ಮಡಿಕೇರಿ, ಮೇ 21: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ‘ಡೆಂಗ್ಯು ಜ್ವರದ ಮುಂಜಾಗ್ರತಾ ಕ್ರಮಗಳ ಜಾಥಾ’ ಕಾರ್ಯಕ್ರಮವು ತಾ. 23 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಪ್ರಾರಂಭಿಸಿ ಖಾಸಗಿ ಬಸ್ ನಿಲ್ದಾಣದ ಮೂಲಕ ಜನರಲ್ ಕೆ.ಎಂ.ತಿಮ್ಮಯ್ಯ ವೃತ್ತದವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಅವರು ತಿಳಿಸಿದ್ದಾರೆ.
ಕರಿಕೆ: ಮಡಿಕೇರಿ ತಾಲೂಕಿನ ಕರಿಕೆ ಗ್ರಾಮಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ. ಪಾರ್ವತಿ, ಕ್ಷೇತ್ರ ಆರೋಗ್ಯ ರಕ್ಷಣಾಧಿಕಾರಿ ಟಿ.ಎನ್. ಪಾಲಾಕ್ಷ, ಎಪಿಡಮಿಯಲಾಜಿಸ್ಟ್ ಡಾ. ಆನಂದ್, ತಾಲೂಕು ಡಿ.ಮ.ಆ.ಸ. ಭೇಟಿ ನೀಡಿ ಡೆಂಗ್ಯೂ ಕಾಯಿಲೆಯು ಬರದಂತೆ ತಡೆಗಟ್ಟಲು ನಡೆಸಿರುವ ಐಇಸಿ ಕಾರ್ಯಕ್ರಮಗಳ ಬಗ್ಗೆ ಪರಿಶೀಲಿಸಿದರು. ಇಲ್ಲಿನ ಗ್ರಾ.ಪಂ.ಗೆ ಭೇಟಿ ನೀಡಲಾಯಿತು. ಅಲ್ಲದೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ಸದಸ್ಯರು, ಸಾರ್ವಜನಿಕರಿಗೆ ಡೆಂಗ್ಯೂ ಕಾಯಿಲೆಯು ಬರುವ ಕಾರಣ, ತಡೆಗಟ್ಟುವ ವಿಧಾನ, ಮರಿಗಳ ನಾಶ, ಲಾರ್ವಾ ಸಮೀಕ್ಷೆಯ ವಿವರಗಳನ್ನು ಲಾರ್ವಗಳ ಪ್ರಾತ್ಯಕ್ಷಿಕೆ ಮಾಡುವ ಮೂಲಕ ಆರೋಗ್ಯ ಶಿಕ್ಷಣ ನೀಡಲಾಯಿತು. ಹಿರಿಯ ಆರೋಗ್ಯ ಸಹಾಯಕರು ಹಾಗೂ ಆಶಾ ಕಾರ್ಯಕರ್ತೆಯರನ್ನು ಲಾರ್ವಾ ಸರ್ವೆಗೆ ನಿಯೋಜಿಸಿದ್ದು, ಆರೋಗ್ಯ ಶಿಕ್ಷಣ ನೀಡಲು ತಿಳಿಸಲಾಯಿತು. ಐಇಸಿ ಸಾಮಗ್ರಿಗಳಾದ ಬ್ಯಾನರ್, ಕರಪತ್ರಗಳು, ಭಿತ್ತಿಪತ್ರಗಳ ಮೂಲಕ ಆರೋಗ್ಯ ಶಿಕ್ಷಣ ನೀಡಲಾಯಿತು. ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.