ಮಡಿಕೇರಿ, ಮೇ 20: ಜಿಲ್ಲಾ ಆರೋಗ್ಯ ಅಭಿಯಾನದ ಸಭೆಯು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿಲ್ಲೆಯಲ್ಲಿ ಡೆಂಗ್ಯು ಜ್ವರ ಬಾರದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊಬೈಲ್ ಸಂಚಾರಿ ಆರೋಗ್ಯ ಘಟಕಗಳು ಕಾರ್ಯನಿರ್ವಹಣೆಯ ಬಗ್ಗೆ ಮಾಹಿತಿ ನೀಡುತ್ತಾ ಜಿಲ್ಲೆಯಲ್ಲಿ ಒಟ್ಟು 9 ಆ್ಯಂಬ್ಯುಲನ್ಸ್‍ಗಳು ತೃಪ್ತಿಕರವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಮಾತನಾಡಿ, ಮೊಬೈಲ್ ಸಂಚಾರಿ ಆರೋಗ್ಯ ಘಟಕಗಳು ಜಿಲ್ಲೆಯ ಗಡಿಭಾಗದ ಹಳ್ಳಿಗಳಿಗೆ ಹೆಚ್ಚು ಭೇಟಿ ನೀಡಿ ಗಡಿಭಾಗದ ಜನರಿಗೆ ಅನುಕೂಲವಾಗುವಂತೆ ಕಾರ್ಯ ನಿರ್ವಹಿಸಬೇಕೆಂದು ಸೂಚಿಸಿದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಜಗದೀಶ್ ಮಾತನಾಡಿ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾರ್ವಜನಿಕ ಮಾಹಿತಿ ಕೇಂದ್ರದ ಬಗ್ಗೆ ಸಭೆಗೆ ತಿಳಿಸಿದರು.

ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ಮಾಹಿತಿ ಕೇಂದ್ರವು ಸಾರ್ವಜನಿಕರಿಗೆ ಪೂರ್ಣ ಪ್ರಮಾಣದಲ್ಲಿ ಅನುಕೂಲ ವಾಗುವಂತೆ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು. ಜಿ.ಪಂ. ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಮಾತನಾಡಿ, ಜಿಲ್ಲಾ ಆಸ್ಪತ್ರೆಯಲ್ಲಿ ಇರುವ ಸಿಸಿ ಟಿವಿಗಳ ದೃಶ್ಯಾವಳಿಗಳನ್ನು ಪ್ರತಿ ದಿನ ವೀಕ್ಷಣೆ ಮಾಡಬೇಕು ಹಾಗೂ ಬರುವಂತಹ ದೂರುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಆರ್‍ಸಿಹೆಚ್ ಅಧಿಕಾರಿ ಡಾ. ನಿಲೇಶ್ ಮಾತನಾಡಿ, ಇಂದ್ರಧನುಷ್ ಲಸಿಕಾ ಅಭಿಯಾನದ ಬಗ್ಗೆ ತಿಳಿಸಿದರು. ಗ್ರಾಮ ಸ್ವರಾಜ್ಯ ಯೋಜನೆ ಯಡಿಯಲ್ಲಿ ಸೋಮವಾರಪೇಟೆ ತಾಲೂಕಿನ ನಿಲುವಾಗಿಲು ಗ್ರಾಮವನ್ನು ಸೇರ್ಪಡೆ ಮಾಡಲಾಗಿದೆ.

ಜಿಲ್ಲೆಯಾದ್ಯಂತ ತಾ. 23, 25, 26 ಮತ್ತು ಜೂನ್ 20, 22, 23 ಹಾಗೂ ಜುಲೈ 18, 20, 21 ರಂದು ಮೂರು ಹಂತದಲ್ಲಿ ಇಂದ್ರಧನುಷ್ ಲಸಿಕಾ ಅಭಿಯಾನ ನಡೆಯಲಿದೆ ಎಂದು ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಮಾತನಾಡಿ, ಇಂದ್ರಧನುಷ್ ಲಸಿಕಾ ಅಭಿಯಾನ ಶೇ. 100 ರಷ್ಟು ಪ್ರಗತಿ ಸಾಧಿಸಲು ಅಧಿಕಾರಿಗಳಿಗೆ ಸೂಚಿಸಿದರು. ಆರ್‍ಸಿಎಚ್ ಅಧಿಕಾರಿ ಡಾ.ನಿಲೇಶ್ ಮಾತನಾಡಿ ಅತಿಸಾರ ಭೇದಿಯ ತೀವ್ರತರ ನಿಯಂತ್ರಣಾ ಪಾಕ್ಷಿಕ ಕಾರ್ಯಕ್ರಮವು ತಾ. 28 ರಿಂದ ಜೂನ್ 9 ರವರೆಗೆ ನಡೆಯಲಿದೆ ಎಂದರು. ಸಭೆಯಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ. ಕಾರ್ಯಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶಿವಕುಮಾರ, ಜಿಲ್ಲಾ ಆಯುಷ್ ಅಧಿಕಾರಿ ಡಾ. ರಾಮಚಂದ್ರ ಇತರರು ಇದ್ದರು.