ಕುಶಾಲನಗರ, ಮೇ 29: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸ್ವಚ್ಛ ಕಾವೇರಿ ಹಾಗೂ ಸ್ವಚ್ಛ ಪರಿಸರದ ಬಗ್ಗೆ ನಾಗರಿಕರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸಲು ಜೂನ್ 5 ರಂದು ಮೈಸೂರಿನಿಂದ ಶ್ರೀರಂಗಪಟ್ಟಣ ತನಕ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ. ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಶ್ರೀರಂಗಪಟ್ಟಣ ಪುರಸಭೆ, ಅಖಿಲ ಭಾರತೀಯ ಸನ್ಯಾಸಿ ಸಂಘ, ಶಾಶ್ವತಿ ಧಾರ್ಮಿಕ ಕ್ರಿಯಾ ಕೇಂದ್ರ ಮತ್ತು ಕಾವೇರಿ ರಿವರ್ ಪ್ರೊಟೆಕ್ಷನ್ ಟ್ರಸ್ಟ್ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ರಾಜ್ಯ ಸಂಚಾಲಕ ಎಂ.ಎನ್.ಚಂದ್ರಮೋಹನ್ ತಿಳಿಸಿದ್ದಾರೆ.

ಮೈಸೂರು ಅರಮನೆಯ ಆಂಜನೇಯ ದೇವಾಲಯ ಬಳಿಯಿಂದ ಪೂಜೆ ಸಲ್ಲಿಸಿ ನಂತರ ಬೆಳಿಗ್ಗೆ 7 ಗಂಟೆಗೆ ಸುತ್ತೂರು ಮಠಾಧೀಶರಾದ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಕರ್ನಾಟಕ ಮತ್ತು ತಮಿಳುನಾಡು ಪ್ರಾಂತ್ಯಗಳ ಸಂಯೋಜಕರಾದ ವೇ.ಬ್ರ. ಡಾ. ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ ನಡೆಯಲಿರುವ ಜಾಥಾದಲ್ಲಿ ಶ್ರೀ ರಮಾನಂದ ಸ್ವಾಮೀಜಿ, ಶ್ರೀ ಗಣೇಶ ಸ್ವರೂಪಾನಂದ ಸ್ವಾಮೀಜಿ, ಅರಮೇರಿ ಕಳಂಚೇರಿ ಮಠಾಧೀಶ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ, ತೊರೆನೂರು ಮಠಾಧೀಶ ಶ್ರೀ ಮಲ್ಲೇಶ ಸ್ವಾಮೀಜಿ ಸಹಿತ ಇತರ ಸಾಧು-ಸಂತರುಗಳು ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ.