ಗೋಣಿಕೊಪ್ಪಲು, ಮೇ. 23: ಅದ್ಧೂರಿಯ ಮೊದಲ ಕೊಡಗು ಬಲಿಜ ಕ್ರೀಡೋತ್ಸವಕ್ಕೆ ಪೂರ್ವಭಾವಿ ಸಿದ್ಧತೆಗಳು ನಡೆಯುತ್ತಿದ್ದು, ಬೆಂಗಳೂರಿನ ಹಿಮಬಿಂದು ಮತ್ತು ತಂಡ ಕಾಫಿ ಹುಡಿ ಹಾಗೂ ಡಿಕಾಕ್ಷನ್ ನಿಂದ ತಯಾರಿಸಿರುವ ಚಿತ್ರಕಲಾ ಪ್ರದರ್ಶನ ಮತ್ತು ಮಾರಾಟ ಮಳಿಗೆ ವಿಶೇಷ ಆಕರ್ಷಣೆಯಾಗಿದೆ ಎಂದು ಕೊಡಗು ಬಲಿಜ ಸಮಾಜ ಅಧ್ಯಕ್ಷ ಟಿ. ಎಲ್. ಶ್ರೀನಿವಾಸ್ ತಿಳಿಸಿದ್ದಾರೆ.
ತಾ. 26 ಹಾಗೂ ತಾ. 27 ರಂದು ಹಾತೂರು ಶಾಲಾ ಮೈದಾನ ದಲ್ಲಿ ಜರುಗುವ ಕ್ರೀಡೋತ್ಸವ ಅಂಗವಾಗಿ ಬೆಂಗಳೂರಿನ ಡಾ. ಲಯನ್ ರವಿನಾಯ್ಡು ತಂಡ ಸಂಚಾರಿ ಉಚಿತ ನೇತ್ರ ಚಿಕಿತ್ಸೆ ಕಾರ್ಯಕ್ರಮ, ವೀರಾಜಪೇಟೆಯ ಚಿತ್ರಕಲಾವಿದ ಸತೀಶ್ ಅವರ ತೈಲ ವರ್ಣದ ಚಿತ್ರಕಲಾ ಪ್ರದರ್ಶನ, ವೀರಾಜಪೇಟೆಯ ಅಜಯ್ ನಾರಾಯಣ ರಾವ್ ಅವರ ಪುರಾತನ ನಾಣ್ಯ ಮತ್ತು ನೋಟುಗಳ ಪ್ರದರ್ಶನ, ಬೆಂಗಳೂರಿನ ಬಲಿಜ ಬಿಂಬ ಪತ್ರಿಕೆಯ ಪ್ರದರ್ಶನ ಮತ್ತು ಮಾರಾಟ ಇದೆ. ತಾ. 25 ರಂದು ಬಲಿಜ ಕ್ರೀಡೋತ್ಸವ ಲಾಂಛನ ಬಿಡುಗಡೆ ಮತ್ತು ಕಲಾವಿದ ಸತೀಶ್ ಅವರನ್ನು ಹಾತೂರು ಮೈದಾನದಲ್ಲಿ ಗೌರವಿಸಲಾಗುತ್ತದೆ.
ಕಳೆದ ಮೂರು ತಿಂಗಳಿ ನಿಂದಲೂ ಜಿಲ್ಲೆಯ ವಿವಿಧೆಡೆ ಗಣತಿ ಮತ್ತು ಕ್ರೀಡೋತ್ಸವ ಪ್ರಚಾರ ಕಾರ್ಯವನ್ನು ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಮ್ ಅವರು ಕ್ರೀಡೋತ್ಸವವನ್ನು ಉದ್ಘಾಟಿಸಲಿದ್ದಾರೆ.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಬಲಿಜ ಸಮಾಜ ಆರೆಂಜ್ ತಂಡಗಳ ನಡುವೆ ಇದೇ ಸಂದರ್ಭ ತಲಾ 5 ಓವರ್ಗಳ ಕ್ರಿಕೆಟ್ ಪ್ರದರ್ಶನ ಪಂದ್ಯಾಟ ನಡೆಯಲಿದೆ.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ಟಿ.ಎಲ್.ಶ್ರೀನಿವಾಸ್, ಸಭಾಧ್ಯಕ್ಷತೆ ಮೂರ್ನಾಡುವಿನ ಟಿ.ಎನ್.ಲೋಕನಾಥ್ ವಹಿಸಲಿದ್ದು ಬೆಂಗಳೂರು ಮಾಜಿ ಬಿಬಿಎಂಪಿ ಮೇಯರ್ ಜಿ.ಪದ್ಮಾವತಿ, ಮಾಜಿ ಶಾಸಕ ಆರ್.ವಿ.ದೇವರಾಜು, ಕರ್ನಾಟಕ ರಾಜ್ಯ ಬಲಿಜ ಸಂಘ ಉಪಾಧ್ಯಕ್ಷ ರವಿನಾಯ್ಡು, ಕೊಡಗು ಪತ್ರಕರ್ತರ ಸಂಘ ಹಾಗೂ ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಮಾಜಿ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ
ಟಿ. ಪಿ. ರಮೇಶ್, ಕರ್ನಾಟಕ ಪ್ರದೇಶ ಬಲಿಜ ಸಂಘ ಅಧ್ಯಕ್ಷ ಪೆರಿಕಲ್ ಎಂ. ಸುಂದರ್, ವೀರಾಜಪೇಟೆ ಡಿವೈಎಸ್ಪಿ ನಾಗಪ್ಪ, ಬಲಿಜ ಸಮುದಾಯದ ಪ್ರಮುಖ ರಾದ ಮಂಜುಳಾ ನಾಯ್ಡು, ಮೀನಾ ತೂಗುದೀಪ ಶ್ರೀನಿವಾಸ್, ಮಮತಾ ದೇವರಾಜ್, ಚಲನಚಿತ್ರ ನಟ ಇಶಾನ್, ಮೈಸೂರಿನ ರೇಣುಲ್ ಹೇಮಂತ್ಕುಮಾರ್, ಬಲಿಜ ಬಿಂಬ ಸಂಪಾದಕ ಎನ್.ಸಂಜೀವಪ್ಪ, ಭದ್ರಾವತಿ ತಾಲೂಕು ಬಲಿಜ ಸಂಘದ ಅಧ್ಯಕ್ಷ ಎಸ್. ಎನ್. ಸುಬ್ರಮಣ್ಯ, ಮೈಸೂರಿನ ಹೇಮಂತ್ಕುಮಾರ್, ಬೆಂಗಳೂರಿನ ಮುನಿರಾಜು, ಚಾಮರಾಜನಗರ ಜಿಲ್ಲೆಯ ಬಲಿಜ ಮುಖಂಡ ಶ್ರೀಕಾಂತ್, ಬೆಂಗಳೂರಿನ ಬಲಿಜ ಅಭಿಮಾನಿ ಫ್ಲವರ್ ವೆಂಕಟೇಶ್, ಕೊಡಗು ಬಲಿಜ ಸಮಾಜದ ಪ್ರಧಾನ ಕಾರ್ಯದರ್ಶಿ ಗೀತಾ ನಾಯ್ಡು, ಉಪಾಧ್ಯಕ್ಷರಾದ ಟಿ.ವಿ.ಲೋಕೇಶ್, ಯತಿರಾಜು ನಾಯ್ಡು ಹಾಗೂ ಗೀತಾ ಹರೀಶ್ ಗೌರವ ಉಪಸ್ಥಿತಿಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.
ತಾ. 27 ರಂದು ಅಪರಾಹ್ನ ಕ್ರಿಕೆಟ್ ಫೈನಲ್, ಹಗ್ಗ ಜಗ್ಗಾಟ ಫೈನಲ್ಸ್ ಹಾಗೂ ಸಂಗೀತ ಕುರ್ಚಿ ಕಾರ್ಯಕ್ರಮ ನಡೆಯಲಿದ್ದು ಬೆಂಗಳೂರು ಸಂಸದ ಪಿ. ಸಿ. ಮೋಹನ್ ಬಹುಮಾನ ವಿತರಣೆ ಮಾಡಲಿದ್ದಾರೆ. ಕರ್ನಾಟಕ ರಾಜ್ಯ ಬಲಿಜ ಸಂಘ ಅಧ್ಯಕ್ಷ ಹಾಗೂ ಕ್ರಿಕೆಟ್ ಮತ್ತು ಹಗ್ಗ ಜಗ್ಗಾಟ ಟ್ರೋಫಿ ದಾನಿಗಳಾದ ಟಿ.ವೇಣುಗೋಪಾಲ್ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಕೆ. ಜಿ. ಬೋಪಯ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಶೇ.70 ರಷ್ಟು ಬಲಿಜ ಗಣತಿ ಕಾರ್ಯ ಪೂರ್ಣಗೊಂಡಿದ್ದು, ಕ್ರೀಡೋತ್ಸವ ನಂತರ ಮುಂದುವರಿಯಲಿದೆ ಎಂದು ಟಿ. ಎಲ್. ಶ್ರೀನಿವಾಸ್ ತಿಳಿಸಿದ್ದಾರೆ.
ಕೊಡಗು ಹಾಗೂ ಹೊರ ಜಿಲ್ಲೆಯಿಂದ ಕ್ರೀಡೋತ್ಸವ ವೀಕ್ಷಣೆಗೆ ಸಹಸ್ರಾರು ಸಂಖ್ಯೆಯಲ್ಲಿ ಬಲಿಜ ಬಂಧುಗಳು ಆಗಮಿಸಲಿರುವದಾಗಿ ತಿಳಿಸಿದ್ದಾರೆ.