ಸೋಮವಾರಪೇಟೆ, ಮೇ. 22: ರಾಜ್ಯದಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಸಲುವಾಗಿ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ಈ ಸರ್ಕಾರ ಹೆಚ್ಚು ದಿನ ಉಳಿಯುವದಿಲ್ಲ. ಮುಂದಿನ 6 ತಿಂಗಳಲ್ಲೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೇರಲಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಿಸಿದರು.

ಪಟ್ಟಣದಲ್ಲಿರುವ ಪಕ್ಷದ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅತೀ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದ್ದರೂ ಸಹ ಕಾಂಗ್ರೆಸ್ ಹಾಗು ಜೆ.ಡಿ.ಎಸ್.ನ ಅಪವಿತ್ರ ಮೈತ್ರಿಯಿಂದಾಗಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಆದರೆ ಈ ಮೈತ್ರಿ ಸರ್ಕಾರ ಅಲ್ಪಾಯುಷಿ. ಮುಂದಿನ ಆರು ತಿಂಗಳಲ್ಲಿ ಸರ್ಕಾರ ಉರುಳುತ್ತದೆ ಎಂದು ಭವಿಷ್ಯ ನುಡಿದರು.

ಕೊಡಗಿನಲ್ಲಿ ಜಾತೀಯತೆಯ ರಾಜಕೀಯ ನಡೆಯುವದಿಲ್ಲ ಎಂಬದನ್ನು ಮತದಾರರು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಪಕ್ಷದೊಳಗಿದ್ದ ಕೆಲ ವಿರೋಧಿಗಳಿಗೆ ಮತದಾರರ ಈ ತೀರ್ಪು ಎಚ್ಚರಿಕೆಯ ಗಂಟೆಯಾಗಿದೆ. ಬಿಜೆಪಿ ಕಾರ್ಯಕರ್ತರ ಪಕ್ಷ ಎಂಬದನ್ನು ಎಲ್ಲಾ ಕಾರ್ಯಕರ್ತರು ನಿರೂಪಿಸಿದ್ದಾರೆ ಎಂದ ರಂಜನ್, ಮುಂದಿನ ದಿನಗಳಲ್ಲಿ ಕ್ಷೇತ್ರ ವ್ಯಾಪಿ ಸಂಚರಿಸಿ ಸ್ಥಳೀಯ ಸಮಸ್ಯೆಗಳನ್ನು ಗಮನಿಸಿ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವದು ಎಂದು ಭರವಸೆ ವ್ಯಕ್ತಪಡಿಸಿದರು.

ಕ್ಷೇತ್ರದ ಮತದಾರರ ಆಶೀರ್ವಾದದಿಂದ 5 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಈ ಬಾರಿಯ ಹ್ಯಾಟ್ರಿಕ್ ಗೆಲುವು ಸಾಧನೆಯಾಗಿದೆ. ಕಾರ್ಯಕರ್ತರ ಅವಿರತ ಶ್ರಮ ಹಾಗೂ ಮತದಾರರು ಬಿಜೆಪಿಯ ಮೇಲಿಟ್ಟಿರುವ ನಂಬಿಕೆಗೆ ಈ ಚುನಾವಣೆ ಸಾಕ್ಷಿಯಾಗಿದೆ ಎಂದ ಅವರು, ಕಳೆದ ಎಲ್ಲಾ ಚುನಾವಣೆಗಳಲ್ಲಿ ಗಳಿಸಿದ ಮತಗಳ ಅಂತರ ಈ ಚುನಾವಣೆಯ ಅಂತರಕ್ಕೆ ಸಮನಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಜಿಲ್ಲೆಯ ಜನತೆಗೆ ಬೆಳಕು, ಸೂರು, ನೀರು, ಒದಗಿಸುವದು ನಮ್ಮ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಕೆಲಸ ನಿರ್ವಹಿಸಲಾಗುವದು. ಜನತೆಯ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವದು ಎಂದರು.

ಈ ಹಿಂದೆ ಬಿ.ಜೆ.ಪಿ. ಸರ್ಕಾರವಿದ್ದಾಗ ಜಿಲ್ಲೆಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ನಂತರದ ಕಾಂಗ್ರೆಸ್ ಸರ್ಕಾರದ ಮಲತಾಯಿ ಧೋರಣೆಯಿಂದ ಅಭಿವೃದ್ಧಿ ಕಾರ್ಯಗಳು ನಡೆಸಲು ಸಾಧ್ಯವಾಗಲಿಲ್ಲ ಎಂದ ರಂಜನ್, ಮಡಿಕೇರಿ ವಿಧಾನ ಸಭಾಕ್ಷೇತ್ರ ದೊಡ್ಡ ಕ್ಷೇತ್ರವಾಗಿರುವದರಿಂದ ಹಾಗೂ ಸೀಮಿತ ಅನುದಾನದಿಂದ ಗಮನಾರ್ಹ ಅಭಿವೃದ್ಧಿ ಸಾಧ್ಯವಾಗಿಲ್ಲ. ಈ ಬಾರಿ ಹೆಚ್ಚಿನ ಶ್ರಮವಹಿಸಿ ಜನತೆಯ ಬೇಡಿಕೆಗಳಿಗೆ ಸ್ಪಂದಿಸುವದಾಗಿ ತಿಳಿಸಿದರು.