ಇಂದು ಸಿಬಿಎಸ್‍ಇ ಫಲಿತಾಂಶ ಪ್ರಕಟ
ನವದೆಹಲಿ, ಮೇ 25: ಕೇಂದ್ರಿಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‍ಇ) 12ನೇ ತರಗತಿಯ ಪರೀಕ್ಷಾ ಫಲಿತಾಂಶ ತಾ. 26 ರಂದು (ಇಂದು) ಪ್ರಕಟಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2017-18 ನೇ ಸಾಲಿನ ಅಕಾಡೆಮಿಕ್‍ನ ಸಿಬಿಎಸ್‍ಇ 12ನೇ ತರಗತಿ ಫಲಿತಾಂಶ ನಾಳೆ ಪ್ರಕಟಗೊಳ್ಳಲಿದೆ ಎಂದು ಶಾಲಾ ಶಿಕ್ಷಣ ಕಾರ್ಯದರ್ಶಿ ಅನಿಲ್ ಸ್ವರೂಪ್ ಟ್ವಿಟರ್‍ನಲ್ಲಿ ಹೇಳಿದ್ದಾರೆ. ಸಿಬಿಎಸ್‍ಇ 10ನೇ ತರಗತಿ ಫಲಿತಾಂಶದ ದಿನಾಂಕ ಇನ್ನೂ ನಿರ್ಧಾರವಾಗಿಲ್ಲ. ಮಾರ್ಚ್ 3 ರಿಂದ ಏಪ್ರಿಲ್ 13 ರವರೆಗೆ 12ನೇ ತರಗತಿ ಪರೀಕ್ಷೆ ದಿನಾಂಕ ನಿಗದಿಯಾಗಿತ್ತು. ಆದರೆ, ಅರ್ಥಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ವಿದ್ಯಾರ್ಥಿಗಳು ಮರು ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಏಪ್ರಿಲ್ 25 ರವರೆಗೂ ಪರೀಕ್ಷೆ ದಿನವನ್ನು ವಿಸ್ತರಿಸಲಾಗಿತ್ತು.
ಸೇನಾ ಕ್ಯಾಂಪ್ ಮೇಲೆ ಗ್ರೆನೇಡ್ ಧಾಳಿ
ಕುಲ್ಗಮ್, ಮೇ 25: ಜಮ್ಮು ಮತ್ತು ಕಾಶ್ಮೀರದ ಕುಲ್ಗಮ್ ಜಿಲ್ಲೆಯಲ್ಲಿ ಸೇನಾ ಕ್ಯಾಂಪ್ ಮೇಲೆ ಉಗ್ರರು ಶುಕ್ರವಾರ ಗ್ರೆನೇಡ್ ಧಾಳಿ ನಡೆಸಿದ್ದಾರೆ. ಇಂದು 34 ರಾಷ್ಟ್ರೀಯ ರೈಫಲ್ಸ್‍ನ ಕ್ಯಾಂಪ್ ಮೇಲೆ ಉಗ್ರರು ಧಾಳಿ ನಡೆಸಿದ್ದು, ಎರಡು ತಿಂಗಳಲ್ಲಿ ನಡೆದ ಮೂರನೇ ಧಾಳಿ ಇದಾಗಿದೆ. ನಿನ್ನೆ ಜಮ್ಮುವಿನ ಬಿಸಿ ರಸ್ತೆಯಲ್ಲಿರುವ ಬಸ್ ನಿಲ್ದಾಣದ ಮೇಲೆ ನಡೆದ ಗ್ರೆನೇಡ್ ಧಾಳಿಯಲ್ಲಿ ಇಬ್ಬರು ಪೆÇಲೀಸರು ಹಾಗೂ ಒಬ್ಬ ನಾಗರಿಕ ಗಾಯಗೊಂಡಿದ್ದರು. ತಾ. 23 ರಂದು ಕಾಶ್ಮೀರದ ಅನಂತ್ ಗಾನ್ ಜಿಲ್ಲೆಯ ಬಿಜ್ ಬೆಹರ್‍ನಲ್ಲಿ ನಡೆದ ಗ್ರೆನೇಡ್ ಧಾಳಿಯಲ್ಲಿ ಆರು ನಾಗರಿಕರು ಗಾಯಗೊಂಡಿದ್ದರು.
