ಮಡಿಕೇರಿ, ಮೇ 20: ಕೊಡಗು ಜಿಲ್ಲೆಗೆ ಜೂನ್ ಮೊದಲನೆಯ ವಾರದಲ್ಲಿ ಅಧಿಕೃತವಾಗಿ ಮುಂಗಾರು ಮಳೆ ಪ್ರವೇಶಿಸುವ ನಿರೀಕ್ಷೆಯಿದ್ದು, ಹವಾಮಾನದಲ್ಲಿ ಉತ್ತಮ ವಾತಾವರಣದೊಂದಿಗೆ ಪ್ರಸಕ್ತ ವರ್ಷದಲ್ಲಿ ಆಶಾದಾಯಕ ಮಳೆಯಾಗುವ ಸಂಭವವಿದೆ.

ಈಗಾಗಲೇ ತಾಪಮಾನದಲ್ಲಿ ಸಾಕಷ್ಟು ಬದಲಾವಣೆಯೊಂದಿಗೆ, ಕೊಡಗಿನ ಅಲ್ಲಲ್ಲಿ ದಿನ ಬಿಟ್ಟು ದಿನವೆಂಬಂತೆ ಸಂಜೆ ಅಥವಾ ರಾತ್ರಿ ಮಳೆಯಾಗುತ್ತಿರುವದು ಕಂಡು ಬಂದಿದೆ. ಅಲ್ಲದೆ ವಾಡಿಕೆಯಂತೆ ಜಿಲ್ಲೆಯಲ್ಲಿ ಜೂನ್ ಮೊದಲ ವಾರದಿಂದ ಮುಂಗಾರು ಅಡಿಯಿಡಲಿದ್ದು, ಕೃಷಿಕರು ಮಳೆಗಾಲದ ಬೆಳೆಗೆ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಕೇರಳ ರಾಜ್ಯಕ್ಕೆ ತಾ. 29 ರಂದು ಮುಂಗಾರು ಪ್ರವೇಶಿಸುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಮುಂಗಾರು ಮಾರುತಗಳು ಚುರುಕಾಗಿದ್ದರೆ, ಕೇರಳಕ್ಕೆ ಪ್ರವೇಶಿಸಿದ ದಿನದಂದೇ ಅಥವಾ ಒಂದೆರಡು ದಿನದ ಬಳಿಕ ರಾಜ್ಯಕ್ಕೂ ಪ್ರವೇಶಿಸುವ ಸಾಧ್ಯತೆಯಿದೆ. ಕಳೆದ 5 ವರ್ಷದ ಮುನ್ಸೂಚನೆಗೆ ಹೋಲಿಸಿದರೆ, ಪ್ರಸಕ್ತ ವರ್ಷದಲ್ಲಿ ವಾಡಿಕೆಗಿಂತ ಮೊದಲೇ ಕೇರಳಕ್ಕೆ ಮುಂಗಾರು ಪ್ರವೇಶಿಸುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ತಾ. 29 ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸುವ ಮುನ್ಸೂಚನೆಯನ್ನು ಇಲಾಖೆ ನೀಡಿದ್ದು, 4 ದಿನ ಆಚೀಚೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಹೀಗಾಗಿ ಮಾರುತಗಳು ಚುರುಕಾಗಿದ್ದರೆ, ತಾ. 30 ಅಥವಾ 31 ರಂದು ರಾಜ್ಯಕ್ಕೆ ಮುಂಗಾರು ಪ್ರವೇಶ ನಿರೀಕ್ಷಿಸಬಹುದು. ದುರ್ಬಲವಾಗಿದ್ದಲ್ಲಿ ಮೂರ್ನಾಲ್ಕು ದಿನ ವಿಳಂಬವಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್. ಶ್ರೀನಿವಾಸ ರೆಡ್ಡಿ ಸುಳಿವು ನೀಡಿದ್ದಾರೆ.