ಮಡಿಕೇರಿ, ಜೂ. 3: ಬಂದೂಕು ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಡಿಕೇರಿಯ ಓಂಕಾರೇಶ್ವರ ದೇವಾಲಯ ಬಳಿಯ ಮನೆಯೊಂದರಿಂದ ಒಂದು ತಿಂಗಳ ಹಿಂದೆ 2 ಲಕ್ಷ ಮೌಲ್ಯದ 2 ಬಂದೂಕು ಹಾಗೂ 34 ಗ್ರಾಂ ಚಿನ್ನದ ಒಡವೆಗಳನ್ನು ಕಳವು ಮಾಡಿದ್ದ ಆರೋಪಿಗಳಾದ ಭಾಗಮಂಡಲ ಅಯ್ಯಂಗೇರಿ ಗ್ರಾಮದ ಅಶೋಕ್ ಹಾಗೂ ವಣಚಲು ಗ್ರಾಮದ ನಾಣಯ್ಯ ಎಂಬವರುಗಳನ್ನು ಪೊಲೀಸರು ಬಂಧಿಸಿದ್ದು, ಕಳವು ಮಾಡಿದ್ದ ಮಾಲನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.
ಎಸ್ಪಿ ರಾಜೇಂದ್ರ ಪ್ರಸಾದ್ ಅವರ ನಿರ್ದೇಶನದಂತೆ ಡಿವೈಎಸ್ಪಿ ಸುಂದರ್‍ರಾಜ್ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಸಿದ್ದಯ್ಯ, ಪ್ರೊಬೆಷನರಿ ಎಸ್ಪಿ ಯತೀಶ್, ಠಾಣಾಧಿಕಾರಿ ಚೇತನ್, ಸಿಬ್ಬಂದಿಗಳಾದ ಇಬ್ರಾಹಿಂ, ಸತೀಶ್, ತೀರ್ಥಕುಮಾರ್, ಶಿವರಾಜೇಗೌಡ, ಕನ್ನಿಕಾ, ಸುಧಾಮಣಿ, ಸುನಿಲ್, ಅನಿಲ್ ಇವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.