ಮಡಿಕೇರಿ, ಮೇ 23: ವೀರಾಜಪೇಟೆ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ನಿಲಯಗಳಾದ ಶ್ರೀಮಂಗಲ, ಪೊನ್ನಂಪೇಟೆ, ಬಿರುನಾಣಿ ಮತ್ತು ಬಾಲಕಿಯರ ನಿಲಯ ಪೊನ್ನಂಪೇಟೆ ಹಾಗೂ ಹುದಿಕೇರಿಯಲ್ಲಿ ಪ್ರಸಕ್ತ ಸಾಲಿಗೆ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.
ವಿದ್ಯಾರ್ಥಿ ನಿಲಯಗಳಿಗೆ 5ನೇ ತರಗತಿಯಿಂದ 10ನೇ ತರಗತಿಯವರಿಗೆ ವರ್ಗ-1, 2ಎ, 2ಬಿ, 3ಎ, 3ಬಿ, ಹಾಗೂ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವಿದೆ. ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಶೈಕ್ಷಣಿಕ ಸಂಸ್ಥೆಯಿಂದ 5 ಕಿ.ಮೀ.ಗಿಂತಲೂ ಕಡಿಮೆ ದೂರದಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ ಶೇ. 10 ರಷ್ಟು ಹಾಗೂ 5 ಕಿ.ಮೀ ಗಿಂತ ಹೆಚ್ಚಿನ ದೂರದವರೆಗಿನ ಶೇ.90 ಪ್ರವೇಶಾವಕಾಶವಿದೆ.
ತೇರ್ಗಡೆಯಾದ ಕುರಿತು ಅಂಕಪಟ್ಟಿಯ ಪ್ರತಿ ಹಾಗೂ 3 ಸ್ಟ್ಯಾಂಪ್ ಅಳತೆಯ ಭಾವಚಿತ್ರ, ಜಾತಿ ಹಾಗೂ ಆದಾಯ ಧೃಡೀಕರಣ ಪತ್ರ ಮತ್ತು ಅಂತರದ ಕುರಿತು ಗ್ರಾಮ ಪಂಚಾಯಿತಿಯಿಂದ ಪಡೆದ ಧೃಡೀಕರಣ ಪತ್ರ, ಬ್ಯಾಂಕ್ ಪುಸ್ತಕ ಹಾಗೂ ಆಧಾರ್ ಸಂಖ್ಯೆಯನ್ನು ಅರ್ಜಿಯ ಜೊತೆಯಲ್ಲಿ ಲಗತ್ತಿಸಿ ಕಳುಹಿಸುವದು. ನವೀಕರಣ ವಿದ್ಯಾರ್ಥಿಗಳು ಹೊಸದಾಗಿ ಅರ್ಜಿಯನ್ನು ಅಂಕಪಟ್ಟಿಯೊಂದಿಗೆ ಸಲ್ಲಿಸುವದು ಪ್ರವೇಶ ಬಯಸುವ ಹಿಂದುಳಿದ ವರ್ಗಗಳ 2ಎ, 2ಬಿ, 3ಎ, ಮತ್ತು 3ಬಿ ವರ್ಗದ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ರೂ 44,500 ರೂಪಾಯಿಗಳ ಮಿತಿಯೊಳಗೆ ಇರಬೇಕು. ವರ್ಗ-1 ಕ್ಕೆ ಆದಾಯದ ಮಿತಿ 1 ಲಕ್ಷ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಆದಾಯದ ಮಿತಿ 50,920 ಇರತಕ್ಕದ್ದು.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯದಲ್ಲಿ ಉಚಿತ ಊಟ ಮತ್ತು ವಸತಿ ಸೌಲಭ್ಯ, ಪಠ್ಯ ಪುಸ್ತಕಗಳು ಲೇಖನ ಸಾಮಾಗ್ರಿ ಹಾಗೂ ಸಮವಸ್ತ್ರಗಳನ್ನು ಉಚಿತವಾಗಿ ನೀಡಲಾಗುವದು. ನಿಗದಿತ ಅರ್ಜಿ ನಮೂನೆಯನ್ನು ಮೇ 22ರ ನಂತರ ಆಯಾ ನಿಲಯಗಳ ಮೇಲ್ವಿಚಾರಕರಿಂದ ಅಥವಾ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಛೇರಿ ಪೊನ್ನಂಪೇಟೆಯಿಂದ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಆಯಾ ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಕರಿಗೆ ಅಥವಾ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಛೇರಿ ಪೊನ್ನಂಪೇಟೆ ಇಲ್ಲಿಗೆ ಜೂನ್ 20 ರೊಳಗಾಗಿ ಸಲ್ಲಿಸಬೇಕು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಅವರು ತಿಳಿಸಿದ್ದಾರೆ.