ಮಡಿಕೇರಿ, ಮೇ 29: ರಾಜ್ಯದ ನೈಋತ್ಯ ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರದ ವಿಧಾನಪರಿಷತ್‍ನ ಸದಸ್ಯರುಗಳಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹಾಗೂ ಹಾಲಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರ ಅಧಿಕಾರಾವಧಿ ಇದೇ ಜೂನ್ 21 ರಂದು ಮುಕ್ತಾಯಗೊಳ್ಳಲಿದ್ದು, ಈಗಾಗಲೇ ಈ ಎರಡು ಕ್ಷೇತ್ರಗಳು ಸೇರಿದಂತೆ ನಿವೃತ್ತರಾಗಲಿರುವ ಒಟ್ಟು ಆರು ಮಂದಿ ಸದಸ್ಯರ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದೆ. ಜೂನ್ 8 ರಂದು ಈ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ರಾಜ್ಯ ವಿಧಾನಸಭೆಗೆ ನಡೆದಿರುವ ಚುನಾವಣೆ, ಮತ ಎಣಿಕೆ ಹಾಗೂ ಫಲಿತಾಂಶ ಹೊರಬಿದ್ದ ಬಳಿಕ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ವಿಚಾರಗಳ ಕುತೂಹಲದಲ್ಲೇ ಜನತೆ ಇನ್ನೂ ಮುಂದುವರಿದಿದ್ದಾರೆ. ಈ ಭರಾಟೆಯ ನಡೆವೆಯೇ ಈ ಚುನಾವಣೆಯೂ ಎದುರಾಗಿದ್ದು, ಈಗಾಗಲೇ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಸ್ಪರ್ಧಿಸಿರುವ ಅಭ್ಯರ್ಥಿಗಳು ಪ್ರಚಾರದಲ್ಲಿ ನಿರತರಾಗಿದ್ದಾರೆ. ಪ್ರಮುಖ ರಾಜಕೀಯ ಪಕ್ಷಗಳಿಗೆ ಇದೂ ಕೂಡ ಪ್ರತಿಷ್ಠೆಯ ಚುನಾವಣೆಯಾಗಿದೆ.

ನಿವೃತ್ತರಾಗಲಿರುವ ವಿಧಾನ ಪರಿಷತ್‍ನ ಆರು ಸದಸ್ಯರ ಪೈಕಿ ಕೊಡಗು ಜಿಲ್ಲೆಗೆ ನೈಋತ್ಯ ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರ ಸಂಬಂಧಿಸಿದ್ದಾಗಿದೆ. ಈ ಕ್ಷೇತ್ರವನ್ನು ಕಳೆದ ಅವಧಿಯಲ್ಲಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹಾಗೂ ಡಿ.ಎಚ್. ಶಂಕರ್ ಮೂರ್ತಿ ಅವರುಗಳು ಪ್ರತಿನಿಧಿಸುತ್ತಿದ್ದರು. ಈ ಎರಡು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯೂ ಸೇರಿ ಒಟ್ಟು ಐದು ಜಿಲ್ಲೆಗಳು ಹಾಗೂ ಮತ್ತೊಂದು ಜಿಲ್ಲೆಯ ಎರಡು ತಾಲೂಕುಗಳು ಒಳಪಡಲಿವೆ.

ಕೊಡಗು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಹಾಗೂ ಹೊನ್ನಾಳಿ ಈ ಕ್ಷೇತ್ರಕ್ಕೆ ಒಳಪಡಲಿವೆ. ಈ ಚುನಾವಣೆಗೆ ಮೈಸೂರಿನ ಪ್ರಾದೇಶಿಕ ಆಯುಕ್ತರು ಚುನಾವಾಧಿಕಾರಿಗಳಾಗಿದ್ದು, ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸಹಾಯಕ ಚುನಾವಣಾ ಅಧಿಕಾರಿಗಳಾಗಿದ್ದಾರೆ.

ನಾಮಪತ್ರ ಅಂತಿಮ

ನಾಮಪತ್ರ ಸಲ್ಲಿಕೆಗೆ ಮೇ 22 ಅಂತಿಮ ದಿನವಾಗಿದ್ದು, ತಾ. 23 ರಂದು ಪರಿಶೀಲನೆ ಹಾಗೂ ತಾ. 25 ಹಿಂಪಡೆಯಲು ಕೊನೆಯ ದಿನಾಂಕವಾಗಿತ್ತು. ಇದೀಗ ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಚುನಾವಣೆಗೆ ಅಖಾಡ ಸಜ್ಜಾಗಿದೆ. ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 12 ಮಂದಿ ಹಾಗೂ ಪದವೀಧರ ಕ್ಷೇತ್ರದಲ್ಲಿ ಒಟ್ಟು 8 ಮಂದಿ ಸ್ಪರ್ಧಾಕಣದಲ್ಲಿದ್ದಾರೆ. ಇವರಲ್ಲಿ ಓರ್ವ ಅಭ್ಯರ್ಥಿ ಎರಡು ವಿಭಾಗಕ್ಕೂ ಸ್ಪರ್ಧೆ ಮಾಡಿರುವದು ವಿಶೇಷವಾಗಿದೆ. ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 20,481 ಮಂದಿ ಹಾಗೂ ಪದವೀಧರ ಕ್ಷೇತ್ರದಲ್ಲಿ 67,306 ಮಂದಿ ಮತದ ಹಕ್ಕು ಹೊಂದಿದ್ದಾರೆ.

