ಸೋಮವಾರಪೇಟೆ, ಮೇ 30: ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ತಡೆಗೋಡೆಯೊಂದಿಗೆ ಬರೆ ಕುಸಿದ ಪರಿಣಾಮ ವಾಸದ ಮನೆಗೆ ಹಾನಿಯಾಗಿರುವ ಘಟನೆ ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಗ್ರಾಮದಲ್ಲಿ ನಡೆದಿದೆ.
ಕಾಜೂರು ನಿವಾಸಿ ಕೃಷ್ಣಕುಟ್ಟಿ ಎಂಬವರಿಗೆ ಸೇರಿದ ವಾಸದ ಮನೆಯ ಹಿಂಭಾಗ ಸ್ವಂತ ಖರ್ಚಿನಲ್ಲಿ ನಿರ್ಮಿಸಿಕೊಂಡಿದ್ದ ತಡೆಗೋಡೆ ನಿನ್ನೆ ರಾತ್ರಿ 12.30ಕ್ಕೆ ಸುರಿದ ಭಾರೀ ಮಳೆಗೆ ಕುಸಿದುಬಿದ್ದಿದೆ. ಇದರಿಂದಾಗಿ ವಾಸದ ಮನೆಗೆ ಅಳವಡಿಸಿದ್ದ 20ಕ್ಕೂ ಅಧಿಕ ಸಿಮೆಂಟ್ ಶೀಟ್‍ಗಳು, ಗೃಹೋಪ ಯೋಗಿ ವಸ್ತುಗಳು ಹಾನಿಗೀಡಾಗಿವೆ.
ಇದರೊಂದಿಗೆ ಇವರ ಮನೆಯ ಹಿಂಭಾಗ ಈಗಷ್ಟೇ ನಿರ್ಮಿಸಲಾಗುತ್ತಿರುವ ವಿನೋದ್ ಎಂಬವರಿಗೆ ಸೇರಿದ ಆರ್‍ಸಿಸಿ ಮನೆಯೂ ಅಪಾಯದಂಚಿನಲ್ಲಿದೆ. ಮನೆಯ ಮುಂಭಾಗ ನಿರ್ಮಿಸಲಾಗಿರುವ ಪಿಲ್ಲರ್‍ಗಳ ಅಡಿಯಲ್ಲಿನ ಮಣ್ಣು ಕುಸಿದಿದ್ದು, ಪಿಲ್ಲರ್ ಕಳಚಿಕೊಳ್ಳುವ ಭೀತಿ ಎದುರಾಗಿದೆ.
ಸ್ಥಳಕ್ಕೆ ತಾಲೂಕು ಪಂಚಾಯಿತಿ ಸದಸ್ಯೆ ಸಬಿತ ಚನ್ನಕೇಶವ, ಗ್ರಾಮ ಪಂಚಾಯಿತಿ ಸದಸ್ಯ ಗೋಪಾಲಕೃಷ್ಣ, ಗ್ರಾಮ ಲೆಕ್ಕಿಗರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಂಪರ್ಕ ಕಡಿತ
ಗೋಣಿಕೊಪ್ಪ ವರದಿ: ಹುದಿಕೇರಿಯಿಂದ ಬಿರುನಾಣಿಗೆ ಸಂಪರ್ಕ ಬೆಸೆಯಲು ಹೈಸೊಡ್ಲೂರುವಿ ನಲ್ಲಿ ನಿರ್ಮಿಸಿರುವ ತಾತ್ಕಾಲಿಕ ಸೇತುವ ಮೇಲೆ ನೀರು ಹರಿಯುತ್ತಿರು ವದರಿಂದ ಸಂಪರ್ಕ ಕಡಿತಗೊಂಡಿದೆ.
ಮಂಗಳವಾರ ಸುರಿದ ಮಳೆಯಿಂದಾಗಿ ಸೇತುವೆ ಮೇಲೆ ನೀರು ಹರಿಯುತ್ತಿದೆ. ಇದರಿಂದಾಗಿ ಬಾಡಗರಕೇರಿ, ಪೊರಾಡ್, ಬಿರುನಾಣಿ, ಪರಕಟಗೇರಿ, ಪೂಕಳಕ್ಕೆ ಸಂಪರ್ಕ ಬೆಸೆಯಲು ಟಿ. ಶೆಟ್ಟಿಗೇರಿ ಮಾರ್ಗವನ್ನು ಅನುಸರಿಸಬೇಕಿದೆ.
ಈ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ರಸ್ತೆ ನಿರ್ಮಾಣವಾಗುತ್ತಿದ್ದು, ನೂತನ ಸೇತುವೆ ನಿರ್ಮಾಣ ಹಂತದಲ್ಲಿದೆ. ಇದರಿಂದಾಗಿ ಸ್ಥಳೀಯರೇ ಕಲ್ಲು, ಮರದ ದಿಣ್ಣೆ, ಮಣ್ಣು ಬಳಸಿ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಂಡಿದ್ದರು. ಇದೀಗ ಮಳೆಯ ಪ್ರಮಾಣ ಹೆಚ್ಚಾಗಿ ವಾಹನ ಸಂಚಾರಕ್ಕೆ ತಡೆಯಾಗಿದೆ.
