ಶನಿವಾರಸಂತೆ, ಮೇ 27: ಸಮೀಪದ ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಳ್ಳಿ, ದೊಡ್ಡಕಣಗಾಲು, ಚಿಕ್ಕಕಣಗಾಲು ಹಾಗೂ ಕಂತೆಬಸವನಹಳ್ಳಿ ಗ್ರಾಮಗಳ ತೋಟ-ಗದ್ದೆಗಳಲ್ಲಿ ಕಾಡಾನೆಗಳು ದಾಂಧಲೆ ಎಬ್ಬಿಸುತ್ತಿದ್ದು, ಅಲ್ಲಿನ ರೈತರು, ಗ್ರಾಮಸ್ಥರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಕಾಡಾನೆಗಳು ಬೆಳೆಗಳನ್ನು ತುಳಿದು, ತಿಂದು ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ. ನೊಂದ ಗ್ರಾಮಸ್ಥರು ಕಾಡಾನೆ ಹಾವಳಿ ನಿಯಂತ್ರಣಕ್ಕೆ ಕೆಲ ದಿನಗಳ ಹಿಂದೆ ಅರಣ್ಯಾಧಿಕಾರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಸ್ಪಂದಿಸಲಿಲ್ಲ ಎಂದು ದೂರಿದ್ದಾರೆ.

ಕಾಡಾನೆಗಳು ನಿಡ್ತ ಮೀಸಲು ಅರಣ್ಯದಿಂದ ಗ್ರಾಮಕ್ಕೆ ಬರುವ ದಾರಿಯಲ್ಲಿ ಸುತ್ತಲೂ ಟ್ರಂಚ್‍ಗಳನ್ನು ತೆಗೆಯಲಾಗಿದೆ. ಆದರೆ ನಡುವೆ 10 ಮೀಟರ್‍ನಷ್ಟು ದೂರ ಕಲ್ಲಿನ ದಿಣ್ಣೆಗಳಿದ್ದು, ಆನೆಗಳು ಅದನ್ನು ದಾಟಿ ಗ್ರಾಮಗಳಿಗೆ ಲಗ್ಗೆ ಹಾಕುತ್ತಿವೆ. ಆ ದಿಣ್ಣೆಗಳನ್ನು ತೆಗೆಸಿ ಅಲ್ಲಿಯೂ ಟ್ರಂಚ್‍ಗಳನ್ನು ನಿರ್ಮಿಸಿದರೆ ಮಾತ್ರ ಕಾಡಾನೆಗಳ ಧಾಳಿಯನ್ನು ನಿಯಂತ್ರಿಸಬಹುದು ಎಂದು ರೈತರಾದ ಬಿ.ಎನ್. ಬಸಪ್ಪ, ಗಣೇಶ್, ವಸಂತ್ ಮುಕ್ಕಾಟಿ, ಪಟ್ಟಡ ಮಣಿ ಮತ್ತು ಕೆಲ ಗ್ರಾಮಸ್ಥರು ಆಗ್ರಹಿಸಿದ್ದಾರೆ.