ನಾಪೋಕ್ಲು, ಮೇ 18: ಇಪ್ಪತ್ತೆರಡನೇ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವವರು ಯಾರು..? ಇದು ಹಾಕಿ ಅಭಿಮಾನಿಗಳ ಎದುರಿರುವ ಪ್ರಶ್ನೆ. ಪ್ರಸಕ್ತ ವರ್ಷದ ಹಾಕಿ ಉತ್ಸವ ಎಲ್ಲಾ ಮಜಲುಗಳನ್ನು ದಾಟಿ ಬಂದಿದ್ದು, ಇದೀಗ ಫೈನಲ್ ಹಂತಕ್ಕೆ ತಲಪಿದೆ. ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಲ್ಲೇಟಿರ ಕಪ್‍ನ ಈ ಬಾರಿಯ ಫೈನಲ್ ಹಣಾಹಣಿ ನಡೆಯಲಿರುವದು ತಾ. 20 ರಂದು (ನಾಳೆ) ಪ್ರತಿಷ್ಠಿತವಾದ ಕುಲ್ಲೇಟಿರ ಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳುವ ತವಕದಲ್ಲಿರುವ ಎರಡು ತಂಡಗಳೆಂದರೆ ಚೇಂದಂಡ ಹಾಗೂ ಅಂಜಪರವಂಡ. ಇದರಲ್ಲಿ ಎರಡೂ ಕುಟುಂಬ ತಂಡಗಳು ಬಲಿಷ್ಠ ತಂಡಗಳೇ ಆಗಿವೆ. ಚೇಂದಂಡ ತಂಡ ಹಾಲಿ ಚಾಂಪಿಯನ್ ತಂಡವಾಗಿದ್ದು, ಪ್ರಶಸ್ತಿ ಉಳಿಸಿಕೊಳ್ಳಲು ಮುಂದಾಗಿದ್ದರೆ, ಮಾಜಿ ಚಾಂಪಿಯನ್ ತಂಡವಾದ ಅಂಜಪರವಂಡ ಈ ಬಾರಿ ಮತ್ತೆ ತನ್ನ ಪಾರುಪತ್ಯ ತೋರುವ ಕನಸ್ಸಿನಲ್ಲಿದೆ. ಕ್ರೀಡಾಭಿಮಾನಿಗಳ ಕುತೂಹಲಕ್ಕೆ ತಾ. 20 ರಂದು (ನಾಳೆ) ರೋಚಕ ತೆರೆ ಬೀಳಲಿದೆ.
ಪ್ರಶಸ್ತಿಗಳಿಸುವ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದ ಕಳೆದ ಬಾರಿಯ ರನ್ನರ್ಸ್ ಪ್ರಶಸ್ತಿ ವಿಜೇತ ತಂಡವಾದ ಪರದಂಡ ತಂಡ ಇಂದು ನಡೆದ ಸೆಮಿಫೈನಲ್‍ನಲ್ಲಿ ಅಂಜಪರವಂಡ ಎದುರು ಮುಗ್ಗರಿಸಿದರೆ, ಚೇಂದಂಡ ತಂಡ ಕೂತಂಡ ತಂಡವನ್ನು ಸೋಲಿಸಿ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿತು.
ಅಂಜಪರವಂಡ ತಂಡ ಪರದಂಡ ತಂಡವನ್ನು 3-1 ಗೋಲಿನಿಂದ ಹಾಗೂ ಚೇಂದಂಡ ತಂಡ ಕೂತಂಡ ತಂಡವನ್ನು 4-1 ಗೋಲಿನಿಂದ ಪರಾಭವಗೊಳಿಸಿದ್ದು, ಸೆಮಿಫೈನಲ್ ಹೈಲೈಟ್ಸ್.
