ಸೋಮವಾರಪೇಟೆ, ಜೂ. 2: ಮಕ್ಕಳಿಗೆ ವಿದ್ಯಾಭ್ಯಾಸದೊಂದಿಗೆ ಸಂಸ್ಕಾರ ಕಲಿಸುವದು ಮುಖ್ಯ. ಈ ನಿಟ್ಟಿನಲ್ಲಿ ಶಾಲೆಗಳು ಸಂಸ್ಕಾರ ಕಲಿಸುವ ಗುರುಕುಲಗಳಾಗಬೇಕು ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಹೇಳಿದರು. ಇಲ್ಲಿನ ಕಿಬ್ಬೆಟ್ಟ ರಸ್ತೆಯ ಆನೆಕೆರೆ ಬಳಿಯಿರುವ ಗಿರಿಧಾಮಕ್ಕೆ ಸ್ಥಳಾಂತರಗೊಂಡಿರುವ ಕ್ರಿಯೇಟಿವ್ ಅಕಾಡೆಮಿಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದು ಮಕ್ಕಳು ವಿದ್ಯಾವಂತ ರಾದರೆ ಮಾತ್ರ ಸಾಲದು. ಜೀವನದ ಸಂಸ್ಕಾರ ಇಲ್ಲದಿದ್ದರೆ ವಿದ್ಯೆ ವ್ಯರ್ಥ. ಪೋಷಕರು ತಮ್ಮ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಹೆಚ್ಚಿನ ಗಮನ ಹರಿಸಬೇಕು. ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡಬೇಕು ಎಂದು ಅವರು ಕಿವಿಮಾತು ನುಡಿದರು. ಐಗೂರಿನ ಪದ್ಮಾವತಿ ಸುಭಾಷ್ ಮತ್ತು ಕಿಬ್ಬೆಟ್ಟ ರಸ್ತೆಯ ನಿವಾಸಿ ಇಂದಿರಾ ತಿಮ್ಮಯ್ಯ ಅವರುಗಳು ನೂತನ ಕಟ್ಟಡವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್, ಜಾತ್ಯತೀತ ಜನತಾದಳ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್, ಗಿರಿಧಾಮದ ಮಾಲೀಕ ಸನತ್, ಕ್ರಿಯೇಟಿವ್ ಅಕಾಡೆಮಿ ಮುಖ್ಯಸ್ಥರಾದ ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ನಂತರ ಸರಸ್ವತಿ ಪೂಜೆ, ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮಗಳು ನಡೆಯಿತು. ಕ್ರಿಯೇಟಿವ್ ಅಕಾಡೆಮಿಯ ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಉಪಸ್ಥಿತರಿದ್ದರು.