ಮಡಿಕೇರಿ, ಮೇ 25: ರಾಜ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವುದರಿಂದ ರಾಜ್ಯ ಹಾಗೂ ಕೊಡಗು ಜಿಲ್ಲೆಯ ಸಮಸ್ಯೆಗಳು ಶೀಘ್ರ ಬಗೆಹರಿಯಲಿವೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ಎರಡು ತಿಂಗಳ ಒಳಗಾಗಿ ಮುಖ್ಯಮಂತ್ರಿಗಳನ್ನು ಜಿಲ್ಲೆಗೆ ಆಹ್ವಾನಿಸಿ ಸಮಸ್ಯೆಗಳ ಪರಿಹಾರಕ್ಕೆ ಕಾರ್ಯಯೋಜನೆ ರೂಪಿಸಲಾಗುವದು ಎಂದು ತಿಳಿಸಿದರು.
ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಿದ್ದು, ಕೊಡಗಿನಲ್ಲಿ ಜಾತ್ಯತೀತ ಜನತಾದಳದ ಶಾಸಕರಿಲ್ಲದಿದ್ದರೂ, ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಪಕ್ಷವು ಪ್ರಾಮಾಣಿಕ ಪ್ರಯತ್ನ ನಡೆಸಲಿದೆ. ಕೊಡಗಿನಲ್ಲಿ ಸಮಸ್ಯೆಗಳ ಮೂಟೆಯೇ ಇದ್ದು, ಈಗಾಗಲೇ ಅವುಗಳನ್ನು ಪಟ್ಟಿ ಮಾಡಲಾಗಿದ್ದು, ಈ ಬಗ್ಗೆ ಶೀಘ್ರದಲ್ಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಗಮನ ಸೆಳೆಯಲಾಗುವುದು. ಅಲ್ಲದೆ ಮುಂದಿನ ಎರಡು ತಿಂಗಳ ಒಳಗಾಗಿ ಮುಖ್ಯಮಂತ್ರಿಗಳನ್ನು ಕೊಡಗಿನಲ್ಲಿ ಗ್ರಾಮ ವಾಸ್ತವ್ಯಕ್ಕೆ ಆಹ್ವಾನಿಸಿ ರಾಜ್ಯ ಹಾಗೂ ಜಿಲ್ಲೆಯ ಪ್ರಮುಖ ಅಧಿಕಾರಿಗಳನ್ನು ಒಗ್ಗೂಡಿಸಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವದು ಎಂದು ಸಂಕೇತ್ ಪೂವಯ್ಯ ಭರವಸೆ ನೀಡಿದರು.
ಸಮ್ಮಿಶ್ರ ಸರಕಾರ ಅಧಿಕಾರಿಕ್ಕೆ ಬಂದಿರುವದರಿಂದ ಎರಡೂ ಪಕ್ಷಗಳು ಚುನಾವಣೆ ಸಂದರ್ಭ ಪ್ರಣಾಳಿಕೆಗಳಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಲು ಪ್ರಯತ್ನಿಸಲಿದ್ದು, ಜಿಲ್ಲೆಯಲ್ಲಿ ಪಕ್ಷದ ಶಾಸಕರಿಲ್ಲದಿದ್ದರೂ, ಮಾಜಿ ಸಚಿವ ಬಿ.ಎ.ಜೀವಿಜಯ ಅವರ ಹಿರಿತನ, ಅನುಭವ, ಸೇವಾಭಾವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮುಖ್ಯಮಂತ್ರಿಗಳನ್ನು ಕೋರಲಾಗುವದು. ಅಲ್ಲದೆ ಸ್ವತಃ ಮುಖ್ಯಮಂತ್ರಿಗಳಿಗೇ ಕೊಡಗಿನ ಸಮಸ್ಯೆಗಳ ಅರಿವು ಇರುವದರಿಂದ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಅವುಗಳ ನಿವಾರಣೆಗೆ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಕಾಫಿ ಬೆಳೆಗಾರರ ಕೃಷಿ ಸಾಲ ಮನ್ನಾ, ಸ್ತ್ರೀಶಕ್ತಿ ಸಂಘಟನೆಗಳ ಬಡ್ಡಿ ಮನ್ನಾ, ಆನೆ ಮಾನವ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಕ್ರಿಯಾ ಯೋಜನೆ ರೂಪಿಸಿ ಹಂತಹಂತವಾಗಿ ಅನುಷ್ಠಾನಕ್ಕೆ ತರುವುದು, ಭತ್ತದ ಕೃಷಿಗೆ ಪ್ರೋತ್ಸಾಹ ಹಾಗೂ ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡುವುದು ಸೇರಿದಂತೆ ಜಿಲ್ಲೆಯ ಮತದಾರರ ವಿಶ್ವಾಸವನ್ನು ಪಡೆದು ಕೊಡಗಿನ ಅಭಿವೃದ್ಧಿಗೆ ಪ್ರಯತ್ನಿಸಲಾಗುವದು. ಜೆಡಿಎಸ್ ಎಂದೂ ಚುನಾವಣೆ ಆಧಾರಿತ ರಾಜಕಾರಣ ಮಾಡುವದಿಲ್ಲ ಎಂದು ಸಂಕೇತ್ ಪೂವಯ್ಯ ಸ್ಪಷ್ಟಪಡಿಸಿದರು.