ಮೇಜರ್ ಗೊಗೊಯಿ ವಿರುದ್ಧ ತನಿಖೆ
ನವದೆಹಲಿ, ಮೇ 25: ಹೊಟೇಲ್‍ವೊಂದರಲ್ಲಿ ಅಪ್ರಾಪ್ತ ಬಾಲಕಿಯೊಂದಿಗೆ ಸಿಕ್ಕಿ ಬಿದ್ದಿರುವ ಮೇಜರ್ ಲೀತುಲ್ ಗೊಗೊಯಿ ಅವರ ವಿರುದ್ಧ ಭಾರತೀಯ ಸೇನೆ ಕೋರ್ಟ್ ತನಿಖೆಗೆ ಆದೇಶಿಸಿದೆ. ಕಾಶ್ಮೀರದಲ್ಲಿ ಕಳೆದ ವರ್ಷ ಸೇನಾ ಸಿಬ್ಬಂದಿ ಮೇಲೆ ಕಲ್ಲು ತೂರುತ್ತಿದ್ದ ಪ್ರತ್ಯೇಕವಾದಿಯೊಬ್ಬರನ್ನು ಹ್ಯೂಮನ್ ಶೀಲ್ಡ್ ಆಗಿ (ಮಾನವ ರಕ್ಷಣಾ ಕವಚ) ಬಳಸಿ, ತನ್ನ ಜೀಪಿನ ಬಾನೆಟ್‍ಗೆ ಕಟ್ಟಿ ಹಲವಾರು ಗ್ರಾಮಗಳಲ್ಲಿ ಪರೇಡ್ ಮಾಡಿಸಿ ಚರ್ಚೆಯ ಕೇಂದ್ರ ಬಿಂದುವಾಗಿದ್ದ ಸೇನಾ ಮೇಜರ್ ಲೀತುಲ್ ಗೊಗೊಯಿ ಅವರನ್ನು ನಿನ್ನೆ ಅಪ್ರಾಪ್ತ ಬಾಲಕಿಯೊಂದಿಗೆ ಶ್ರೀನಗರದ ಹೊಟೇಲ್‍ವೊಂದರಿಂದ ಬಂಧಿಸಲಾಗಿದೆ. ಇಂದು ಬೆಳಿಗ್ಗೆ ಈ ಕುರಿತು ಪ್ರತಿಕ್ರಿಯಿಸಿದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು, ಭಾರತೀಯ ಸೇನೆಯಲ್ಲಿ ಯಾವದೇ ಹುದ್ದೆಯಲ್ಲಿರುವ ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವದು ಮತ್ತು ಇತರರಿಗೆ ಮಾದರಿಯಾಗುವಂತಹ ಶಿಕ್ಷೆ ನೀಡಲಾಗುವದು ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಕೋರ್ಟ್ ತನಿಖೆಗೆ ಆದೇಶಿಸಲಾಗಿದೆ. ಹೊಟೇಲ್ ದಾಖಲೆಗಳ ಪ್ರಕಾರ ಇಬ್ಬರಿಗಾಗಿ ರೂಂ ಬುಕ್ ಮಾಡಿದ್ದ ಗೊಗೊಯಿ ಅವರು, ತನ್ನೊಂದಿಗೆ ಸಮೀರ್ ಅಹ್ಮದ್ ಎಂಬ ವ್ಯಕ್ತಿ ಹಾಗೂ ಸುಮಾರು 16 ವರ್ಷ ಪ್ರಾಯದ ಸ್ಥಳೀಯ ಹುಡುಗಿಯನ್ನೂ ರೂಂಗೆ ಕರೆತಂದಿದ್ದರು.
