ಗೋಣಿಕೊಪ್ಪಲು, ಜೂ. 1: ಹಾತೂರು ಶಾಲಾ ಮೈದಾನದಲ್ಲಿ ಜರುಗಿದ ಪ್ರಥಮ ವರ್ಷದ ಬಲಿಜ ಕ್ರೀಡೋತ್ಸವ ಸಂದರ್ಭ ಕೊಡಗು ಬಲಿಜ ಸಮಾಜ ಲಯನ್ಸ್ ಕ್ಲಬ್ ಇಂಟರ್‍ನ್ಯಾಷನಲ್, ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಸುಂದರನಗರ ಹಾಗೂ ಗೋಣಿಕೊಪ್ಪಲು ಲಯನ್ಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಹಾತೂರು ಶಾಲಾ ಮೈದಾನದಲ್ಲಿ ಬೆಂಗಳೂರು ನೇತ್ರಾಲಯ ತಂಡದ ವೈದ್ಯರು ಹಾಗೂ ತಾಂತ್ರಿಕ ತಜ್ಞರು ಸುಮಾರು 573 ಮಂದಿಯ ನೇತ್ರ ತಪಾಸಣೆ ನಡೆಸಿದರು. ಇದೇ ಸಂದರ್ಭ ಒಟ್ಟು 84 ಕನ್ನಡಕಗಳನ್ನು ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ಉಚಿತವಾಗಿ ವಿತರಿಸಲಾಯಿತು.

ಸಂಚಾರಿ ನೇತ್ರ ಚಿಕಿತ್ಸಾ ಘಟಕದ ವಾಹನದ ಮೂಲಕ ಎರಡು ದಿನವೂ ಉಚಿತ ನೇತ್ರ ತಪಾಸಣೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಡಾ. ಲಯನ್ ಬಿ.ಎಂ. ರವಿನಾಯ್ಡು, ಸುಂದರನಗರ ಲಯನ್ಸ್ ಸಂಸ್ಥೆಯ ಅಧ್ಯಕ್ಷೆ ಸುಧಾ ಬಾಬಾನಗರ್ ಮತ್ತು ಗೋಣಿಕೊಪ್ಪಲು ಲಯನ್ಸ್ ಸಂಸ್ಥೆಯ ಅಧ್ಯಕ್ಷ ಲಯನ್ ಸೋಮೇಯಂಡ ಪೂಣಚ್ಚ ಅವರ ನೇತೃತ್ವದಲ್ಲಿ ಶಿಬಿರ ನಡೆಯಿತು.

ರದ್ದಾದ ವಸ್ತು ಪ್ರದರ್ಶನ

ಹಾತೂರು ಶಾಲಾ ಕೊಠಡಿಗಳಲ್ಲಿ ಸುಮಾರು 200 ಯೋಧರು ವಾಸ್ತವ್ಯ ಹೂಡಿದ್ದು, ಕೊಠಡಿ ಸಮಸ್ಯೆ ಹಾಗೂ ಮಳೆಯ ಕಾರಣ ಮೂರು ವಸ್ತು ಪ್ರದರ್ಶನವನ್ನು ರದ್ದುಗೊಳಿಸಲಾಯಿತು. ಬೆಂಗಳೂರಿನ ಕಾಫಿ ಆರ್ಟ್ ಖ್ಯಾತಿಯ ಹಿಮಬಿಂದು ತಂಡ ತಾ. 26 ರಂದು ಗೋಣಿಕೊಪ್ಪಲಿಗೆ ಭೇಟಿ ನೀಡಿದ್ದರೂ ಹಿಂತಿರುಗಬೇಕಾಯಿತು. ವೀರಾಜಪೇಟೆಯ ಅಜಯ್ ನಾರಾಯಣ್‍ರಾವ್ ಅವರ ಪುರಾತನ ನಾಣ್ಯ, ನೋಟುಗಳ ಪ್ರದರ್ಶನ ಮತ್ತು ಕಲಾವಿದ ಸತೀಶ್ ಅವರ ಕಲಾಕೃತಿ ಪ್ರದರ್ಶನ, ಕಾವೇರಿ ಕಾಲೇಜು ಉಪನ್ಯಾಸಕ ತಿರುಮಲಯ್ಯ ಹಾಗೂ ನಾಯಕ್ ಅವರ ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಮಳೆಯ ಹಿನ್ನೆಲೆ ರದ್ದುಪಡಿಸಲಾಯಿತು. ಮಳೆಯಲ್ಲಿಯೇ ಪುರುಷರ, ಮಹಿಳೆಯರ ಹಗ್ಗಜಗ್ಗಾಟ, ಸಂಗೀತ ಕುರ್ಚಿ ಹಾಗೂ ಕ್ರಿಕೆಟ್ ಪಂದ್ಯಾಟಗಳು ನಡೆದವು.

ರೂ. 60 ಸಾವಿರ ನಗದು ಬಹುಮಾನ ವಿತರಣೆ

ಪ್ರಥಮ ವರ್ಷದ ಕ್ರೀಡೋತ್ಸವ ವಿಜೇತರಿಗೆ ಸುಮಾರು ರೂ. 60 ಸಾವಿರ ನಗದು ಬಹುಮಾನ ವಿತರಿಸಲಾಯಿತು. ಕ್ರಿಕೆಟ್ ಪ್ರಮುಖ ಆಕರ್ಷಣೆಯಾಗಿದ್ದು, ಪ್ರದರ್ಶನ ಪಂದ್ಯಾಟದ ವಿಜೇತರು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ರನ್ನರ್ಸ್ ಕೊಡಗು ಬಲಿಜ ಸಮಾಜ ಆರೆಂಜ್ ತಂಡ, ಟೂರ್ನಿ ವಿಜೇತ ಕೂರ್ಗ್ ಬಾಯ್ಸ್ ಟಸ್ಕರ್ ತಂಡಕ್ಕೆ ರೂ. 15,000 ಹಾಗೂ ರನ್ನರ್ಸ್ ತಿತಿಮತಿ ತಂಡಕ್ಕೆ ರೂ. 10,000 ನಗದು ಒಳಗೊಂಡಂತೆ ಹಗ್ಗಜಗ್ಗಾಟ ಮತ್ತು ಸಂಗೀತ ಕುರ್ಚಿ ಬಹುಮಾನ ವಿಜೇತ ತಂಡಕ್ಕೂ ಪಾರಿತೋಷಕದೊಂದಿಗೆ ನಗದು ಬಹುಮಾನ ವಿತರಿಸಲಾಯಿತು.