ಮಡಿಕೇರಿ ಮೇ 25 : ವಿಶ್ವ ಯೋಗ ದಿನಾಚರಣೆ ಅಂಗವಾಗಿ ಮೇ 26 ರಿಂದ ಜೂ.21ರವರೆಗೆ ಕೊಡಗಿನ ವಿವಿಧೆಡೆಗಳಲ್ಲಿ ಉಚಿತ ಯೋಗ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾ ವಿದ್ಯಾಲಯದ ವೈದ್ಯರಾದ ಡಾ||ಕಾವ್ಯ ಹಾಗೂ ಡಾ|| ಸುಮನ ಅವರುಗಳು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಸರಕಾರದ ಆಯುಷ್ ಮಂತ್ರಾಲಯ, ಕೇಂದ್ರಿಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಸಂಸ್ಥೆ ವತಿಯಿಂದ ನಾಲ್ಕನೇ ವರ್ಷದ ಯೋಗ ದಿನಾಚರಣೆ ನಡೆಯಲಿದ್ದು, ಇದರ ಅಂಗವಾಗಿ ಜಿಲ್ಲೆಯ ಮಡಿಕೇರಿ, ಕುಶಾಲನಗರ, ಸೋಮವಾರಪೇಟೆ ಹಾಗೂ ಪೊನ್ನಂಪೇಟೆಯಲ್ಲಿ ಮೇ 26ರಿಂದ ಜೂ.21ರವರೆಗೆ ಉಚಿತ ಯೋಗ ಶಿಬಿರಗಳನ್ನು ಆಯೋಜಿಸಲಾಗಿದೆ. ಯೋಗದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ದು ಮತ್ತು ರೋಗ ಮುಕ್ತ ಸಮಾಜ ನಿರ್ಮಾಣ ಯೋಗ ದಿನಾಚರಣೆಯ ಉದ್ದೇಶವಾಗಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕಾರ್ಯಕ್ರಮವಾದ ವಿಶ್ವ ಯೋಗ ದಿನವನ್ನು ವಿಶ್ವದ ಸುಮಾರು 180 ರಾಷ್ಟ್ರಗಳು ಆಚರಿಸುತ್ತಿದ್ದು, ಇದು ಯೋಗಕ್ಕಿರುವ ಮಹತ್ವವನ್ನು ಸಾರುತ್ತದೆ. ಯೋಗ ಕಲಿಯುವದರಿಂದ ತಮಗೆ ತಾವೇ ವೈದ್ಯರಾಗ ಬಹುದಾಗಿದ್ದು, ರೋಗಗಳಿಂದ ಮುಕ್ತವಾಗಿರಬಹುದಾಗಿದೆ ಎಂದು ತಿಳಿಸಿದರು.
ಯೋಗ ದಿನದ ಅಂಗವಾಗಿ ಮಡಿಕೇರಿಯ ಲಕ್ಷ್ಮಿನರಸಿಂಹ ಕಲ್ಯಾಣ ಮಂಟಪ, ಕುಶಾಲನಗರದ ಕಾವೇರಿ ಕಲಾ ಪರಿಷತ್, ಸೋಮವಾರಪೇಟೆಯ ಮಹಿಳಾ ಸಮಾಜ ಹಾಗೂ ಬ್ರಹ್ಮಕುಮಾರಿ ಸಭಾಂಗಣ ಮತ್ತು ಪೊನ್ನಂಪೇಟೆಯ ರಾಮಕೃಷ್ಣ ಸೇವಾಶ್ರಮದಲ್ಲಿ ಪ್ರತೀದಿನ ಬೆಳಿಗ್ಗೆ 6ರಿಂದ 7 ಮತ್ತು ಸಂಜೆ 5.30ರಿಂದ 6.30ರವರೆಗೆ ಉಚಿತ ಯೋಗ ತರಬೇತಿ ಶಿಬಿರಗಳನ್ನು ನಡೆಯಲಿದ್ದು, ಶಿಬಿರದಲ್ಲಿ ಯೋಗದ ಜೊತೆಗೆ ಮನೆಮದ್ದು ಕೂಡಾ ಹೇಳಿಕೊಡಲಾಗುತ್ತದೆ ಎಂದು ಅವರು ವಿವರಿಸಿದರು.
