ನಾಪೋಕ್ಲು, ಮೇ 21: ಕೊಡವ ಕೌಟುಂಬಿಕ ಹಾಕಿ ಉತ್ಸವದ ಫೈನಲ್ ಪಂದ್ಯ ಎರಡು ಬಲಿಷ್ಟ ತಂಡಗಳ ನಡುವೆ ರೋಚಕವಾಗಿ ನಡೆದು ಮುಕ್ತಾಯಗೊಂಡಿತು. ಇದು ಪಂದ್ಯಕ್ಕೆ ಸಂಬಂಧಿಸಿದ ವಿಚಾರವಾದರೆ ಸಂಜೆ ಈ ತನಕದ ಎಲ್ಲಾ ದುಗುಡ - ದುಮ್ಮಾನಗಳನ್ನು ಮರೆತು ಸಂಘಟಕರಾದ ಕುಲ್ಲೇಟಿರ ಕುಟುಂಬಸ್ಥರು ಸೇರಿದಂತೆ ನಾಪೋಕ್ಲು ವಿಭಾಗದ ಸುಮಾರು ಎರಡು ಸಾವಿರ ಮಂದಿ ಸಂಗೀತ, ನೃತ್ಯ, ವಾಲಗತಾಟ್‍ನೊಂದಿಗೆ ಸಂಭ್ರಮಿಸಿದರು. ಸಂಜೆ 7 ಗಂಟೆಯಿಂದ ಡಿಜೆ ನೈಟ್ಸ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಲಾವಿದರಾದ ಉಳುವಂಗಡ ಲೋಹಿತ್ ಭೀಮಯ್ಯ, ಚೆಕ್ಕೇರ ಪಂಚಮ್ ತ್ಯಾಗರಾಜ್, ಮಣವಟ್ಟಿರ ದಯಾ ಕುಟ್ಟಪ್ಪ, ನೆಲ್ಲಮಕ್ಕಡ ಸಾಗರ್, ಬಟ್ಟೀರ ಲಿಖಿತಾ ಅವರಿಂದ ಕೊಡವ ಹಾಡು, ಬಳಿಕ ಡಿ.ಜೆ., ನಡುವೆ ಕೊಡವ ವಾಲಗಕ್ಕೆ ಹೆಜ್ಜೆ ಹಾಕುವದರೊಂದಿಗೆ 22ನೆಯ ವರ್ಷದ ಕೌಟುಂಬಿಕ ಹಾಕಿಗೆ ಸಂಭ್ರಮದ ತೆರೆ ಬಿದ್ದಿತು. ತಡರಾತ್ರಿ 10 ಗಂಟೆಯ ತನಕವೂ ನಾಪೋಕ್ಲುವಿನ ಹಾಕಿ ಮೈದಾನ ಝಗಮಗಿಸುತ್ತಿತ್ತಲ್ಲದೆ ನಾಲ್ಕುನಾಡು ವಿಭಾಗದ ಮಂದಿ ಸಡಗರದಿಂದಿದ್ದರು.