ಮಡಿಕೇರಿ, ಮೇ 21 : ರೋಟರಿ ಮಿಸ್ಟಿ ಹಿಲ್ಸ್ ಉತ್ತಮ ಯೋಜನೆಗಳ ಸಾಧನೆಗಾಗಿ ರೋಟರಿ ಜಿಲ್ಲೆಯ ಬೃಹತ್ ಕ್ಲಬ್ ವಿಭಾಗದಲ್ಲಿ ನಾಲ್ಕು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ರೋಟರಿ ಜಿಲ್ಲೆ 3181 ವತಿಯಿಂದ ನೀಡಲಾಗುವ ಅತ್ಯುತ್ತಮ ಯೋಜನೆಗಳಿಗಾಗಿನ ಪ್ರಶಸ್ತಿಗಳಿಗಾಗಿ ರೋಟರಿ ಜಿಲ್ಲಾ ವ್ಯಾಪ್ತಿಯ 4 ಕಂದಾಯ ಜಿಲ್ಲೆಗಳಲ್ಲಿನ ರೋಟರಿ ಕ್ಲಬ್ಗಳ ಪೈಕಿ ಬೃಹತ್ ಕ್ಲಬ್ ವಿಭಾಗದಲ್ಲಿ ಮಡಿಕೇರಿಯ ಮಿಸ್ಟಿ ಹಿಲ್ಸ್ ನಾಲ್ಕು ಪ್ರಶಸ್ತಿಗಳನ್ನು ಪಡೆದಿದೆ.
ಮೂಡಬಿದಿರೆಯಲ್ಲಿ ಜರುಗಿದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಅನಿಲ್ ಎಚ್.ಟಿ, ಕಾರ್ಯದರ್ಶಿ ಪಿ.ಎಂ.ಸಂದೀಪ್, ನಿರ್ದೇಶಕ ದೇವಣೀರ ತಿಲಕ್ ಪ್ರಶಸ್ತಿ ಸ್ವೀಕರಿಸಿದರು.
ರೋಟರಿ ಜಿಲ್ಲೆಯಲ್ಲಿನ 10 ಬೃಹತ್ ಕ್ಲಬ್ ಗಳ ಪೈಕಿ ಮಿಸ್ಟಿ ಹಿಲ್ಸ್ ಗ್ರಾಬಲ್ ಗ್ರ್ಯಾಂಟ್ ನಲ್ಲಿ ಪ್ರಥಮ, ರೋಟರಿ ಮಾಹಿತಿ ನೀಡಿಕೆಯಲ್ಲಿ ಪ್ರಥಮ, ವಾರ್ತಾ ಸಂಚಿಕೆಯಲ್ಲಿ ತೃತೀಯ ಮತ್ತು ಫ್ರೆಂಡ್ ಶಿಪ್ ಎಕ್ಸ್ ಚೇಂಜ್ನಲ್ಲಿ ತೃತೀಯ ಪ್ರಶಸ್ತಿಗಳನ್ನು ಪಡೆದಿದೆ.
ರೋಟರಿ ಜಿಲ್ಲಾ ರಾಜ್ಯಪಾಲ ಮಾತಂಡ ಸುರೇಶ್ ಚಂಗಪ್ಪ ಅತ್ಯುತ್ತಮ ಯೋಜನೆಗಳಿಗಾಗಿ ಪ್ರಶಸ್ತಿ ಗಳಿಸಿದ ಕ್ಲಬ್ಗಳಿಗೆ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿ, ಎಲ್ಲರೂ ಕನಸು ಕಾಣುತ್ತಾರೆ. ಆದರೆ ತಾವು ಕಂಡ ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ಕೆಲವರು ಮಾತ್ರ ಛಲದಿಂದ ಮುನ್ನುಗ್ಗುತ್ತಾರೆ. ಅಂತೆಯೇ, ಪ್ರತೀ ವರ್ಷ ರೋಟರಿ ಸಂಸ್ಥೆಗಳು ಹಲವಾರು ಯೋಜನೆಗಳನ್ನು ರೂಪಿಸುತ್ತದೆ. ಈ ಪೈಕಿ ಅತ್ಯುತ್ತಮ ಯೋಜನೆಗಳನ್ನು ಆಯ್ಕೆ ಮಾಡಿ ರೋಟರಿ ಜಿಲ್ಲೆಯಿಂದ ಪ್ರಶಸ್ತಿ ನೀಡಿ ರೋಟರಿ ಸದಸ್ಯರು ಕೈಗೊಂಡ ಸೇವೆ ಗಾಗಿ ಗೌರವಿಸಲಾಗುತ್ತದೆ ಎಂದರು.
ಕಳೆದೊಂದು ವರ್ಷದಲ್ಲಿ 72 ಕ್ಲಬ್ಗಳನ್ನು ಹೊಂದಿರುವ ರೋಟರಿ ಜಿಲ್ಲೆ ಅತ್ಯುತ್ತಮವಾಗಿ ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಂಡ ತೃಪ್ತಿ ತನಗಿದೆ ಎಂದು ಸುರೇಶ್ ಚಂಗಪ್ಪ ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಂದಿನ ಸಾಲಿನ ಗವರ್ನರ್ ರೋಹಿನಾಥ್, ನಾಮಾಂಕಿತ ಗವರ್ನರ್ ಜೋಸೇಫ್ ಮ್ಯಾಥ್ಯು, ರಂಗನಾಥ್ ಭಟ್, ಮೂಡಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ ಡಾ.ಶ್ರೀಕಾಂತ್ ಭಟ್, ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಜಯರಾಮ್ ಕೋಟ್ಯಾನ್ , ರೋಟರಿ ಜಿಲ್ಲಾ ಪದಾಧಿಕಾರಿಗಳಾದ ಎಸ್.ಭಾಸ್ಕರ್, ಮೋಹನ್ ಕರುಂಬಯ್ಯ, ಎಂ.ಈಶ್ವರ್ ಭಟ್ , ರೋಟರಿ ವಲಯ ಅಸಿಸ್ಟೆಂಟ್ ಗವರ್ನರ್ ಮಹೇಶ್ ನಲ್ವಾಡೆ ಹಾಜರಿದ್ದರು.