ಶನಿವಾರಸಂತೆ, ಜೂ. 3: ಪಟ್ಟಣದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಫಾತಿಮುನ್ನೀಸಾ ಹಾಗೂ ತ್ಯಾಗರಾಜ ಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮೋಹನ್ ಅವರುಗಳು 35 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕಾರಣ ಶಾಲಾ ಸಭಾಂಗಣದಲ್ಲಿ ಉಭಯ ಶಾಲಾಭಿವೃದ್ಧಿ ಸಮಿತಿ ವತಿಯಿಂದ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ ಮಾತನಾಡಿ, ಶಿಕ್ಷಕ ವೃತ್ತಿ ಅತಿ ಅಮೂಲ್ಯ ಸೇವೆಯಾಗಿದೆ. ವಿದ್ಯಾರ್ಥಿ ಭವಿಷ್ಯ ರೂಪಿಸುವ ಶಕ್ತಿಯೊಂದಿಗೆ ಸಮಾಜವನ್ನು ಬದಲಾಯಿಸುವ ಸಾಮಥ್ರ್ಯವೂ ಶಿಕ್ಷಕರಿಗಿದೆ. ಗುರು-ಶಿಷ್ಯ ಬಾಂಧವ್ಯದಿಂದಾಗಿ ನಿವೃತ್ತಿ ಬಳಿಕವೂ ಶಿಕ್ಷಕರು ಗೌರವಕ್ಕೆ ಪಾತ್ರರಾಗುತ್ತಾರೆ ಎಂದರು.
ಸೋಮವಾರಪೇಟೆ ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಶಿಕ್ಷಕ ವೃತ್ತಿಗಿರುವ ಗೌರವ ಬೇರೆ ಯಾವ ವೃತ್ತಿಗೂ ಇಲ್ಲ. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಕರು ನಿವೃತ್ತಿಯ ನಂತರವೂ ಸದಾ ವಂದ್ಯರು ಎಂದರು.
ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಮಾಲತಿ ಹಾಗೂ ಶನಿವಾರಸಂತೆ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ನಿರ್ಮಲಾ ಮಾತನಾಡಿದರು. ನಿವೃತ್ತ ಮುಖ್ಯ ಶಿಕ್ಷಕರನ್ನು ಸನ್ಮಾನಿಸಲಾಯಿತು.