ಇಂದು ನಡೆದ ಪ್ರಥಮ ಪಂದ್ಯದಲ್ಲಿ ಬಿರುಸಿನ ಆಟದ ಪ್ರದರ್ಶನ ನೀಡಿದ ಅಂಜಪರವಂಡ ಆರಂಭದಲ್ಲೇ ಮುನ್ನಡೆ ಗಳಿಸಿತು. ದೀಪಕ್ ಸುಬ್ಬಯ್ಯ 6ನೇ ನಿಮಿಷದಲ್ಲೇ ಗೋಲು ಬಾರಿಸಿ ಮುನ್ನಡೆ ತಂದಿತ್ತರೆ, 14ನೇ ನಿಮಿಷದಲ್ಲಿ ರೋಷನ್ ಮಾದಪ್ಪ ಗೋಲು ಬಾರಿಸಿ 2-0 ಅಂತರ ತಂದಿತ್ತರು. 19ನೇ ನಿಮಿಷದಲ್ಲಿ ಪರದಂಡ ಕವನ್ ಬೋಪಣ್ಣ ಗೋಲು ಬಾರಿಸಿದಾಗ ಪಂದ್ಯ ಮತ್ತೆ ಕುತೂಹಲ ಕಂಡಿತು. ಆದರೆ 35ನೇ ನಿಮಿಷದಲ್ಲಿ ಅಂಜಪರವಂಡ ದೀಪಕ್ ಸುಬ್ಬಯ್ಯ ಮತ್ತೊಂದು ಗೋಲು ಬಾರಿಸುವದರೊಂದಿಗೆ ಮಾಜಿ ಚಾಂಪಿಯನ್ ತಂಡ
(ಮೊದಲ ಪುಟದಿಂದ) ಕಳೆದ ಬಾರಿಯ ರನ್ನರ್ಸ್ ತಂಡ ಪರದಂಡ ಆಟಗಾರರನ್ನು ಸೆಮಿಫೈನಲ್‍ಗೆ ಸೀಮಿತಗೊಳಿಸಿದರು.
ಎರಡನೇ ಸೆಮಿಫೈನಲ್ ಬಲಿಷ್ಠ ಚೇಂದಂಡ ಹಾಗೂ ಕೂತಂಡ ನಡುವೆ ನಡೆಯಿತು. ಪಂದ್ಯ ಆರಂಭಗೊಂಡ ಬೆನ್ನಲ್ಲೇ 6ನೇ ನಿಮಿಷದಲ್ಲಿ ಚೇಂದಂಡ ತರುಣ್ ತಮ್ಮಯ್ಯ ಹಾಗೂ ಮರು ನಿಮಿಷದಲ್ಲಿ ಮೋಕ್ಷಿತ್ ಗಳಿಸಿದ ಗೋಲಿನಿಂದ 2-0 ಅಂತರದ ಮುನ್ನಡೆ ಗಳಿಸಿತು.
37ನೇ ನಿಮಿಷದಲ್ಲಿ ಕೂತಂಡ ಸಜನ್ ದೇವಯ್ಯ ಗೋಲು ಬಾರಿಸಿ ಅಂತರವನ್ನು 2-1 ಕ್ಕೆ ಇಳಿಸಿದರು. ಆದರೆ 44ನೇ ನಿಮಿಷದಲ್ಲಿ ಒಲಂಪಿಯನ್ ಚೇಂದಂಡ ನಿಕಿನ್ ತಿಮ್ಮಯ್ಯ ಆಕರ್ಷಕ ಗೋಲು ಗಳಿಸಿ 3-1ಕ್ಕೆ ಅಂತರ ಹೆಚ್ಚಿಸಿದರು. 54ನೇ ನಿಮಿಷದಲ್ಲಿ ಬೋಪಣ್ಣ ಮತ್ತೊಂದು ಗೋಲು ಬಾರಿಸುವದರೊಂದಿಗೆ ಚೇಂದಂಡ ತಂಡ 4-1 ಗೋಲಿನ ಜಯದೊಂದಿಗೆ ಸುಲಭವಾಗಿ ಫೈನಲ್ ಪ್ರವೇಶಿಸಿತು.
ಸೆಮಿಫೈನಲ್‍ನ ರೋಚಕ ಪಂದ್ಯ ವೀಕ್ಷಣೆಗೆ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿದರು. ನೆಲ್ಲಮಕ್ಕಡ ಪವನ್, ಮೂಕಚಂಡ ನಾಚಪ್ಪ, ಬೊಳ್ಳಚಂಡ ನಾಣಯ್ಯ ಹಾಗೂ ಕೊಕ್ಕಂಡ ರೋಷನ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಚೆಪ್ಪುಡಿರ ಕಾರ್ಯಪ್ಪ ಅಂಜಪರವಂಡ ಬೊಳ್ಳಮ್ಮ, ಮೂಡೆರ ಹರೀಶ್ ಕಾಳಯ್ಯ, ಕರವಂಡ ಅಪ್ಪಣ್ಣ, ಮಣವಟ್ಟಿರ ದಯಾ ಚಿಣ್ಣಪ್ಪ ವೀಕ್ಷಕ ವಿವರಣೆ ನೀಡಿದರು.
