ಸೋಮವಾರಪೇಟೆ,ಮೇ.28: ಅಧಿಕಾರಕ್ಕೆ ಬರುತ್ತಿದ್ದಂತೆ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವದಾಗಿ ಘೋಷಿಸಿದ್ದ ಜೆಡಿಎಸ್ ಅಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರು ವಚನಭ್ರಷ್ಟರಾಗಿದ್ದು, ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಆಗ್ರಹಿಸಿದರು.

ಇಲ್ಲಿನ ಜೇಸೀ ವೇದಿಕೆಯಲ್ಲಿ ಕಾರ್ಯಕರ್ತರೊಂದಿಗೆ ಪ್ರತಿಭಟನಾ ಧರಣಿ ಕುಳಿತಿದ್ದ ಶಾಸಕ ರಂಜನ್ ಮಾಧ್ಯಮದವರೊಂದಿಗೆ ಮಾತನಾಡಿ, ಚುನಾವಣೆ ಪೂರ್ವದಲ್ಲೇ ಕೊಡಗಿಗೆ ಭೇಟಿ ನೀಡಿದ್ದ ಕುಮಾರಸ್ವಾಮಿ ಅವರು, ತಾನು ಅಧಿಕಾರಕ್ಕೆ ಬರುತ್ತಿದ್ದಂತೆ ರಾಜ್ಯದ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುತ್ತೇನೆ. ಪಿಂಚಣಿ ಹಣವನ್ನು 6 ಸಾವಿರಕ್ಕೆ ಏರಿಸುತ್ತೇನೆ ಎಂದು ವಚನ ನೀಡಿದ್ದರು. ಇದೀಗ ಮುಖ್ಯಮಂತ್ರಿಯಾಗಿದ್ದು ಕೊಟ್ಟ ಮಾತನ್ನು ಈಡೇರಿಸದೇ ವಚನ ಭ್ರಷ್ಟರಾಗಿದ್ದಾರೆ ಎಂದು ಟೀಕಿಸಿದರು.

ಈ ಹಿಂದೆ 20-20 ಸರ್ಕಾರವಿದ್ದಾಗ ಧರಂಸಿಂಗ್, ನಂತರ ಯಡಿಯೂರಪ್ಪ ಅವರಿಗೆ ನೀಡಿದ್ದ ಮಾತು ಮುರಿದಿರುವ ಕುಮಾರಸ್ವಾಮಿ ಅವರು ಇದೀಗ ಕರ್ನಾಟಕದ ಜನತೆಗೆ ನೀಡಿದ್ದ ಮಾತಿಗೆ ಬದ್ಧರಾಗದೇ ವಚನ ಭ್ರಷ್ಟರಾಗಿದ್ದಾರೆ. ಜನತೆಗೆ ದೋಖಾ ಮಾಡುವ ಸರ್ಕಾರ ಹಾಗೂ ಮುಖ್ಯಮಂತ್ರಿ ಆ ಸ್ಥಾನದಲ್ಲಿ ಇರಲು ಅರ್ಹರಲ್ಲ. ತಕ್ಷಣ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಪೂರ್ಣ ಬಹುಮತ ಬಂದಿಲ್ಲ ಎಂದು ಹೇಳುತ್ತಿರುವ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾದರೂ ಯಾಕೆ? ಸಮ್ಮಿಶ್ರ ಸರ್ಕಾರ ಎಂದು ಜನತೆಗೆ ನೀಡಿದ್ದ ಭರವಸೆ ಈಡೇರಿಸದೇ ನುಣುಚಿಕೊಳ್ಳಲು ಸಾಧ್ಯವಿಲ್ಲ. ರೈತರು ಹಾಗೂ ಸ್ತ್ರೀ ಶಕ್ತಿ ಸಂಘಗಳ ಸಾಲವನ್ನು ಸಂಪೂರ್ಣ ಮನ್ನಾ ಮಾಡುವವರೆಗೂ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ರಂಜನ್ ತಿಳಿಸಿದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುತ್ತಿದ್ದಂತೆ ರಾಜ್ಯದ ಸಹಕಾರ ಸಂಘಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರು ಮಾಡಿರುವ ರೂ. 1ಲಕ್ಷ ವರೆಗಿನ ಸಾಲವನ್ನು ಮನ್ನಾ ಮಾಡಿ ಆದೇಶ ನೀಡಿದ್ದಾರೆ. ಈ ಆದೇಶವನ್ನು ಜಾರಿಗೆ ತರಲು ಕುಮಾರಸ್ವಾಮಿ ಅವರು ಮುಂದಾಗಿಲ್ಲ. ರೈತರು, ಸ್ತ್ರೀಶಕ್ತಿ ಸಂಘದ ಪರವಾಗಿ ಮುಂದಿನ ದಿನಗಳಲ್ಲೂ ಹೋರಾಟ ನಡೆಯಲಿದೆ ಎಂದು ಶಾಸಕರು ನುಡಿದರು.