ಸಚಿವ ಜೇಟ್ಲಿ ಆರೋಗ್ಯದಲ್ಲಿ ಚೇತರಿಕೆ
ನವದೆಹಲಿ, ಮೇ 25: ತಾ. 14 ರಂದು ಏಮ್ಸ್ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಹಣಕಾಸು ಸಚಿವ ಅರುಣ್ ಜೇಟ್ಲಿ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಅವರನ್ನು ತುರ್ತು ನಿಗಾ ಘಟಕದಿಂದ ಸ್ಥಳಾಂತರ ಮಾಡಲಾಗುತ್ತಿದೆ. ಕಿಡ್ನಿ ಕಸಿ ಸರ್ಜನ್, ಅಂತಃಸ್ರಾವಶಾಸ್ತ್ರಜ್ಞ, ಮೂತ್ರಪಿಂಡ ಶಾಸ್ತ್ರಜ್ಞ, ಮತ್ತಿತರ ತಜ್ಞರನ್ನೊಳಗೊಂಡ ತಂಡದ ಮುತುವರ್ಜಿಯಿಂದಾಗಿ ಜೇಟ್ಲಿ ಅವರು ಕ್ಷಿಪ್ರ ರೀತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಜೇಟ್ಲಿ ಅವರ ಆರೋಗ್ಯದಲ್ಲಿ ಸುಧಾರಣೆಯಾಗಿದ್ದು, ವಾರಾಂತ್ಯದ ವೇಳೆಯಲ್ಲಿ ತುರ್ತು ನಿಗಾ ಘಟಕದಿಂದ ಪ್ರತ್ಯೇಕ ವಾರ್ಡ್‍ಗೆ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ದೂರದ ಸಂಬಂಧದ ಮಧ್ಯಮ ವಯಸ್ಸಿನ ಮಹಿಳೆಯೊಬ್ಬರು 65 ವರ್ಷದ ಅರುಣ್ ಜೇಟ್ಲಿಗೆ ತನ್ನ ಕಿಡ್ನಿಯನ್ನು ದಾನವಾಗಿ ನೀಡಿದ್ದಾರೆ. ಇದು ಸಂಬಂಧವಿಲ್ಲದ ದೇಣಿಗೆಯನ್ನು ಜೀವಂತವಾಗಿ ವರ್ಧಿಸುತ್ತದೆ ಎಂದು ಏಮ್ಸ್ ಮೂಲಗಳು ಹೇಳಿಕೆ ನೀಡಿವೆ.
ಭಿಕ್ಷೆ ಬೇಡಿ ಪ್ರತಿಭಟಿಸಿದ ಪೌರ ಕಾರ್ಮಿಕರು
ಶಿಗ್ಗಾವಿ, ಮೇ 25: ವೇತನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ತಾಲೂಕಿನ ಬಂಕಾಪುರ ಪುರಸಭೆ ಗುತ್ತಿಗೆ ಪೌರಕಾರ್ಮಿಕರು ಹಾಗೂ ನೀರು ಸರಬುರಾಜು ಕಾರ್ಮಿಕರ ಗುರುವಾರ ಮನೆ, ಮನೆಗೆ ತೆರಳಿ ಭಿಕ್ಷೆ ಬೇಡುವ ಮೂಲಕ ಪ್ರತಿಭಟನೆ ನಡೆಸಿದರು. ಬಂಕಾಪುರ ಪಟ್ಟಣದ ಅಂಬೇಡ್ಕರ್ ನಗರದ ಮಾದಾರ ಚನ್ನಯ್ಯ, ಹರಳಯ್ಯ ದೇವಸ್ಥಾನದಿಂದ ಮೆರವಣಿಯಲ್ಲಿ ಹೊರಟರು. ಎಂಇಎಸ್ ಶಾಲೆ ರಸ್ತೆ, ರೇಣುಕಾಚಾರ್ಯ ಬ್ಯಾಂಕ್ ರಸ್ತೆ, ನಾಡ ಕಚೇರಿ ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಭಿಕ್ಷಾಟನೆ ನಡೆಸಿದರು. ಭಿಕ್ಷೆ ಕೋರುತ್ತಲೇ ಪುರಸಭೆ ಕಚೇರಿಗೆ ತಲುಪಿ, ಸ್ಥಳೀಯ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಳೆದ 10 ತಿಂಗಳಿಂದ ವೇತನ ನೀಡಿಲ್ಲ. ಅದರಿಂದ ಅಂಗಡಿ ಮತ್ತು ಹೊಟೇಲ್‍ಗಳಲ್ಲಿ ಸಾಕಷ್ಟು ಸಾಲ ಮಾಡಲಾಗಿದೆ. ಸಾಲ ನೀಡಿದವರು ಮರಳಿ ಹಣ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಮನೆ ಬಾಡಿಗೆ, ಮಕ್ಕಳ ಶಾಲೆ ಶುಲ್ಕ ತುಂಬಲು ಹಣ ಇಲ್ಲದಾಗಿದೆ. ಅಲ್ಲದೆ ಕುಟುಂಬದ ಬಂಡಿ ಸಾಗಿಸುವದೂ ಕಷ್ಟವಾಗಿದೆ ಎಂದು ಗುತ್ತಿಗೆ ಪೌರಕಾರ್ಮಿಕ ಸಂಘದ ಅಧ್ಯಕ್ಷ ನಾಗಪ್ಪ ಕೂಡಲ ಅಳಲು ತೋಡಿಕೊಂಡರು.