ಕೊಡಗಿನಲ್ಲಿ ಕಂದಾಯ ಇಲಾಖೆಯನ್ನು ಚುರುಕುಗೊಳಿಸಲು ಕ್ರಮಕೈಗೊಳ್ಳುವದರೊಂದಿಗೆ ಅವೈಜ್ಞಾನಿಕವಾದ ಕಾರಣಗಳನ್ನು ನೀಡಿ ಜನರ ಅರ್ಜಿಗಳನ್ನು ವಿಲೇವಾರಿ ಮಾಡದಿರುವದನ್ನು ತಡೆಯಲು ಕ್ರಮಕೈಗೊಳ್ಳಲಾಗುವುದು. ಸಿದ್ದಾಪುರ ಸಮೀಪದ ಗೂಡ್ಲೂರುವಿನಲ್ಲಿ 1978ರಲ್ಲಿ ಅಂದಿನ ಸರಕಾರ ತಲಾ 5 ಎಕರೆ ಜಮೀನು ನೀಡುವದಾಗಿ ನಂಬಿಸಿ ಸುಮಾರು 166 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಿದೆ. ಆದರೆ ಕೇವಲ ಒಂದು ಎಕರೆ ಜಾಗ ನೀಡಿ ವಂಚಿಸಲಾಗಿದ್ದು, ಈ ಕುಟುಂಬಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯಲಾಗುವುದು. ವನ್ಯಪ್ರಾಣಿಗಳ ಹಾವಳಿಯಿಂದ ಬೆಳೆ ನಷ್ಟಕ್ಕೊಳಗಾದವರಿಗೆ ವೈಜ್ಞಾನಿಕವಾದ ಪರಿಹಾರ ಕಲ್ಪಿಸುವುದು, ಆನೆ ಮಾನವ ಸಂಘರ್ಷದಲ್ಲಿ ಜೀವ ಕಳೆದುಕೊಂಡವರ ಹಾಗೂ ಅಂಗವೈಕಲ್ಯತೆಗೆ ಒಳಗಾದವರ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪಕ್ಷ ಪ್ರಾಮಾಣಿಕವಾಗಿ ಪ್ರಯತ್ನಿಸಲಿದೆ ಎಂದು ಸಂಕೇತ್ ಪೂವಯ್ಯ ಭರವಸೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಹಿರಿಯ ಉಪಾಧ್ಯಕ್ಷ ಕೆ.ಜಿ.ನಾಣಯ್ಯ, ವೀರಾಜಪೇಟೆ ಕ್ಷೇತ್ರದ ಅಧ್ಯಕ್ಷ ಎಸ್.ಹೆಚ್.ಮತೀನ್, ಯುವ ಘಟಕದ ಅಧ್ಯಕ್ಷ ಅಮ್ಮಂಡ ವಿವೇಕ್, ವೀರಾಜಪೇಟೆ ನಗರಾಧ್ಯಕ್ಷ ಪಿ.ಎ.ಮಂಜುನಾಥ್ ಹಾಗೂ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಪಿ.ವಿ.ರೆನ್ನಿ ಉಪಸ್ಥಿತರಿದ್ದರು.