ಗೋಣಿಕೊಪ್ಪ ವರದಿ, ಮೇ 21 : ವಿವೇಕಾನಂದರ ಚಿಂತನೆಯಂತೆ ಕಳೆದ 75 ವರ್ಷದಿಂದ ದಕ್ಷಿಣ ಕೊಡಗಿನ ಜನರ ಆರೋಗ್ಯ ಸೇವೆಯಲ್ಲಿ ತೊಡಗಿಕೊಂಡಿರುವ ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮ ಆಸ್ಪತ್ರೆಯ ಅಮೃತ ಮಹೋತ್ಸವ ತಾ. 23 ರಿಂದ ಮೂರು ದಿನಗಳ ಕಾಲ ಆಚರಣೆ ನಡೆಯಲಿದೆ.

ರಾಮಕೃಷ್ಣ ಮಠ ಮತ್ತು ಮಿಷನ್ ಮೂಲಕ ಜನರಿಗೆ ಸೇವಾಕಾರ್ಯ ನಿರ್ವಹಿಸುವ ಚಿಂತನೆಯಂತೆ ನಡೆಯುತ್ತಿರುವ ಈ ಆಸ್ಪತ್ರೆ ಬಡರೋಗಿಗಳ ಆಶಾಕಿರಣವಾಗಿ ಸೇವೆ ನೀಡುತ್ತಿದೆ. ಜನರ ಜೀವಕ್ಕೆ ರಕ್ಷಣೆಯಾಗಿ ಮುನ್ನಡೆಯುತ್ತಿರುವ ಆಸ್ಪತ್ರೆ ಅಮೃತಮಹೋತ್ಸವದ ಮೂಲಕ ಮತ್ತಷ್ಟು ಸೇವೆ ನೀಡಲು ಮುಂದಾಗಿದೆ. 23 ರಂದು ಸಂಜೆ 4.30 ಕ್ಕೆ ಅಮೃತಮಹೊತ್ಸವ ಕಾರ್ಯಕ್ರಮವನ್ನು ಶಾರದಾಶ್ರಮದ ಶಾಂಭವನಂದ ಸಭಾಂಗಣದಲ್ಲಿ ಉದ್ಘಾಟಿಸುವ ಮೂಲಕ ಚಾಲನೆ ನೀಡಲಿದೆ. ಹಿರಿಯ ಸ್ವಾಮೀಜಿ ಸುಹಿತನಂದಾಜಿ ಮಹರಾಜ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಮೈಸೂರು ವೈದ್ಯಕೀಯ ಮತ್ತು ಸಂಶೋಧನಾ ಇನ್ಟಿಟ್ಯೂಟ್ ಮುಖ್ಯಸಟ್ಡಾ. ಸಿ. ಪಿ. ನಂಜರಾಜ್ ಪಾಲ್ಗೊಳ್ಳಲಿದ್ದಾರೆ. ಸಂಜೆ 6.30 ಕ್ಕೆ ಆರತಿ, ಭಜನೆ, 7 ಕ್ಕೆ ದತ್ತಾತ್ರೆಯ ವೇಲಂಕರ್ ಅವರಿಂದ ಹರಿಕಥೆ ನಡೆಯಲಿದೆ.

