ಗೋಣಿಕೊಪ್ಪಲು, ಮೇ 27: ರಾಜ್ಯದಲ್ಲಿ ಈ ಹಿಂದೆ ಇಪ್ಪತ್ತು ತಿಂಗಳ ಉತ್ತಮ ಸರ್ಕಾರ ನೀಡುವ ಮೂಲಕ ಜನ ಮಾನಸದಲ್ಲಿ ಯಶಸ್ವಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಹೆಚ್.ಡಿ. ಕುಮಾರ ಸ್ವಾಮಿ ಇದೀಗ ಸಮಿಶ್ರ ಸರ್ಕಾರದಲ್ಲಿ ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಕುಮಾರ ಸ್ವಾಮಿ ನುಡಿದಂತೆ ನಡೆಯುವ ಮುಖ್ಯಮಂತ್ರಿಯಾಗಿದ್ದಾರೆ. ಇದರಲ್ಲಿ ಯಾವದೇ ಸಂಶಯ ಬೇಡವೆಂದು ಕೊಡಗು ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲಿ ಬಿ.ಜೆ.ಪಿ. ಬಂದ್ ಕರೆಕೊಟ್ಟ ಹಿನ್ನಲೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಸಂಕೇತ್ ಪೂವಯ್ಯ ಸರ್ವೋಚ್ಚ ನ್ಯಾಯಾಲ ಯವು ನೀಡಿದ ಆದೇಶದಿಂದ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ಸಮಿಶ್ರ ಸರ್ಕಾರ ರಚನೆ ಗೊಂಡಿದೆ. ಜಾತ್ಯತೀತ ನೆಲೆಗಟ್ಟಿನಲ್ಲಿ ನಂಬಿಕೆ, ಸಿದ್ಧಾಂತದ ಮೇಲೆ ಈ 2 ಪಕ್ಷಗಳು ಅಧಿಕಾರಕ್ಕೆ ಬಂದಿವೆ. ಸಮಿಶ್ರ ಸರ್ಕಾರ ರಚನೆಗೊಂಡ ಹಿನ್ನಲೆಯಲ್ಲಿ ಚುನಾವಣೆ ಸಂದರ್ಭ ನೀಡಿರುವ ಪ್ರಣಾಳಿಕೆಯನ್ನು ಅನುಷ್ಠಾನಕ್ಕೆ ತರಲು ಎರಡು ಪಕ್ಷಗಳು ಚರ್ಚೆ ನಡೆಸಬೇಕಾದ ಅನಿವಾರ್ಯತೆ ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಅಧಿಕಾರ ಸಿಗಲಿಲ್ಲವೆಂಬ ನಿರಾಶೆಯಿಂದ ರಾಜ್ಯದ ಬಿ.ಜೆ.ಪಿ. ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ರಾಜ್ಯ ಬಂದ್‍ಕರೆ ನೀಡಿರುವದು ಖಂಡನೀಯ ಎಂದು ಪ್ರತಿಕ್ರಿಯಿಸಿದ್ದಾರೆ.

ಜಿಲ್ಲಾಡಳಿತ ಬಂದ್‍ಗೆ ಆಸ್ಪದ ನೀಡಬಾರದು: ಎಸ್‍ಡಿಪಿಐ

(ಮೊದಲನೇ ಪುಟದಿಂದ)

ರೈತರ ಸಾಲ ಮನ್ನಾ ವಿಚಾರದಲ್ಲಿ ಬೆಜೆಪಿ ಪಕ್ಷ ಬಂದ್‍ಗೆ ಕರೆ ನೀಡಿರುವದು ಸರಿಯಾದ ಕ್ರಮವಲ್ಲ ಎಂದು ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಸದನದಲ್ಲಿ ಜನರ ಕಲ್ಯಾಣದ ಬಗ್ಗೆ ಜವಾಬ್ದಾರಿಯುತವಾಗಿ ಚರ್ಚೆ ಮಾಡಿ ಫಲ ಕಂಡುಕೊಳ್ಳುವ ಬದಲು ಈ ರೀತಿಯ ಬಂದ್‍ಗೆ ಕರೆ ಕೊಡುವ ಮೂಲಕ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟುಮಾಡುವುದರೊಂದಿಗೆ ಸಾಮಾನ್ಯ ಜನರಿಗೆ ಸಮಸ್ಯೆ ಆಗಲಿದೆ.

ಸಾಲ ಮನ್ನಾ ಮಾಡುವ ಜವಾಬ್ದಾರಿ ಸರಕಾರದ ಮೇಲೆ ಇದ್ದು, ಅದಕ್ಕೆ ಪ್ರಜ್ಞಾವಂತ ನಾಗರಿಕರು ಸಮಯ ನೀಡಬೇಕಾಗಿದೆ ಎಂದ ಅವರು, ಬೇಸಿಗೆ ರಜೆಯ ನಂತರ ಶಾಲೆ ಪ್ರಾರಂಭದ ದಿನದಲ್ಲೇ ಬಂದ್ ಮಾಡಿದರೆ ಮಕ್ಕಳ ವಿಧ್ಯಾಭ್ಯಾಸಕ್ಕೆ ತೊಡಕು ಉಂಟಾಗಲಿದ್ದು, ಜಿಲ್ಲಾಡಳಿತ ಯಾವದೇ ಕಾರಣಕ್ಕೂ ಬಂದ್‍ಗೆ ಆಸ್ಪದ ನೀಡಬಾರದೆಂದು ಒತ್ತಾಯಿಸಿದ್ದಾರೆ.

