ಕೂಡಿಗೆ, ಮೇ 28: ಹೆಬ್ಬಾಲೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳೆಗೋಟೆ ಗ್ರಾಮದಲ್ಲಿ ಮೋಟಾರ್‍ನ ಟ್ರಾನ್ಸ್‍ಫಾರಂ ರಿಪೇರಿಯಾಗಿದ್ದು ಕಳೆದ ಒಂದು ವಾರದಿಂದ ನೀರಿಲ್ಲದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ.

ಜಂಟಿ ಗ್ರಾಮಗಳಾಗಿರುವ ಹಳೆಗೋಟೆ ಮತ್ತು 6ನೇ ಹೊಸಕೋಟೆ ಗ್ರಾಮಗಳ ಸುಮಾರು 450 ಕ್ಕೂ ಅಧಿಕ ಕುಟುಂಬಗಳು ಕುಡಿಯುವ ನೀರಿಗಾಗಿ ಈ ಕೊಳವೆ ಬಾವಿಯನ್ನು ಅವಲಂಭಿಸಿದ್ದಾರೆ. ಆದರೆ, ಟ್ರಾನ್ಸ್‍ಫಾರಂ ರಿಪೇರಿಯಾಗಿ ಒಂದು ವಾರವೇ ಕಳೆದಿದ್ದು, ಹಲವು ಭಾರಿ ಗ್ರಾಮಸ್ಥರು ದುರಸ್ಥಿ ಮಾಡುವಂತೆ ಮನವಿ ಮಾಡಿದ್ದರೂ ಗ್ರಾಮ ಪಂಚಾಯ್ತಿಯ ಅಧಿಕಾರಿಯಾಗಲೀ, ಜನಪ್ರತಿನಿಧಿಗಳಾಗಿ ದುರಸ್ಥಿ ಕಾರ್ಯಕ್ಕೆ ಮುಂದಾಗಿಲ್ಲ.

ಗ್ರಾಮದಲ್ಲಿ ಮೂರು ಅವೈಜ್ಞಾನಿಕವಾಗಿರುವ ಬೋರ್‍ವೆಲ್‍ಗಳಿದ್ದರೂ ಅಲ್ಪಸಲ್ಪ ನೀರು ಸಿಕ್ಕರೂ ಸಹ ಆ ನೀರು ಕುಡಿಯಲು ಯೋಗ್ಯವಾಗಿಲ್ಲ. ಕೊಳವೆ ಬಾವಿಗಳಲ್ಲಿಯೂ ನೀರು ಸಿಗದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಜಟಿಲಗೊಂಡಿದೆ.

ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶೀಘ್ರವಾಗಿ ಟ್ರಾನ್ಸ್‍ಫಾರಂ ಅನ್ನು ದುರಸ್ಥಿ ಪಡಿಸಿ ಕುಡಿಯಲು ನೀರೊದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.