ಸೋಮವಾರಪೇಟೆ, ಮೇ 29: ಓಆರ್‍ಎಸ್ ಮತ್ತು ಝಿಂಕ್ ಅತಿಸಾರ ಭೇದಿಗೆ ಪರಿಣಾಮಕಾರಿ ಚಿಕಿತ್ಸೆಯಾಗಿದ್ದು, ಮಗುವಿನ ಉತ್ತಮ ಆರೋಗ್ಯಕ್ಕೆ ತಾಯಿಯ ಮುಂಜಾಗ್ರತೆ ಅವಶ್ಯಕವಾಗಿದೆ ಎಂದು ತಹಶೀಲ್ದಾರ್ ವಿರೇಂದ್ರ ಬಾಡ್ಕರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಆರ್‍ಸಿಹೆಚ್ ಕಾರ್ಯಕ್ರಮದಡಿಯಲ್ಲಿ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದ್ದ ಅತಿಸಾರ ಭೇದಿ ನಿಯಂತ್ರಣ ಕುರಿತು ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರ ಸಾರ್ವಜನಿಕ ಆಸ್ಪತ್ರೆಗಳ ಮೂಲಕ ಮಗು ಮತ್ತು ತಾಯಂದಿರಿಗೆ ನೀಡುವ ವಿಶೇಷ ಸೌಲಭ್ಯಗಳು ಹಾಗೂ ಮಾತ್ರೆಗಳನ್ನು ವೈದ್ಯರ ಸೂಚನೆಯ ಮೇರೆಗೆ ಪಡೆದುಕೊಂಡರೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು. ತಾಲೂಕು ಆರೋಗ್ಯಾಧಿಕಾರಿ ರವಿಕುಮಾರ್ ಮಾತನಾಡಿ, ಝಿಂಕ್ ಮಾತ್ರೆಯನ್ನು ಸೇವಿಸುವದರಿಂದ ಅತಿಸಾರ ಭೇದಿಯನ್ನೂ ಕಡಿಮೆಯಾಗಿಸುತ್ತದೆ. ಮೂರು ತಿಂಗಳವರೆಗೆ ಮಗುವನ್ನು ಅತಿಸಾರ ಭೇದಿಯಿಂದ ರಕ್ಷಿಸುವದರೊಂದಿಗೆ ಶರೀರದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಎಂದರು.
ಮಕ್ಕಳ ತಜ್ಞರಾದ ಜಶ್ವಂತ್ ಅವರು ಓಆರ್‍ಎಸ್ ಮತ್ತು ಝಿಂಕ್ ಕೊಡುವ ವಿಧಾನ ಮತ್ತು ಉಪಯೋಗದ ಕುರಿತು ಮಾಹಿತಿ ನೀಡಿದರು. ತಾ. 28 ರಂದು ಪ್ರಾರಂಭಗೊಂಡಿರುವ ಈ ಕಾರ್ಯಕ್ರಮ ಜೂನ್ 9 ರವರೆಗೆ ನಡೆಯಲಿದೆ ಎಂದರು. ಕಾರ್ಯಕ್ರಮದಲ್ಲಿ ವೈದ್ಯರಾದ ಶಿವಪ್ರಕಾಶ್, ಶರತ್ ಬಾಬು, ದೇವಿಕಾ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.