ಸೋಮವಾರಪೇಟೆ,ಮೇ.21: ಇಲ್ಲಿನ ತಾಲೂಕು ಕಚೇರಿಯಲ್ಲಿ ಆರ್‍ಟಿಸಿ ಪಡೆಯಲು ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಂದ್ರದಲ್ಲಿರುವ ಪ್ರಿಂಟರ್‍ನಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿರುವದರಿಂದ ಸಮಸ್ಯೆ ಸೃಷ್ಟಿಯಾಗಿದೆ.ಆರ್‍ಟಿಸಿ ವಿತರಣಾ ಕೇಂದ್ರದ ಪ್ರಿಂಟರ್ ಕಳೆದ 1 ತಿಂಗಳಿನಿಂದ ಕೆಟ್ಟುನಿಂತಿದ್ದು, ನೆಮ್ಮದಿ ಕೇಂದ್ರದಲ್ಲಿ ಆರ್‍ಟಿಸಿ ಪಡೆಯಬೇಕಿರುವದರಿಂದ ಗಂಟೆಗಟ್ಟಲೆ ಕಾದು ನಿಲ್ಲಬೇಕಾಗಿದೆ. ನೆಮ್ಮದಿ ಕೇಂದ್ರದಲ್ಲಿ ಹಲವಷ್ಟು ದಾಖಲೆಗಳನ್ನು ಸಾರ್ವಜನಿಕರಿಗೆ ವಿತರಿಸಬೇಕಿದ್ದು, ಇದರ ಮಧ್ಯೆ ಆರ್‍ಟಿಸಿ ನೀಡುವದು ಕಷ್ಟಕರವಾಗಿದೆ. ಆರ್‍ಟಿಸಿ ವಿತರಣಾ ಕೇಂದ್ರದಲ್ಲಿ ಸಿಬ್ಬಂದಿಗಳಿದ್ದಾರೆ. ಆದರೆ ಪ್ರಿಂಟರ್ ಇಲ್ಲ. ಕಂದಾಯ ಇಲಾಖೆಯ ಮೇಲಾಧಿಕಾರಿಗಳು ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ತಕ್ಷಣ ಆರ್‍ಟಿಸಿ ಕೇಂದ್ರಕ್ಕೆ ನೂತನ ಪ್ರಿಂಟರ್ ಒದಗಿಸುವ ಮೂಲಕ ಸಮಸ್ಯೆ ಬಗೆಹರಿಸಬೇಕು ಎಂದು ಕೃಷಿಕರು ಒತ್ತಾಯಿಸಿದ್ದಾರೆ.