ಕೂಡಿಗೆ, ಮೇ 31: ಸಮೀಪದ ವಾಲ್ನೂರು-ತ್ಯಾಗತ್ತೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2018-19ನೇ ಸಾಲಿನ ಸೋಮವಾರಪೇಟೆ ತಾಲೂಕು ಮಟ್ಟದ ಶಾಲಾ ದಾಖಲಾತಿ ಆಂದೋಲನ ಹಾಗೂ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು.

ವಿಶೇಷ ದಾಖಲಾತಿ ಆಂದೋಲನದ ಅಂಗವಾಗಿ ಗ್ರಾಮಗಳ ಸಾರ್ವಜನಿಕರಲ್ಲಿ ಮಕ್ಕಳನ್ನು ಶಾಲೆಗಳಿಗೆ ದಾಖಲಾತಿ ಮಾಡುವಂತೆ ಅರಿವು ಮೂಡಿಸಲಾಯಿತು. ಪ್ರಾರಂಭೋತ್ಸವದ ಅಂಗವಾಗಿ ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ, ಸಹಿ ಹಂಚಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲೆಗೆ 1ನೇ ತರಗತಿಗೆ ದಾಖಲಾದ ಮಗು 8ನೇ ತರಗತಿವರೆಗೂ ಇದೇ ಶಾಲೆಯಲ್ಲಿ ಓದಬಹುದು. ಮಗುವಿನ ಅಗತ್ಯತೆಯನ್ನು ಪೂರೈಸುವದು ಪೋಷಕರ ಕರ್ತವ್ಯವಾಗಿದೆ. ಸರ್ಕಾರ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕಾಗಿ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಮಾಲತಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಲಕ್ಷ್ಮಿಯವರು ವಹಿಸಿದ್ದರು.

ಈ ಸಂದರ್ಭ ದಾನಿಗಳಾದ ಮುಳ್ಳುಸೋಗೆ ಗ್ರಾ.ಪಂ. ಉಪಾಧ್ಯಕ್ಷ ತಾರಾನಾಥ್ ಉಚಿತ ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು. ನಂತರ ಸರಕಾರದಿಂದ ಸಿಗುವ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಶೂ ಸಾಕ್ಸ್‍ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕ ಹೆಚ್.ಕೆ. ಕುಮಾರ್, ಸಹ ಶಿಕ್ಷಕರಾದ ಆಶಾಮಣಿ, ಚೇತನ್ ಕುಮಾರ್, ಜಯಲಕ್ಷ್ಮಿ, ಸರೋಜ, ಗಂಗಮ್ಮ ಇದ್ದರು. ಕಾರ್ಯಕ್ರಮವನ್ನು ಶೋಭ, ಸುರೇಶ್ ನಿರ್ವಹಿಸಿದರು.