ಮನೆ ಜಖಂ
ಗೋಣಿಕೊಪ್ಪಲು: ಗೋಣಿಕೊಪ್ಪ ಸಮೀಪದ ಅರುವತೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿಹೆಚ್‍ಎಸ್ ಕಾಲೋನಿ ಬಳಿ ಇರುವ ಕಾಫಿ ಮಂಡಳಿಯ ಕಾರ್ಮಿಕರ ಲೈನ್ ಮನೆಯ ಮೇಲೆ ಬಾರಿ ಗಾತ್ರದ ಮರ ಉರುಳಿದ ಪರಿಣಾಮ ಮನೆ ಸಂಪೂರ್ಣ ಜಖಂಗೊಂಡಿದ್ದು ಯಾವದೇ ಪ್ರಾಣಾಪಾಯ ಸಂಭವಿಸಿಲ್ಲ.
ಮಂಗಳವಾರ ಸುರಿದ ಭಾರೀ ಮಳೆ ಹಾಗೂ ಗಾಳಿಗೆ ಬೃಹತ್ ಗಾತ್ರದ ಕಾಡು ಮರ ಉರುಳಿ ಬಿದ್ದಿದ್ದು ಮನೆಯಲ್ಲಿ ಯಾರು ಇಲ್ಲದ್ದರಿಂದ ಅನಾಹುತ ತಪ್ಪಿದಂತಾಗಿದೆ. ಮನೆಯ ಹೊರ ಭಾಗದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಕೂಡ ಜಖಂಗೊಂಡಿದ್ದು ಮನೆಯಲ್ಲಿದ್ದ ಸಾಮಾಗ್ರಿಗಳು ಸಂಪೂರ್ಣ ಹಾಳಾಗಿವೆ.
ಕಾಫಿ ಮಂಡಳಿಯಲ್ಲಿರುವ ಬೃಹತ್ ಮರಗಳ ರೆಂಬೆಗಳನ್ನು ಕಪಾತ್ ಮಾಡಿಸುವಂತೆ ಸ್ಥಳೀಯ ಪ್ರತಿಭಾ ಯುವಕ ಸಂಘದ ಪಧಾಧಿಕಾರಿಗಳು ಕಾಫಿ ಮಂಡಳಿಯ ಹಿರಿಯ ಅಧಿಕಾರಿಗಳಿಗೆ ಈ ಹಿಂದೆ ಹಲವು ಬಾರಿ ಲಿಖಿತ ಮನವಿ ಮೂಲಕ ದೂರು ಸಲ್ಲಿಸಿದ್ದರೂ ಈ ಬಗ್ಗೆ ಕ್ರಮ ಕೈಗೊಂಡಿರಲಿಲ್ಲ ಎಂದು ಪ್ರತಿಭಾ ಯುವಕ ಸಂಘದ ಪದಾಧಿಕಾರಿಗಳು ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಶನಿವಾರಸಂತೆ: ಪಟ್ಟಣ ಹಾಗೂ ಹೋಬಳಿಯಾದ್ಯಂತ ಮಂಗಳವಾರ ಉತ್ತಮ ಮಳೆಯಾಗಿದೆ. ಬೆಳಿಗ್ಗೆ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನ 2 ರಿಂದ ತುಂತುರು ಮಳೆ ಸುರಿಯಲಾರಂಭಿಸಿತು. ಮಧ್ಯೆ ಕೆಲ ಕಾಲ ಬಿಡುವು ನೀಡಿದ ಮಳೆ ಸಂಜೆ 5ರ ನಂತರ ಬಿರುಸಾಗಿ ಸುರಿಯಲಾರಂಭಿಸಿತು.
ಸಮೀಪದ ದುಂಡಳ್ಳಿ, ಕಾಜೂರು, ಮಾದ್ರೆ, ಬಿಳಾಹ, ಗುಡುಗಳಲೆ, ಗೋಪಾಲಪುರ, ರಾಮನಳ್ಳಿ, ನಂದಿಗುಂದ, ಮೂದರವಳ್ಳಿ, ಅವರೆದಾಳು ಗ್ರಾಮಗಳಲ್ಲೂ ಉತ್ತಮ ಮಳೆಯಾಗಿದೆ. ಈ ವ್ಯಾಪ್ತಿಯಲ್ಲಿ ವರ್ಷಾರಂಭದಿಂದ ಈ ವರೆಗೆ 9 ಇಂಚು ಮಳೆಯಾಗಿದೆ.
ಕೊಡ್ಲಿಪೇಟೆ ಹೋಬಳಿಯ ಬ್ಯಾಡಗೊಟ್ಟ, ಚಿಕ್ಕಕುಂದ, ಬೆಸೂರು, ದೊಡ್ಡಭಂಡಾರ, ಚಿಕ್ಕಭಂಡಾರ ಮೊದಲಾದ ಗ್ರಾಮಗಳಲ್ಲೂ ಮಧ್ಯಾಹ್ನದ ನಂತರ ಸಾಧಾರಣ ಮಳೆಯಾಗಿದೆ. ವರ್ಷಾರಂಭದಿಂದ ಈವರೆಗೆ 15 ಇಂಚು ದಾಖಲೆ ಮಳೆಯಾಗಿದೆ.
ಮಾರ್ಚ್ ತಿಂಗಳಲ್ಲೂ ಉತ್ತಮ ಮಳೆಯಾಗಿತ್ತು. ಇದೀಗ ಮೇ ನಲ್ಲೂ ಸುರಿಯುತ್ತಿರುವ ಮಳೆ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿಯಾದ್ಯಂತ ರೈತಾಪಿ ವರ್ಗದ ಸಂತಸಕ್ಕೆ ಕಾರಣವಾಗಿದೆ. ಉತ್ಸಾಹದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.