24 ರಂದು ಬೆ. 10 ಕ್ಕೆ ವಿವೇಕಾನಂದ ಆರೋಗ್ಯಧಾಮ ಉದ್ಘಾಟನೆ ನಡೆಯಲಿದೆ. ಸ್ವಾಮೀಜಿ ಸುಹಿತನಂದಾಜಿ ಮಹರಾಜ್ ಉದ್ಘಾಟಿಸಲಿದ್ದಾರೆ. ಕೊಕ್ಕೇಂಗಡ ಮೊಣ್ಣಪ್ಪ, ಪಾರ್ವತಿ ಸಂಕೀರ್ಣವನ್ನು ಸ್ವಾಮಿ ಬೋಧಸರಣಾನಂದಾಜಿ ಮಹರಾಜ್ ಉದ್ಘಾಟಿಸಲಿದ್ದಾರೆ. ಈ ಸಂದರ್ಭ ಡಾ. ಕೆ. ಕೆ. ಶಿವಪ್ಪ, ಆಶ್ರಮದ ವಿಶ್ರಾಂತ ಸ್ವಾಮೀಜಿಗಳಾದ ಜಗದಾತ್ಮಾನಂದಾಜಿ, ಊಟಿ ರಾಮಕೃಷ್ಣ ಮಠದ ಅಧ್ಯಕ್ಷ ರಾಘವೇಶಣನಂದಾಜಿ, ಲಕ್ನೋ ರಾಮಕೃಷ್ಣ ಮಠದ ಅಧ್ಯಕ್ಷ ಮುಕ್ತಿನಾಥನಂದಾಜಿ, ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮ ಅಧ್ಯಕ್ಷ ಬೋಧಸ್ವರೂಪ ನಂದಾಜಿ, ಪಾಲ್ಗೊಳ್ಳಲಿದ್ದಾರೆ. ಅಂದು ಬೆ. 7.30 ಕ್ಕೆ ವಿಶೇಷ ಪೂಜೆ ಮೂಲಕ ಕಾರ್ಯಕ್ರಮ ಆರಂಭಗೊಳ್ಳಲಿದೆ.

25 ರಂದು ಬೆ. 9.30 ರಿಂದ 3 ಗಂಟೆವರೆಗೆ ಮಲ್ಟಿಸ್ಪೆಷಾಲಿಟಿ ಫ್ರೀ ಮೆಡಿಕಲ್ ಕ್ಯಾಂಪ್ ನಡೆಯಲಿದೆ. ಅತಿಥಿಗಳಾಗಿ ವೀರಾಜಪೇಟೆ ದಂತ ವೈದ್ಯಕೀಯ ಕಾಲೇಜು ಮುಖ್ಯಸ್ಥ ಡಾ. ಪೊನ್ನಪ್ಪ ಭಾಗವಹಿಸಲಿದ್ದಾರೆ. ಈ ಸಂದರ್ಭ ಉತ್ತಮ ಆರೋಗ್ಯ ರಕ್ಷಣೆಯಲ್ಲಿನ ಉಪಯೋಗಿ ಅಂಶಗಳ ಬಗ್ಗೆ ವಿಚಾರ ಸಂಕೀರಣ ನಡೆಯಲಿದೆ. ಅತಿಥಿಗಳಾಗಿ ಮೈಸೂರು ಜೆಎಸ್‍ಎಸ್ ಕಾಲೇಜು ಮುಖ್ಯಸ್ಥ ಡಾ. ಬಸವಣ್ಣಗೌಡ, ಮಡಿಕೇರಿ ಕೊಡಗು ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‍ನ ಪ್ರಭಾರ ಮುಖ್ಯಸ್ಥ ಡಾ ಕಾರ್ಯಪ್ಪ ಪಾಲ್ಗೊಳ್ಳಲಿದ್ದಾರೆ.