ಕಳೆದ ಮೂರು ವರ್ಷಗಳಲ್ಲಿ ಅನೇಕ ಮಂದಿ ಯೋಗ ಕಲಿತು ತಮ್ಮ ಸುತ್ತಮುತ್ತಲ ಜನರಿಗೆ ಯೋಗವನ್ನು ಕಲಿಸಿಕೊಡುತ್ತಿದ್ದು, ಅದೇ ರೀತಿ ಈ ಶಿಬಿರದಲ್ಲಿ ಕಲಿತವರು ತಮ್ಮ ಮನೆಮಂದಿಗೆ ಹಾಗೂ ಸುತ್ತಮುತ್ತಲ ಜನರಿಗೆ ಯೋಗ ಹೇಳಿಕೊಡಬಹು ದಾಗಿದೆ ಎಂದು ತಿಳಿಸಿದ ಅವರು, ಈಗಾಗಲೇ ನೋಂದಣಿ ಆರಂಭವಾಗಿದ್ದು, ಮಡಿಕೇರಿಯ ಶಿಬಿರದಲ್ಲಿ ಭಾಗವಹಿಸಲಿಚ್ಛಿಸುವವರು 9480731020(ಮಹೇಶ್‍ಕುಮಾರ್), 9686315036 (ಬಾಹುಬಲಿ), ಕುಶಾಲನಗರದಲ್ಲಿ ಕಲಿಯಲಿಚ್ಛಿ ಸುವವರು 8495006857 (ಮಧುಸೂದನ್) 9449509587 (ಐಶ್ವರ್ಯ) ಸೋಮವಾರಪೇಟೆಯಲ್ಲಿ ಸೇರುವವರು 8861668976(ಗಣೇಶ್ ಕೆ.ಎಸ್) 9964618678(ಡಾ|| ಮಂಜುಶ್ರೀ) ಹಾಗೂ ಪೊನ್ನಂಪೇಟೆಯಲ್ಲಿ ಕಲಿಯುವವರು 9448564052 (ಲಾವಣ್ಯ) ಹಾಗೂ 9449911710 (ಪ್ರತಿಮಾ) ಅವರನ್ನು ಸಂಪರ್ಕಿಸ ಬಹುದೆಂದರು.
ಶಿಬಿರದ ಉದ್ಘಾಟನಾ ಕಾರ್ಯಕ್ರಮ ಮೇ 26(ಇಂದು) ಮಡಿಕೇರಿಯ ಲಕ್ಷ್ಮಿ ನರಸಿಂಹ ಕಲ್ಯಾಣ ಮಂಟಪದಲ್ಲಿ ಸಂಜೆ 6 ಗಂಟೆಗೆ ನಡೆಯಲಿದ್ದು, ಜಿಲ್ಲೆಯ ಇತರೆಡೆಗಳಲ್ಲಿ ಶಿಬಿರ ಆಯೋಜಿಸಲು ಆಸಕ್ತರಿದ್ದಲ್ಲಿ ಮೊಬೈಲ್ 9686315036 ಹಾಗೂ 9916697268 ಸಂಖ್ಯೆಗಳನ್ನು ಸಂಪರ್ಕಿಸಿದಲ್ಲಿ ಅಗತ್ಯ ಸಹಕಾರ ನೀಡಲಾಗುವದು ಎಂದರು.
ಶಿಬಿರದಲ್ಲಿ ಭಾಗವಹಿಸುವವರು ದಪ್ಪನೆಯ ಜಮಖಾನ ತರಬೇಕಲ್ಲದೆ, ಹಗುರವಾದ, ಸಡಿಲವಾದ ತೆಳ್ಳನೆಯ ಬಟ್ಟೆಯನ್ನು ಧರಿಸಿ ಬರಬೇಕು ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿ ಯಲ್ಲಿ ಮಡಿಕೇರಿಯ ಯೋಗ ಶಿಕ್ಷಕರಾದ ಕೆ.ಕೆ. ಮಹೇಶ್‍ಕುಮಾರ್, ಗೀತಾ ಗಿರೀಶ್, ಝಾನ್ಸಿ ಹಾಗೂ ಉಜಿರೆಯ ಬಾಹುಬಲಿ ಉಪಸ್ಥಿತರಿದ್ದು ಮಾಹಿತಿ ನೀಡಿದರು.