ಮಡಿಕೇರಿ, ಮೇ 25: ಕೊಡಗು ಫುಟ್ಬಾಲ್ ಅಕಾಡೆಮಿ ಮರಗೋಡು ವತಿಯಿಂದ ನಡೆಯುತ್ತಿರುವ ಗೌಡ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕಾಂಗೀರ, ಮುಕ್ಕಾಟಿ ‘ಎ’, ಬೊಳ್ಳೂರು ‘ಬಿ’ ಹಾಗೂ ಕಟ್ಟೆಮನೆ ತಂಡಗಳು ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಿವೆ.

ಇಂದು ನಡೆದ ಪಂದ್ಯಾವಳಿಯಲ್ಲಿ ಕಾಳೇರಮ್ಮನ ತಂಡ ಬಳಪದ ತಂಡ ತಾನೇ ಸ್ವಯಂ ಗೋಲು ಹೊಡೆದುಕೊಂಡಿದ್ದರಿಂದ ಗೆಲುವು ಸಾಧಿಸಿತು. ಅಯ್ಯಂಡ್ರ ತಂಡ ಕೋಳಿಬೈಲು ತಂಡವನ್ನು 5 ಗೋಲುಗಳಿಂದ ಮಣಿಸಿತು. ಹ್ಯಾಟ್ರಿಕ್ ಸಾಧನೆಯೊಂದಿಗೆ ಅಯ್ಯಂಡ್ರ ಅಜಯ್ 5 ಗೋಲು ಬಾರಿಸಿದರು. ಕಡ್ಯದ ತಂಡ ಕಾಳೇರಮ್ಮನ ತಂಡವನ್ನು 4-2 ಗೋಲುಗಳ ಅಂತರದಿಂದ ಸೋಲನುಭವಿಸಿತು. ಕಡ್ಯದ ಪರ ನಿತಿನ್ 1, ಪ್ರವೀಣ್ 2, ಕಾರ್ತಿಕ್ 1 ಗೋಲು ಬಾರಿಸಿದರೆ, ಕಾಳೇರಮ್ಮನ ಪರ ಅಶ್ವತ್ಥ್, ಹೇಮಂತ್ ಗೋಲು ಗಳಿಸಿದರು.

ಅಯ್ಯಂಡ್ರ ತಂಡ ಪಾಂಡನ ತಂಡವನ್ನು 5-0 ಗೋಲಿನಿಂದ ಸೋಲಿಸಿತು. ತಂಡದ ಪರ ಅಜಯ್ 2, ಗಗನ್ ಹಾಗೂ ರಾಖೇಶ್ ತಲಾ ಒಂದು ಗೋಲು ಬಾರಿಸಿದರೆ, ಮತ್ತೊಂದು ಗೋಲನ್ನು ಪಾಂಡನ ತಂಡದ ಆಟಗಾರರೇ ಹೊಡೆದುಕೊಂಡರು.

ಪಾಣತ್ತಲೆ ‘ಬಿ’ ತಂಡ ಕೊಡೆಕಲ್ ತಂಡವನ್ನು 9-0 ಗೋಲಿನಿಂದ ಸೋಲಿಸಿತು. ತಂಡದ ಪರ ವಿಕ್ರಮ್ 4, ಜಗದೀಶ್ 3, ಮಧು 2 ಗೋಲು ಬಾರಿಸಿದರು. ಕಾಂಗೀರ ತಂಡ ಮೇರ್ಕಜೆ ತಂಡವನ್ನು 2-0 ಗೋಲಿನಿಂದ ಸೋಲಿಸಿತು. ಕಾಂಗೀರ ಗೌತಂ 2 ಗೋಲು ಬಾರಿಸಿದರು. ಮುಕ್ಕಾಟಿ ‘ಎ’ ತಂಡ ತೋಟಂಬೈಲು ತಂಡವನ್ನು 3-0 ಗೋಲಿನಿಂದ ಮಣಿಸಿತು. ಆಕಾಶ್, ವಿಕ್ಕಿ, ದಿಲೀಪ್ ಗೋಲು ಬಾರಿಸಿದರು. ಕಟ್ಟೆಮನೆ ತಂಡ ಕರ್ಣಯ್ಯನ ತಂಡವನ್ನು 3-1 ಗೋಲಿನಿಂದ ಸೋಲಿಸಿತು. ಕಟ್ಟೆಮನೆ ಅಭ್ಯುದ್, ಪ್ರೀತಂ 2 ಗೋಲು ಬಾರಿಸಿದರೆ, ಕರ್ಣಯ್ಯನ ಈಶ್ವರ್ 1 ಗೋಲು ಹೊಡೆದರು.

ಬೊಳ್ಳೂರು ತಂಡ ಇಟ್ಟಣಿಕೆ ತಂಡವನ್ನು 4-0 ಗೋಲಿನಿಂದ ಸೋಲಿಸಿತು. ಮೋನಿಶ್ 2, ಕಮಲ್ 2 ಗೋಲು ಹೊಡೆದರು.