ಪರಿಚಯ : ಲೋಕಲ್ಯಾಣಕ್ಕಾಗಿ ಪೊನ್ನಂಪೇಟೆಯಲ್ಲಿ ಆರಂಭವಾದ ರಾಮಕೃಷ್ಣ ಶಾರದಾಶ್ರಮವು 1942 ರಲ್ಲಿ ಸೇವಾಶ್ರಮ ಆಸ್ಪತ್ರೆಯನ್ನು ಸ್ಥಾಪಿಸಿ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಸೇವೆ ನೀಡಲು ಕಾರ್ಯಾರಂಭ ಮಾಡಿತು. ಆಸ್ಪತ್ರೆಗಳೇ ಇಲ್ಲದ ಆ ಕಾಲಘಟ್ಟದಲ್ಲಿ ದಕ್ಷಿಣ ಕೊಡಗಿನ ಏಕೈಕ ವೈದ್ಯಕೀಯ ಕೇಂದ್ರವಾಗಿ ರೋಗಿಗಳ ಜೀವರಕ್ಷಣೆಯಲ್ಲಿ ತೊಡಗಿಕೊಂಡಿತು. ಇದರಂತೆ ಸೇವೆ ನೀಡುತ್ತಾ ಬಂದ ಆಸ್ಪತ್ರೆಯು ಪ್ರಸ್ತುತ 75 ನೇ ವರ್ಷಾಚರಣೆ ಆಚರಿಸಿಕೊಳ್ಳುತ್ತಿದೆ. ಅಂದಿನ ಅಧ್ಯಕ್ಷರಾಗಿದ್ದ ಶ್ರೀ ಶಾಂಭವನಾಂದ ಸ್ವಾಮೀಜಿ ಅವರು ರಾಮಕೃಷ್ಣ ಶಾರದಾಶ್ರಮದ ಚಿಂತನೆಯಂತೆ ಮೊದಲ 10 ವರ್ಷ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಆರಂಭಿಸಿದರು. ನಂತರ ಅಲೋಪತಿ ಚಿಕಿತ್ಸೆಯನ್ನು ಆರಂಭಿಸಿದರು. ಇದರಂತೆ ಈಗಲೂ ಕೂಡ ದಕ್ಷಿಣ ಕೊಡಗಿನ ಜನರ ಆರೋಗ್ಯ ಕೇಂದ್ರವಾಗಿ ಇದು ಮುಂದುವರಿಯುತ್ತಿದೆ. ಪ್ರತಿದಿನ 200 ಕ್ಕೂ ಹೆಚ್ಚು ರೋಗಿಗಳು ಇಲ್ಲಿನ ಸೇವೆ ಪಡೆದುಕೊಳ್ಳುತ್ತಿದ್ದಾರೆ. ಇಲ್ಲಿವರೆಗೆ ಲಕ್ಷಾಂತರ ಜನರು ಇಲ್ಲಿ ತಮ್ಮ ಆರೋಗ್ಯ ಸೇವೆ ಪಡೆದುಕೊಂಡಿದ್ದಾರೆ.

ಸುಸಜ್ಜಿತ ಶಸ್ತ್ರಚಿಕಿತ್ಸಾ ಕೊಠಡಿ, ಅತ್ಯಾಧುನಿಕ ಡಿಜಿಟಲ್ ಸ್ಕ್ಯಾನಿಂಗ್ ಮಷಿನ್, ಇಸಿಜಿ ಸೇವೆ, 55 ವಾರ್ಡ್‍ಗಳು ಇಲ್ಲಿವೆ. ಇಲ್ಲಿ ಇಸಿಜಿ ಮಾಡುವ ಸಮಯದಲ್ಲಿಯೇ ಮೈಸೂರು ನಾರಾಯಣ ಹೃದಯಾಲಯಕ್ಕೆ ಟೆಲಿ ಮಿಷಿನ್ ಮೂಲಕ ಮಾಹಿತಿ ರವಾನಿಸಿ ಆ ಕ್ಷಣದಲ್ಲಿಯೇ ಫಲಿತಾಂಶ ನೀಡುವ ಸೇವೆ ಮೂಲಕ ಪ್ರಸಿಧ್ಧಿ ಪಡೆದುಕೊಂಡಿದೆ. ತನ್ನ 75 ವರ್ಷದ ಸೇವೆಯಲ್ಲಿ ರೋಗಿಗಳಿಗೆ ನೀಡುವ ಪ್ರತೀ ಸೇವೆಯಲ್ಲಿಯೂ ರಿಯಾಯಿತಿ ಮೂಲಕ ಚಿಕಿತ್ಸೆ, ಸಲಹೆ ನೀಡುವದು ಇಲ್ಲಿನ ವಿಶೇಷತೆ. ರೋಗಿಗಳಿಗೆ ಆರೋಗ್ಯ ಸಲಹೆ, ಚಿಕಿತ್ಸೆ, ಔಷಧಿ ವಿತರಣೆ ಮಾಡುತ್ತಿದೆ. ಸ್ತ್ರೀರೋಗ ತಜ್ಞರು, ಫಿಷಿಸಿಯೆನ್, ದಂತ ವೈದ್ಯ, ಸೇರಿದಂತೆ ಮೈಸೂರು ಬೆಂಗಳೂರು ಕಡೆಗಳ ಆಸ್ಪತ್ರೆಗಳ ವೈದ್ಯರುಗಳು ಇಲ್ಲಿ ಬೇಟಿ ನೀಡಿ ಸಲಹೆ ನೀಡುತ್ತಿದ್ದಾರೆ. ಇದರಿಂದ ಜನರಿಗೆ ಉಪಯೋಗವಾಗುತ್ತಿದೆ. ವರ್ಷಕ್ಕೆ ಸಾಕಷ್ಟು ಬಾರಿ ಉಚಿತ ಅರೋಗ್ಯ ಶಿಬಿರ ನಡೆಸುವ ಮೂಲಕ ಆರೋಗ್ಯ ರಕ್ಷಣೆಗೆ ಮುಡಿಪಾಗಿಟ್ಟುಕೊಂಡಿದೆ.