ಬಂದ್ ಕರೆ ಖಂಡನೀಯ - ಪದ್ಮಿನಿ

ರಾಜ್ಯ ಬಿ.ಜೆ.ಪಿ. ಕರ್ನಾಟಕ ಬಂದ್ ಕರೆ ನೀಡಿರುವದನ್ನು ರಾಜ್ಯ ಜೆ.ಡಿ.ಎಸ್. ಪ್ರಧಾನ ಕಾರ್ಯದರ್ಶಿ ಮಾಂಗೇರ ಪದ್ಮಿನಿ ಪೊನ್ನಪ್ಪ ಖಂಡಿಸಿದ್ದಾರೆ. ಸಮಿಶ್ರ ಸರ್ಕಾರ ರಚನೆಗೊಂಡ ಹಿನ್ನಲೆಯಲ್ಲಿ ಚುನಾವಣೆ ಸಂದರ್ಭ ನೀಡಿರುವ ಪ್ರಣಾಳಿಕೆಯನ್ನು ಅನುಷ್ಟಾನಕ್ಕೆ ತರಲು ಎರಡು ಪಕ್ಷಗಳು ಈಗಾಗಲೇ ಚರ್ಚೆ ನಡೆಸಿದೆ. ಆದರೆ ಅಧಿಕಾರ ಸಿಗಲಿಲ್ಲವೆಂಬ ನಿರಾಶೆಯಿಂದ ಬಿಜೆಪಿ ರಾಜ್ಯ ಬಂದ್ ಕರೆ ನೀಡಿರುವದು ಸರಿಯಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಂದ್‍ಗೆ ಜನರ ಬೆಂಬಲವಿಲ್ಲ : ಗಣೇಶ್

ಬಿಜೆಪಿ ಕರೆ ನೀಡಿರುವ ರಾಜಕೀಯ ಪ್ರೇರಿತ ಬಂದ್‍ಗೆ ಕೊಡಗಿನ ಜನತೆ ಬೆಂಬಲ ನೀಡುವದಿಲ್ಲವೆಂದು ಜಾತ್ಯತೀತ ಜನತಾದಳದ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಂ. ಗಣೇಶ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಬಿಜೆಪಿ ರಾಜ್ಯದಲ್ಲಿ ಅರಾಜಕತೆ ಸೃಷ್ಟಿ ಮಾಡುವದಕ್ಕಾಗಿ ಕರ್ನಾಟಕ ಬಂದ್‍ಗೆ ಕರೆ ನೀಡಿದೆ ಎಂದು ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೊಟ್ಟ ಮಾತನ್ನು ತಪ್ಪÀದೆ ರೈತರ ಪರವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಿದ್ಧರಿದ್ದಾರೆ. ಸರ್ಕಾರ ಈಗಷ್ಟೆ ರಚನೆಯಾಗಿರುವದರಿಂದ ಮತ್ತು ಮೈತ್ರಿ ಸರ್ಕಾರ ಅಧಿಕಾರದಲ್ಲಿರುವದರಿಂದ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸಲು ಮುಖ್ಯಮಂತ್ರಿಗಳಿಗೆ ಒಂದಷ್ಟು ಕಾಲವಕಾಶ ನೀಡಬೇಕಾಗುತ್ತದೆ. ಆದರೆ ರಾಜಕೀಯ ದುರುದ್ದೇಶದಿಂದ ಬಿಜೆಪಿ ಬಂದ್‍ಗೆ ಕರೆ ನೀಡಿದ್ದು, ಇದನ್ನು ಪ್ರತಿಯೊಬ್ಬರು ಖಂಡಿಸಬೇಕೆಂದು ಕೆ.ಎಂ. ಗಣೇಶ್ ಮನವಿ ಮಾಡಿದ್ದಾರೆ.

ಸಹಕಾರಕ್ಕೆ ಮಣಿ ಮನವಿ

ಸೋಮವಾರ ಬಿಜೆಪಿ ಕರೆ ನೀಡಿರುವ ಕರ್ನಾಟಕ ಬಂದ್‍ಗೆ ಎಲ್ಲರೂ ಸಹಕಾರ ನೀಡಬೇಕೆಂದು ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷ ಹಾಗೂ ಜನಪರ ಹೋರಾಟ ಸಮಿತಿ ಸಂಚಾಲಕ ಬಲ್ಲಾರಂಡ ಮಣಿ ಉತ್ತಪ್ಪ ಮನವಿ ಮಾಡಿದ್ದಾರೆ.

ಕಾನೂನಿಗೆ ವಿರುದ್ಧವಾದ ಬಂದ್: ಯೋಗೇಶ್

ಭಾರತೀಯ ಜನತಾ ಪಾರ್ಟಿ ಕರೆ ನೀಡಿರುವ ಕರ್ನಾಟಕ ಬಂದ್ ಕಾನೂನಿಗೆ ವಿರುದ್ಧವಾಗಿದ್ದು, ಬಲವಂತದ ಬಂದ್ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜಾತ್ಯತೀತ ಜನತಾದಳದ ಪರಿಶಿಷ್ಟ ಜಾತಿ ಘಟಕದ ರಾಜ್ಯ ಕಾರ್ಯದರ್ಶಿ ಹೆಚ್.ಎನ್. ಯೋಗೇಶ್ ಕುಮಾರ್ ಒತ್ತಾಯಿಸಿದ್ದಾರೆ.