ಮಡಿಕೇರಿ, ಮೇ 21: ತಲಕಾವೇರಿ - ಭಾಗಮಂಡಲ ಕ್ಷೇತ್ರಕ್ಕೆ ನಿತ್ಯ ಕೊಡಗಿನ ಭಕ್ತರೂ ಸೇರಿದಂತೆ ಸಾವಿರಾರು ವಾಹನಗಳಲ್ಲಿ ಬರುವ ಯಾತ್ರಾರ್ಥಿಗಳಿಂದ ಯಾವದೇ ವ್ಯವಸ್ಥೆ ಕಲ್ಪಿಸದೆ, ವಾಹನಗಳನ್ನು ತಡೆದು ರಸ್ತೆಯಲ್ಲಿ ವಸೂಲಿ ಮಾಡುತ್ತಿರುವದು ಕಾನೂನು ಬಾಹಿರವೆಂದು ಅಲ್ಲಿನ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಕ್ಷೇತ್ರಕ್ಕೆ ಬರುವ ಕೊಡಗಿನ ಭಕ್ತರ ಸಹಿತ ಇಂದು ಪತ್ರಿಕಾ ಹಾಗೂ ದೃಶ್ಯ ಮಾಧ್ಯಮ ಬಳಗದ ವಾಹನವನ್ನು ತಡೆದು ಶುಲ್ಕ ವಸೂಲಿ ಮಾಡಿರುವ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ತಾನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ಅನೇಕರು ಶುಲ್ಕ ವಸೂಲಿ ಬಗ್ಗೆ ಅಸಮಾಧಾನ ಹೊರ ಹಾಕಿದ್ದು, ಮಡಿಕೇರಿಯ ರಾಜಾಸೀಟ್ ಬಳಿ ಈ ಹಿಂದೆ ನಡೆಯುತ್ತಿದ್ದ ರೀತಿ ಭಾಗಮಂಡಲದಿಂದ ತಲಕಾವೇರಿಯತ್ತ ಬರುವ ಎಲ್ಲಾ ವಾಹನಗಳಿಂದ ವಸೂಲಿ ನಡೆಯುತ್ತಿದೆ ಎಂದು ಬೊಟ್ಟು ಮಾಡಿದರು.
ಕ್ರಮಕ್ಕೆ ಆಗ್ರಹ: ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರಕ್ಕೆ ಬರುವವರು ದೇವಾಲಯಕ್ಕೆ ಸಂಬಂಧಿಸಿದ ಜಾಗದಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವಾಗ, ಗ್ರಾ.ಪಂ.ನಿಂದ ರಸ್ತೆಯಲ್ಲಿ ಶುಲ್ಕ ವಸೂಲಿಯ ಔಚಿತ್ಯ ಪ್ರಶ್ನಿಸಿದ ತಮ್ಮಯ್ಯ ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಆಡಳಿತ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಅಧಿಕ ಭಕ್ತರು: ಇಂದು ತಲಕಾವೇರಿ- ಭಾಗಮಂಡಲದಲ್ಲಿ ಅಧಿಕ ಸಂಖ್ಯೆಯಲ್ಲಿ ಯಾತ್ರಾರ್ಥಿಗಳ ಆಗಮನ ಗೋಚರಿಸಿತು. ಪ್ರಸಕ್ತ ರಜಾ ದಿನಗಳಲ್ಲಿ ನಿತ್ಯ ಸಾವಿರದಷ್ಟು ವಾಹನಗಳಲ್ಲಿ ಯಾತ್ರಾರ್ಥಿಗಳು ಬರುತ್ತಿದ್ದು, ಗ್ರಾ.ಪಂ. ಶುಲ್ಕ ವಸೂಲಿ ಅವಧಿ ಮಾರ್ಚ್ ಅಂತ್ಯಕ್ಕೆ ಮುಗಿದಿದ್ದರೂ ನಿಯಮ ಬಾಹಿರ ಹಣ ಪಡೆಯಲಾಗುತ್ತಿದೆ ಎಂದು ಟೀಕೆ ಕೇಳಿಬಂತು.
800 ವಾಹನಗಳು: ಇಂದು ಬೆಳಿಗ್ಗೆಯಿಂದ ಮಧ್ಯಾಹ್ನದ ಸುಮಾರಿಗೆ ತಲಕಾವೇರಿಗೆ 800ಕ್ಕೂ ಅಧಿಕ ವಾಹನಗಳಲ್ಲಿ ಯಾತ್ರಾರ್ಥಿಗಳ ಆಗಮನ ಎದುರಾಯಿತು. ಕ್ಷೇತ್ರದ ಆವರಣದೊಂದಿಗೆ ಸಾಲುಗಟ್ಟಲೆ ಬ್ರಹ್ಮಗಿರಿಯತ್ತ ಜನಸಂದಣಿ ಕಾಣುವಂತಾಯಿತು. 20ಕ್ಕೂ ಅಧಿಕ ಬಸ್‍ಗಳು, 30ಕ್ಕೂ ಮಿನಿ ಬಸ್‍ಗಳು 400ಕ್ಕೂ ಅಧಿಕ ಕಾರುಗಳು ಸೇರಿದಂತೆ ನೂರಾರು ಇತರ ವಾಹನಗಳಲ್ಲಿ ಜನತೆ ಆಗಮಿಸಿದ್ದರು.
ಪ್ರಶ್ನೆಯಂತೆ ಕ್ರಮ : ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ಕ್ಷೇತ್ರಕ್ಕೆ ಯಾತ್ರಾರ್ಥಿಗಳು ಬರುವ ಸಂಬಂಧ ಜಿಲ್ಲಾ ಆಡಳಿತ ಅಗತ್ಯ ಕ್ರಮ ಕೈಗೊಳ್ಳಲೆಂದು ಆಶಿಸಿದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು, ಅಷ್ಟಮಂಗಲ ಪ್ರಶ್ನೆಯಲ್ಲಿ ದೊರಕಲಿರುವ ಸಲಹೆಯಂತೆ ಮುಂದಿನ ದಿನಗಳಲ್ಲಿ ಸಮಿತಿಯು ಗಮನ ಹರಿಸಲಿರುವದಾಗಿ ಇದೇ ಸಂದರ್ಭ ನುಡಿದರು.