ಆರೋಗ್ಯ ಧಾಮ

ವಿವೇಕಾನಂದ ಆರೋಗ್ಯಧಾಮ ಹೆಸರಿನಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕೇಂದ್ರವಾಗಿ ಬೃಹತ್ ಕಟ್ಟಡ ನಿರ್ಮಾಣವಾಗುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನದ ಯಂತ್ರೋಪಕರಣಗಳು ಒಳಗೊಂಡಂತೆ ಸುಸಜ್ಜಿತ ಕಟ್ಟಡ 1,5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಮೇ 23 ರಿಂದ ನಡೆಯುವ ಅಮೃತಮಹೋತ್ಸವದೊಂದಿಗೆ ವಿವೇಕಾನಂದ ಆರೋಗ್ಯಧಾಮ ಉದ್ಘಾಟನೆಗೊಳ್ಳುತ್ತಿದೆ.

ಪ್ರಸ್ತುತ ಫಿಷಿಸಿಯೆನ್ ಆಗಿ ಡಾ. ಕಾರ್ಯಪ್ಪ, ಸ್ತ್ರೀರೋಗ ಹಾಗೂ ಬಂಜೆತನ ನಿವಾರಣಾ ವೈದ್ಯರಾಗಿ ಡಾ. ಅಲ್ಲಮಪ್ರಭು, ದಂತ ವೈದ್ಯರಾಗಿ ಡಾ. ನಂದಿತಾ, ಪ್ರಕೃತಿ ಚಿಕಿತ್ಸಕರಾಗಿ ಡಾ. ಮಿರಿಯಾ ಸೇವೆ ನೀಡುತ್ತಿದ್ದಾರೆ.

ಮೂರು ದಿನ ಕಾರ್ಯಕ್ರಮ ಆಚರಿಸುವ ಮೂಲಕ ಅಮೃತಮಹೋತ್ಸವ ಆಚರಿಸಲಾಗುತ್ತಿದೆ. ವಿವೇಕಾನಂದ ಆರೋಗ್ಯಧಾಮದ ಮೂಲಕ ಪ್ರಕೃತಿ ಚಿಕಿತ್ಸೆ ಹಾಗೂ ಯೋಗದ ಜತೆಯಲ್ಲಿ ಅಲೋಪತಿ ಚಿಕಿತ್ಸೆಯೊಂದಿಗೆ ಆಸ್ಪತ್ರೆಯನ್ನು ಮುನ್ನಡೆಸಲಾಗುವದು. ದಾನಿಗಳು ಕೂಡ ಆಸ್ಪತ್ರೆಯಿಂದ ಮತ್ತಷ್ಟು ಸೇವೆಯನ್ನು ಜನರಿಗೆ ನೀಡುವದಕ್ಕಾಗಿ ಧನ ಸಹಾಯದ ಮೂಲಕ ಸ್ಪಂದಿಸಬಹುದು ಎಂದು ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮ ಅಧ್ಯಕ್ಷ ಸ್ವಾಮಿ ಬೋಧ ಸ್ವರೂಪ ನಂದಾಜಿ ಮಹರಾಜ್ ಹೇಳಿದ್ದಾರೆ. -ವರದಿ : ಸುದ್ದಿಪುತ್ರ