ಮಡಿಕೇರಿ, ಜೂ. 2: ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ ಅಡಿಯಲ್ಲಿನ ವಿಸ್ತರಣಾ ಶಿಕ್ಷಣ ಘಟಕ, ಮಡಿಕೇರಿ ಮತ್ತು ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವಜೇನು ನೊಣ ದಿನಾಚರಣೆಯನ್ನು ಹಾಗೂ ಈ ಸಂಬಂಧ ಜೇನು ಕುಟುಂಬ ನಿರ್ವಹಣೆಯ ಪ್ರಾತ್ಯಕ್ಷಿಕೆಯನ್ನು ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆಯಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ರಾಮಕೃಷ್ಣ ಶಾರದಾಶ್ರಮ, ಪೊನ್ನಂಪೇಟೆಯ ಅಧ್ಯಕ್ಷ ಭೋಧಸ್ವರೂಪನಂದಾಜಿ ಅವರು ಜೇನು ಕೃಷಿ ಪರಿಸರಕ್ಕೆ ಬಹಳ ಪೂರಕವಾಗಿದ್ದು, ಉತ್ತಮ ಆದಾಯ ಪಡೆಯಲು ಒಂದು ಮಾರ್ಗವಾಗಿದೆ, ಕೊಡಗಿನಲ್ಲಿರುವ ಲಭ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ಎಲ್ಲರೂ ಜೇನು ಕೃಷಿಯನ್ನು ಕೈಗೊಳ್ಳುವಂತಾಗಲಿ, ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಸಿ ಜಿ ಕುಶಾಲಪ್ಪನವರು ವಿವಿಧ ಪರಿಸರ ಸೇವೆಗಳಲ್ಲಿ ಜೇನು ನೊಣದ ಪರಾಗಸ್ಪರ್ಶ ಸೇವೆ ಅತಿ ಪ್ರಮುಖವಾದುದೆಂದು ತಿಳಿಸುತ್ತಾ ಕೊಡಗಿನಲ್ಲಿ ಜೇನು ಕೃಷಿಯ ಅಭಿವೃದ್ಧಿಯ ಬಗ್ಗೆ ಅರಣ್ಯ ಮಹಾವಿದ್ಯಾಲಯ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ಮುಂದಿನ ದಿನಗಳಲ್ಲಿ ಅರಣ್ಯ ಮಹಾವಿದ್ಯಾಲಯದಲ್ಲಿ ಜೇನು ಕೃಷಿ ಕುರಿತು ಹೆಚ್ಚಿನ ಅಧ್ಯಯನ, ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳನ್ನು ಕೈಗೊಳ್ಳಲು ಪೂರಕ ಕ್ರಮ ಹಾಗೂ ರೂಪುರೇಷೆಗಳನ್ನು ಸಿದ್ದಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ನಂತರ ನಡೆದ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಜೇನು ಕುಟುಂಬದ ನಿರ್ವಹಣೆಯ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥ ಡಾ. ಆರ್.ಎನ್. ಕೆಂಚರೆಡ್ಡಿಯವರು ನೀಡಿದರು. ಜೇನು ಕುಟುಂಬದ ವಿಭಜನೆ ಒಟ್ಟು ಗೂಡಿಸುವದು, ಕೃತಕವಾಗಿ ಆಹಾರ ಒದಗಿಸುವದು, ಮಳೆಗಾಲದ ನಿರ್ವಹಣೆ, ಕೀಟ-ರೋಗ ಭಾಧೆ ನಿಯಂತ್ರಣ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು.

ಅರಣ್ಯ ಮಹಾವಿದ್ಯಾಲಂiÀiದ ಸಹಾಯಕ ಪ್ರಾಧ್ಯಾಪಕರಾದ ಡಾ. ಎಂ. ಜಡೆಯಗೌಡ ಅವರು ವಂದಿಸಿ, ಕಾರ್ಯಕ್ರಮ ನಿರೂಪಣೆಯನ್ನು ಡಾ. ಟಿ.ಎಸ್. ಗಣೇಶ್ ಪ್ರಸಾದ್ ನಡೆಸಿಕೊಟ್ಟರು.