ಸಮಸ್ಯೆ ಪರಿಹರಿಸದಿದ್ದಲ್ಲಿ ಬಿ.ಜೆ.ಪಿ. ಪಕ್ಷದ ವತಿಯಿಂದ ಸಾರ್ವಜನಿಕರನ್ನು ಸಂಘಟಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದ್ದಾರೆ.

ಬಿ.ಜೆ.ಪಿ. ಮುಖಂಡರಾದ ಕೆ.ಬಿ. ಗಿರೀಶ್ ಗಣಪತಿ, ಮಲ್ಲಂಡ ಮಧು ದೇವಯ್ಯ, ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ಮತ್ತು ಪೊನ್ನಂಪೇಟೆಯ ಸ್ಥಾನಿಯ ಸಮಿತಿಯ ಅಧ್ಯಕ್ಷ ಮನು ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.