ಸೋಮವಾರಪೇಟೆ, ಜೂ. 1: ತಾಲೂಕಿನ ಹರಪಳ್ಳಿ ಗ್ರಾಮದ ನಿವಾಸಿ, ಉದ್ಯಮಿಯಾಗಿರುವ ಹರಪಳ್ಳಿ ರವೀಂದ್ರ ಅವರು ಜೂನ್ 9 ರಂದು ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಿದ್ದಾರೆ ಎಂದು ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ. 9 ರಂದು ಸಂಜೆ 5 ಗಂಟೆಗೆ ಇಲ್ಲಿನ ಮನಸ್ವಿ ಚಿತ್ರಮಂದಿರದಲ್ಲಿ ಹರಪಳ್ಳಿ ರವೀಂದ್ರ ಅವರು ಪುಸ್ತಕವನ್ನು ವಿತರಿಸಲಿದ್ದಾರೆ. ಅರ್ಹ ಬಡ ವಿದ್ಯಾರ್ಥಿಗಳು ಶಾಲೆಗಳಿಂದ ವಿದ್ಯಾಭ್ಯಾಸದ ದೃಢೀಕರಣ ಪತ್ರ ಹಾಗೂ ಪುಸ್ತಕಗಳ ವಿವರಗಳೊಂದಿಗೆ ಪೋಷಕರೊಂದಿಗೆ ಹಾಜರಾಗಬೇಕು ಎಂದು ಮಾಹಿತಿಯಿತ್ತರು. ಕಳೆದ 15 ವರ್ಷಗಳಿಂದ ರವೀಂದ್ರ ಅವರು ಸೋಮವಾರಪೇಟೆ ಸುತ್ತಮುತ್ತಲಿನ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಲಕ್ಷಾಂತರ ರೂಪಾಯಿ ವ್ಯಯಿಸಿ ಪುಸ್ತಕಗಳನ್ನು ನೀಡುವ ಮೂಲಕ ವಿದ್ಯಾದಾನಿಯಾಗಿದ್ದಾರೆ. ಅರ್ಹ ಬಡ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುವ ಮೂಲಕ ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದ ಸದುದ್ದೇಶದಿಂದ ಈ ಕಾರ್ಯ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಜೂ. 20 ರಂದು ಜೇಸಿ ವೇದಿಕೆಯಲ್ಲಿ ಅಪರಾಹ್ನ 12 ಗಂಟೆಗೆ ಹರಪಳ್ಳಿ ರವೀಂದ್ರ ಅವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಸಂಘದ ವತಿಯಿಂದ ಹಮ್ಮಿಕೊಳ್ಳ ಲಾಗಿದೆ ಎಂದ ನಾಗರಾಜ್, ಹೆಚ್ಚಿನ ಮಾಹಿತಿಗಾಗಿ ಮೊ. 9483843215, 9448588209ನ್ನು ಸಂಪರ್ಕಿಸ ಬಹುದಾಗಿದೆ ಎಂದು ತಿಳಿಸಿದರು.
ಶೌಚಾಲಯಕ್ಕೆ ಆಗ್ರಹ: ತಾಲೂಕು ಕೇಂದ್ರದಲ್ಲಿರುವ ತಾಲೂಕು ಕಚೇರಿಗೆ ದಿನಂಪ್ರತಿ ನೂರಾರು ಮಂದಿ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಆಗಮಿಸುತ್ತಿದ್ದು, ಶೌಚಾಲಯದ ಕೊರತೆ ಎದುರಿಸುತ್ತಿದ್ದಾರೆ.
ಮಹಿಳೆಯರು ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದು, ಶೌಚಾಲಯ ನಿರ್ಮಿಸುವಂತೆ ಪಟ್ಟಣ ಪಂಚಾಯಿತಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ಯಾವದೇ ಸ್ಪಂದನೆ ಲಭಿಸಿಲ್ಲ.
ತಕ್ಷಣ ತಾಲೂಕು ತಹಶೀಲ್ದಾರ್ ಮತ್ತು ಪ.ಪಂ. ಆಡಳಿತ ಮಂಡಳಿ ಈ ಬಗ್ಗೆ ಗಮನ ಹರಿಸಿ ಶೌಚಾಲಯ ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ನಾಗರಾಜ್ ಆಗ್ರಹಿಸಿದರು.
ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಪಿ.ಕೆ. ಆನಂದ, ಪಿ.ಎಂ. ರವಿ, ಬಿ. ಶಿವಪ್ಪ, ಹೆಚ್.ಓ. ಪ್ರಕಾಶ್, ಪ್ರಸಾದ್ ಮೂರ್ತಿ, ಅಜಯ್ ಉಪಸ್ಥಿತರಿದ್ದರು.