ಸೋಮವಾರಪೇಟೆ, ಮೇ 25: ಕೊಡಗು ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘದ ವತಿಯಿಂದ ಸಮೀಪದ ಮಾದಾಪುರ ಡಿ. ಚೆನ್ನಮ್ಮ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ 3ನೇ ವರ್ಷದ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಇಂದು ಚಾಲನೆ ನೀಡಲಾಯಿತು.

ಹರದೂರು ಗ್ರಾಮ ಪಂಚಾಯಿತಿ ಸದಸ್ಯ ಗೌತಮ್ ಶಿವಪ್ಪ, ಮಾಜೀ ಸದಸ್ಯ ನವೀನ್ ಡಿಸೋಜ, ನಿವೃತ್ತ ಪೋಸ್ಟ್‍ಮ್ಯಾನ್ ಉಲ್ಲಾಸ್, ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಜನಾರ್ಧನ್, ಉಪಾಧ್ಯಕ್ಷ ಕುಶಾಲಪ್ಪ ಅವರುಗಳು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಜನಾರ್ಧನ್, ಆದಿದ್ರಾವಿಡ ಸಮಾಜದ ಸರ್ವಾಂಗೀಣ ಬೆಳವಣಿಗೆಗಾಗಿ ಸಂಘದ ಸ್ಥಾಪಕಾಧ್ಯಕ್ಷರಾದ ದಿ. ಓಂಕಾರಪ್ಪ ಅವರು ಸಂಘಟನೆಯನ್ನು ಹುಟ್ಟು ಹಾಕಿದ್ದು, ಅವರ ಆಶೋತ್ತರಗಳನ್ನು ಈಡೇರಿಸುವ ಜವಾಬ್ದಾರಿ ಪದಾಧಿಕಾರಿಗಳ ಮೇಲಿದೆ. ಆದಿ ದ್ರಾವಿಡ ಸಮಾಜ ಬಾಂಧವರು ಇನ್ನಷ್ಟು ಸಂಘಟಿತರಾಗುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು. ಸಂಘದ ವತಿಯಿಂದ ಸಮಾಜ ಬಾಂಧವರಿಗೆ ಎಲ್ಲಾ ರೀತಿಯ ಸಹಾಯ ನೀಡುವದಾಗಿ ತಿಳಿಸಿದರು.

ಹರದೂರು ಗ್ರಾ.ಪಂ. ಸದಸ್ಯ ಗೌತಮ್ ಶಿವಪ್ಪ ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ದೂರದೃಷ್ಟಿತ್ವ ಜಗತ್ತೇ ಮೆಚ್ಚುವಂತದ್ದು. ಸಂವಿಧಾನದ ಯಥಾವತ್ ಜಾರಿಯಿಂದ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯ. ಸಮಾಜ ಬಾಂಧವರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡುವಂತಾಗಬೇಕು ಎಂದು ಕಿವಿಮಾತು ಹೇಳಿದರು.

ನಂತರ ಸಮಾಜದ ಸದಸ್ಯರಿಗೆ ಕ್ರಿಕೆಟ್, ಕಬಡ್ಡಿ, ಫುಟ್‍ಬಾಲ್, ವಾಲಿಬಾಲ್, ಹಗ್ಗಜಗ್ಗಾಟ, ಗುಡ್ಡಗಾಡು ಓಟ ಸೇರಿದಂತೆ ಸಾಂಸ್ಕøತಿಕ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ತಾ. 26 (ಇಂದು) ಮತ್ತು ತಾ. 27ರಂದು ಕ್ರೀಡಾಕೂಟ ಮುಂದುವರೆಯಲಿದ್ದು, ತಾ. 27ರ ಸಂಜೆ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ನಡೆಯಲಿದೆ.