ಶಿಕ್ಷಕರ ಕ್ಷೇತ್ರದಲ್ಲಿ 12 ಅಭ್ಯರ್ಥಿಗಳು

ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಹಾಲಿ ಸದಸ್ಯರಾಗಿರುವ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸೇರಿದಂತೆ ಒಟ್ಟು 12 ಮಂದಿ ಈ ಬಾರಿ ಸ್ಪರ್ಧಾ ಕಣದಲ್ಲಿದ್ದಾರೆ.

ಅಭ್ಯರ್ಥಿಗಳು ಯಾರು?

ಕ್ಯಾಪ್ಟನ್ ಗಣೇಶ್ ಕಾರ್ಣಿಕ್ (ಬಿಜೆಪಿ) , ಕೆ.ಕೆ. ಮಂಜುನಾಥ್ ಕುಮಾರ್ (ಕಾಂಗ್ರೆಸ್) , ಎಸ್.ಎಲ್. ಬೋಜೇಗೌಡ (ಜೆಡಿಎಸ್) , ಡಾ. ಅರುಣ್ ಹೊಸಕೊಪ್ಪ (ಪಕ್ಷೇತರರು) ಅಲೋಷಿಯಸ್ ಡಿಸೋಜ (ಪಕ್ಷೇತರರು), ಕೆ.ಬಿ. ಚಂದ್ರೋಜಿರಾವ್ (ಪಕ್ಷೇತರರು), ಡಿ.ಕೆ. ತಾಳಸಪ್ಪ (ಪಕ್ಷೇತರರು), ನಿತ್ಯಾನಂದ ಶೆಟ್ಟಿ (ಪಕ್ಷೇತರರು), ಪ್ರಭುಲಿಂಗ ಪಿ. ಆರ್. (ಪಕ್ಷೇತರರು), ಬಸವರಾಜಪ್ಪ (ಪಕ್ಷೇತರರು), ಎಂ. ರಮೇಶ್ (ಪಕ್ಷೇತರರು), ರಾಜೇಂದ್ರ ಕುಮಾರ್ (ಪಕ್ಷೇತರರು)

ಮತದಾರರು

ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 20,481 ಮಂದಿ ಮತದಾರರಿದ್ದಾರೆ. ಇವರಲ್ಲಿ ಕೊಡಗು ಜಿಲ್ಲೆ 1250,

(ಮೊದಲ ಪುಟದಿಂದ) ಚಿಕ್ಕಮಗಳೂರು 3,338, ದಕ್ಷಿಣ ಕನ್ನಡ 7,140, ಶಿವಮೊಗ್ಗ 4960, ಉಡುಪಿ 2768, ದಾವಣಗೆರೆÉ 1025 ಮತದಾರರನ್ನು ಹೊಂದಿದೆ ಇತರೆ 5 ಮತದಾರರಿದ್ದಾರೆ.

ಪದವೀಧರ ಕ್ಷೇತ್ರ

ಪದವೀಧರ ಕ್ಷೇತ್ರದ ಹಾಲಿ ಅಭ್ಯರ್ಥಿಯಾಗಿರುವ ಡಿ.ಎಚ್. ಶಂಕರಮೂರ್ತಿ ಅವರು ವಿಧಾನ ಪರಿಷತ್‍ನ ಸಭಾಪತಿಯೂ ಆಗಿದ್ದರು. ಈ ಬಾರಿ ಈ ಕ್ಷೇತ್ರಕ್ಕೆ ಒಟ್ಟು 8 ಉಮೇದುವಾರರಿದ್ದಾರೆ.

ಯಾರ್ಯಾರು ?

ಆಯನೂರು ಮಂಜುನಾಥ್ (ಬಿಜೆಪಿ), ಎಸ್.ಪಿ. ದಿನೇಶ್ (ಕಾಂಗ್ರೆಸ್), ಅರುಣ್ ಕುಮಾರ್ (ಜೆಡಿಎಸ್), ಪಿ.ಸಿ. ಪಟೇಲ್ (ಸರ್ವಜನತಾ ಪಾರ್ಟಿ), ಜಫರುಲ್ಲಾ ಸತ್ತರ್‍ಖಾನ್ (ಪಕ್ಷೇತರರು), ಜಯಕುಮಾರ್ (ಪಕ್ಷೇತರರು), ಪ್ರಭುಲಿಂಗ ಪಿ. ಆರ್., (ಪಕ್ಷೇತರರು), ಬಿ.ಕೆ. ಮಂಜುನಾಥ್ (ಪಕ್ಷೇತರರು), ಪ್ರಭುಲಿಂಗ ಪಿ. ಆರ್ ಅವರು ಎರಡು ಕ್ಷೇತ್ರಗಳಿಗೂ ಸ್ಪರ್ಧೆ ಮಾಡಿದ್ದಾರೆ.

ಮತದಾರರು

ಪದವೀಧರ ಕ್ಷೇತ್ರದಲ್ಲಿ ಈ ಬಾರಿ ಒಟ್ಟು 67,306 ಮತದಾರರಿದ್ದಾರೆ. ಈ ಪೈಕಿ ಕೊಡಗು ಜಿಲ್ಲೆ 1,633, ಚಿಕ್ಕಮಗಳೂರು 8788, ದಕ್ಷಿಣ ಕನ್ನಡ 15,494, ಶಿವಮೊಗ್ಗ 27,044, ಉಡುಪಿ 8,276 ಹಾಗೂ ದಾವಣಗೆರೆ 6071 ಮತದಾರರನ್ನು ಹೊಂದಿದೆ. ಈ ಕ್ಷೇತ್ರದಲ್ಲಿ ಇತರೆ 14 ಮತದಾರರಿದ್ದಾರೆ.

ಚುನಾವಣೆ

ಜೂನ್ 8 ರಂದು ಈ ಎರಡು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ತಾ. 12 ರಂದು ಫಲಿತಾಂಶ ಹೊರಬೀಳಲಿದೆ.