ಕೂಡಿಗೆ, ಮೇ 30 : ಕುಶಾಲನಗರದಿಂದ ತೊರೆನೂರಿನತ್ತ ಹೋಗುತ್ತಿದ್ದ ಬೈಕ್ ಮತ್ತು ಕೂಡಿಗೆ ಕಡೆಯಿಂದ ಕುಶಾಲನಗರಕ್ಕೆ ಬರುತ್ತಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ತೊರೆನೂರಿನತ್ತ ಹೋಗುತ್ತಿದ್ದ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಮಂಗಳವಾರ ರಾತ್ರಿ ವೀರಭೂಮಿ ಸಮೀಪ ನಡೆದಿದೆ.
ತೊರೆನೂರು ಗ್ರಾಮದ ಪುಟ್ಟಮ್ಮ (ಮೀನಾಕ್ಷಿ) ಮತ್ತು ದಿ.ಮಹದೇವರ ಎಂಬವರ ಪುತ್ರ ರಕ್ಷಿತ್(24) ಮೃತಪಟ್ಟಿರುವ ದುರ್ದೈವಿ.
ಬೈಕ್ ಅಪಘಾತದಲ್ಲಿ ತಲೆ ಮತ್ತು ಎದೆ ಭಾಗಕ್ಕೆ ತೀವ್ರವಾಗಿ ಗಾಯಗೊಂಡ ರಕ್ಷಿತ್ನನ್ನು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಸಾಗಿಸುವಾಗ ಮಾರ್ಗಮಧ್ಯೆ ಅಸುನೀಗಿದ್ದಾನೆ.
ಎದುರಿನಿಂದ ಡಿಕ್ಕಿ ಹೊಡೆದ ಬೈಕ್ ಸವಾರ ಮಂಜುನಾಥ್ಗೂ ತಲೆ ಮತ್ತು ಎದೆ ಭಾಗಕ್ಕೆ ಪೆಟ್ಟಾಗಿದ್ದು, ಮೈಸೂರಿಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎರಡೂ ಬೈಕ್ಗಳ ಹಿಂಬದಿ ಸವಾರರಿಗೂ ಸಣ್ಣಪುಟ್ಟ ಗಾಯಗಳಾಗಿವೆ.
ಮೃತ ರಕ್ಷಿತ್ ಮಂಗಳೂರು ವಿಶ್ವವಿದ್ಯಾನಿಲಯ ಚಿಕ್ಕಅಳುವಾರದ ಸ್ನಾತಕೋತ್ತರ ಕೇಂದ್ರದಲ್ಲಿ ಅಂತಿಮ ಎಂ.ಎ ಇತಿಹಾಸ ವಿಭಾಗದಲ್ಲಿ ವ್ಯಾಸಂಗ ಮಾಡಿ ಕಳೆದವಾರವಷ್ಟೆ ಪರೀಕ್ಷೆಯನ್ನು ಬರೆದಿದ್ದ.
ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ಶವವನ್ನು ವಾರಸುದಾರರಿಗೆ ಒಪ್ಪಿಸಲಾಯಿತು.