ಭಾಗಮಂಡಲ, ಮೇ 31: ಇಲ್ಲಿನ ತ್ರಿವೇಣಿ ಸಂಗಮದ ಬಳಿ ಪ್ರವಾಸಿಗರು ದೇವಾಲಯದ ಕಾವಲುಗಾರನ ಮೇಲೆ ಹಲ್ಲೆ ನಡೆಸಿದ ಪ್ರಕರಣ ದಾಖಲಾಗಿದೆ.
ಬುಧವಾರ ಬೆಳಿಗ್ಗೆ ಪ್ರವಾಸಿಗರ ಗುಂಪೊಂದು ತ್ರಿವೇಣಿ ಸಂಗಮದ ಬಳಿ ಸ್ನಾನ ಮಾಡುತ್ತಿರುವದನ್ನು ಹಾಗೂ ಬಟ್ಟೆ ಒಣಗಿಸುವದನ್ನು ಗಮನಿಸಿದ ದೇವಾಲಯದ ಕಾವಲುಗಾರ ಪ್ರವಾಸಿಗರನ್ನು ಪ್ರಶ್ನಿಸಿ ಕ್ಷೇತ್ರದಲ್ಲಿ ಸ್ನಾನ ಮಾಡುವದು, ಉಡುಪುಗಳನ್ನು ಹಾಕಬಾರದು ಎಂದು ತಾಕೀತು ಮಾಡಿದಾಗ ಬಸ್ಸಿನಲ್ಲಿದ್ದ ಯುವತಿಯರು ಹಾಗೂ ಯುವಕರು ಹಲ್ಲೆ ಮಾಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಸಾರ್ವಜನಿಕರು ಭಾಗಮಂಡಲ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ಅಸಭ್ಯವಾಗಿ ನಿಂದಿಸಿರುವ ಐದು ಮಂದಿಯ ಮೇಲೆ ಕಾನೂನು ಕ್ರಮ ಕೈಗೊಂಡಿದ್ದಾರೆ. ಪ್ರವಾಸೋದ್ಯಮ ದಿಂದ ಕ್ಷೇತ್ರ ಮಲಿನವಾಗುತ್ತಿದೆ. ಭಾಗಮಂಡಲವನ್ನು ಧಾರ್ಮಿಕ ಕ್ಷೇತ್ರವನ್ನಾಗಿಸಬೇಕು ಎಂಬದು ಸ್ಥಳೀಯರ ಬೇಡಿಕೆ.
ಆದರೆ ಸ್ಥಳಕ್ಕೆ ಆಗಮಿಸುತ್ತಿರುವ ಪ್ರವಾಸಿಗರು ಅಸಭ್ಯವಾಗಿ ವರ್ತಿಸು ತ್ತಿದ್ದು ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.