ಮಡಿಕೇರಿ, ಮೇ 23: ಕೊಡವ ಕುಟುಂಬಗಳ ನಡುವೆ ಇಲ್ಲಿನ ಫೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮಡ್ಲಂಡ ಕ್ರಿಕೆಟ್ ಕಪ್ ಅಂತಿಮ ಘಟ್ಟ ಪ್ರವೇಶಿಸಿದ್ದು, ತಾ. 24ರಂದು (ಇಂದು) ಸೆಮಿಫೈನಲ್ ಪಂದ್ಯಾವಳಿಗಳು ನಡೆಯಲಿವೆ.

ಇಂದು ನಡೆದ ಕ್ವಾರ್ಟರ್ ಫೈನಲ್ ಪಂದ್ಯಾವಳಿಯಲ್ಲಿ ಅಚ್ಚಪಂಡ ತಂಡ 8 ಓವರ್‍ನಲ್ಲಿ 6 ವಿಕೆಟ್ ಕಳೆದುಕೊಂಡು 36 ರನ್ ಗಳಿಸಿದರೆ, ನೆರವಂಡ ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ ಗುರಿ ಸಾಧಿಸಿತು. ನೆರವಂಡ ಪ್ರಶಾಂತ್ 19 ಎಸೆತಗಳಲ್ಲಿ 32 ರನ್ ಗಳಿಸಿ ಗೆಲುವಿನ ರೂವಾರಿಯಾದರು. 13 ರನ್ ಗಳಿಸಿದ ಅಚ್ಚಪಂಡ ಬೋಪಣ್ಣ ಪಂದ್ಯ ಪುರುಷ ಪ್ರಶಸ್ತಿ ಗಳಿಸಿದರು. ಕುಟ್ಟಂಡ ತಂಡ 4 ವಿಕೆಟ್‍ಗೆ 59 ರನ್ ಗಳಿಸಿದರೆ, ಅಳಮೇಂಗಡ ತಂಡ ಕೂಡ 2 ವಿಕೆಟ್ ನಷ್ಟದಲ್ಲಿ 59 ರನ್ ಗಳಿಸಿ ಪಂದ್ಯ ಸಮನಾಗಿಸಿ ಕೊಂಡಿತು. ರೋಚಕತೆಯಿಂದ ಕೂಡಿದ್ದ ಪಂದ್ಯಾವಳಿಯನ್ನು ನಿಯಮಾನುಸಾರ ಸೂಪರ್ ಓವರ್‍ಗೆ ಅಳವಡಿಸಲಾಯಿತು. ಇದರಲ್ಲಿ ಅಳಮೇಂಗಡ 1 ವಿಕೆಟ್‍ಗೆ 2 ರನ್ ಗಳಿಸಿದರೆ, ಕುಟ್ಟಂಡ ವಿಕೆಟ್ ನಷ್ಟವಿಲ್ಲದೆ 3 ರನ್ ಗಳಿಸಿ ಗೆಲುವು ಸಾಧಿಸಿತು. ಕುಟ್ಟಂಡ ಕುಟ್ಟಪ್ಪ 19 ರನ್ ಗಳಿಸಿದರೆ, 45 ರನ್ ಗಳಿಸಿದ ಅಳಮೇಂಗಡ ಡಿಪಿನ್ ಪಂದ್ಯ ಪುರುಷ ಪ್ರಶಸ್ತಿ ಪಡೆದರು.

ಅಮ್ಮಾಟಂಡ ತಂಡ 3 ವಿಕೆಟ್‍ಗೆ 47 ರನ್ ಗಳಿಸಿದರೆ, ಕಳಕಂಡ ತಂಡ 2 ವಿಕೆಟ್ ನಷ್ಟದಲ್ಲಿ 51 ರನ್ ಗಳಿಸಿ ಗುರಿ ಸಾಧಿಸಿತು. ಕಳಕಂಡ ನಿತಿನ್ 19 ರನ್ ಗಳಿಸಿದರೆ, 14 ರನ್ ಗಳಿಸಿದ ಅಮ್ಮಾಟಂಡ ನಾಚಪ್ಪ ಪಂದ್ಯ ಪುರುಷ ಪ್ರಶಸ್ತಿ ಪಡೆದರು. ಪುದಿಯತಂಡ ತಂಡ 4 ವಿಕೆಟ್‍ಗೆ 58 ರನ್ ಗಳಿಸಿದರೆ, ತಂಬುಕುತ್ತಿರ ತಂಡ 6 ವಿಕೆಟ್ ನಷ್ಟದಲ್ಲಿ ಗುರಿ ಸಾಧಿಸಿತು. ತಂಬುಕುತ್ತಿರ ಅರುಣ್ 19 ರನ್ ಗಳಿಸಿದರೆ, ಪುದಿಯತಂಡ ಜೀವನ್ ಪಂದ್ಯ ಪುರುಷ ಪ್ರಶಸ್ತಿ ಪಡೆದರು.