ಗೂಡ್ಸ್ ರೈಲಿಗೆ ಸಿಲುಕಿ ವೃದ್ಧೆ ಸಾವು
ಕಲಬುರ್ಗಿ, ಮೇ 25: ಹಳಿ ದಾಟಲು ಹೋಗಿ ಗೂಡ್ಸ್ ರೈಲಿಗೆ ಸಿಲುಕಿ 75 ವರ್ಷದ ವೃದ್ಧೆಯೊಬ್ಬರು ಶಹಾಬಾದ ರೈಲು ನಿಲ್ದಾಣದಲ್ಲಿ ಮೃತಪಟ್ಟಿದ್ದಾರೆ. ಅಜ್ಜಿಯ ಮೃತದೇಹದೊಂದಿಗೆ ಸಿಕ್ಕಿರುವ ಬಸ್ ಟಿಕೆಟ್‍ನಿಂದಾಗಿ, ಅವರು ಜೇವರ್ಗಿಯಿಂದ ಬಸ್‍ನಲ್ಲಿ ಪಟ್ಟಣಕ್ಕೆ ಬೆಳಿಗ್ಗೆ ಬಂದಿದ್ದರು ಎಂದು ತಿಳಿದು ಬಂದಿದೆ. ಮೃತ ಅಜ್ಜಿ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ವಾಡಿಯ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೊನಾಲ್ಡಿನೋ ಕುರಿತು ಸುಳ್ಳು ಸುದ್ದಿ
ಬ್ರೆಜಿಲ್, ಮೇ 25: ಬ್ರೆಜಿಲ್ ದೇಶದ ಖ್ಯಾತ ಫುಟ್‍ಬಾಲ್ ತಾರೆ ಒಂದೇ ವೇದಿಕೆಯಲ್ಲಿ ಇಬ್ಬರು ಗೆಳತಿಯರನ್ನು ವರಿಸಲು ಸಿದ್ಧರಾಗಿ ನಿಂತಿದ್ದಾರೆ ಎಂಬ ವರದಿಗಳು ಪ್ರಕಟವಾಗಿತ್ತು. ಆದರೆ ಸ್ವತಃ ರೊನಾಲ್ಡಿನೋ ಸ್ಪಷ್ಟನೆ ನೀಡಿದ್ದು ಅದೊಂದು ಸುಳ್ಳು ಸುದ್ದಿ ಎಂದು ಹೇಳಿದ್ದಾರೆ. ಸ್ಪೋರ್ಟ್ ಟಿವಿಗೆ ತಮ್ಮ ವಿವಾಹದ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೊನಾಲ್ಡಿನೋ ಒಂದೇ ವೇದಿಕೆಯಲ್ಲಿ ಇಬ್ಬರು ಗೆಳತಿಯರನ್ನು ವರಿಸುವ ಸುದ್ದಿ ಅತಿ ದೊಡ್ಡ ಸುಳ್ಳು ಎಂದಷ್ಟೇ ಹೇಳಿದ್ದಾರೆ. ಬ್ರೆಝಿಲ್‍ನ ಓರ್ವ ಶ್ರೇಷ್ಟ ಫುಟ್ಬಾಲ್ ಆಟಗಾರನಾಗಿರುವ ರೊನಾಲ್ಡಿನೊ ಕಳೆದ ವರ್ಷ ತನ್ನ ಪ್ರಿಯತಮೆಯರಾದ ಪ್ರಿಸ್ಸಿಲ್ಲಾ ಕೊಯೆಲೊ ಮತ್ತು ಬೀಟ್ರಿಜ್ ಸೌಜಾರನ್ನು ವಿವಾಹವಾಗುವ ಬಗ್ಗೆ ಹೇಳಿಕೊಂಡಿದ್ದು, ಅವರಿಗೆ ನಿಶ್ಚಿತಾರ್ಥ ಉಂಗುರವನ್ನು ನೀಡಿದ್ದರು. ಅದರಂತೆ ರಿಯೋ ಡಿಜನೈರೊದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಇಬ್ಬರು ಯುವತಿಯರನ್ನು ಏಕ ಕಾಲದಲ್ಲಿ ರೊನಾಲ್ಡಿನೊ ವಿವಾಹವಾಗಲಿದ್ದಾರೆ ಎಂದು ಅಮೇರಿಕಾದ ದಿನ ಪತ್ರಿಕೆಯೊಂದು ವರದಿ ಮಾಡಿದೆ. ಆದರೆ ಈಗ ಸ್ವತಃ ರೊನಾಲ್ಡಿನೋ ಈ ಕುರಿತ ವರದಿಗಳಿಗೆ ತೆರೆ ಎಳೆದಿದ್ದಾರೆ.