ಸೆಮಿಫೈನಲ್‍ನಲ್ಲಿ ಒರಟಾಟಕ್ಕೆ ಹಲವು ಆಟಗಾರರು ಹಸಿರು ಹಾಗೂ ಹಳದಿ ಕಾರ್ಡ್ ಪಡೆದ ಪ್ರಸಂಗವೂ ನಡೆಯಿತು. ತಾ. 20 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಚೇಂದಂಡ ಹಾಗೂ ಅಂಜಪರವಂಡ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.
ಕಳೆದ 33 ದಿನಗಳಿಂದ ನಾಪೆÇೀಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 22ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ನಮ್ಮೆ ಕುಲ್ಲೇಟಿರ ಕಪ್ ಫೈನಲ್ ಪಂದ್ಯ ಮೇ. 20ರಂದು ನಡೆಯಲಿದ್ದು, ಇದಕ್ಕೆ ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ಕುಲ್ಲೇಟಿರ ಕಪ್ ಹಾಕಿ ನಮ್ಮೆಯ ಸಮಿತಿ ಅಧ್ಯಕ್ಷ ಕುಲ್ಲೇಟಿರ ಶಂಭು ಮಂದಪ್ಪ ಹೇಳಿದರು.
ಮೈದಾನದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಮೇ. 20ರ ಭಾನುವಾರ ಚೇಂದಂಡ ಮತ್ತು ಅಂಜಪರವಂಡ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಪಂದ್ಯಾಟವನ್ನು ಕೇಂದ್ರ ಮಂತ್ರಿ ರಾಜವರ್ಧನ್ ಸಿಂಗ್ ರಾಥೋರ್ (ಎವಿಎಸ್‍ಎಂ) ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಒಲಂಪಿಯನ್ ಮನೆಯಪಂಡ ಸೋಮಯ್ಯ ಉಪಸ್ಥಿತರಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಲ್ಲೇಟಿರ ಹಾಕಿ ಹಬ್ಬದ ಅಧ್ಯಕ್ಷ ಶಂಭು ಮಂದಪ್ಪ ವಹಿಸಲಿದ್ದಾರೆ. ಕುಲ್ಲೇಟಿರ ಕುಟುಂಬದ ಅಧ್ಯಕ್ಷ ಕೆ.ಎಸ್.ಮಾದಪ್ಪ ಅವರ ಉಪಸ್ಥಿತಿಯಲ್ಲಿ ಅತಿಥಿಗಳಾಗಿ ಸಂಸದ ಪ್ರತಾಪ್ ಸಿಂಹ, ಐಎಎಸ್ ಅಧಿಕಾರಿ ಶಿವಶಂಕರ್, ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಪೆÇಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ಎಸ್.ವೈ ಕುಲಕರ್ಣಿ, ಎಂಎಲ್‍ಸಿ ಶಾಂತೆಯಂಡ ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ, ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ. ಸುಜುಕಿ ಮೋಟಾರ್ಸ್‍ನ ಮಾಸಯ ತನಕ, ಮೇಚಿಯಂಡ ಸಿ.ಮುತ್ತಣ್ಣ, ಚೇಂದಿರ ಕಿಶನ್, ಎಂ.ಎ.ಪೆÇನ್ನಪ್ಪ, ಎಂ.ಬಿ.ಗಣಪತಿ, ಅರೆಯಡ ಪವಿನ್ ಪೆÇನ್ನಣ್ಣ, ಉಪಸ್ಥಿತರಿರುವರು.
ಹಾಕಿ ಹಬ್ಬದ ಸಂಚಾಲಕ ಕುಲ್ಲೇಟಿರ ಅರುಣ ಬೇಬ ಮಾತನಾಡಿ ಕುಲ್ಲೇಟಿರ ಹಾಕಿ ಹಬ್ಬದಲ್ಲಿ 334 ತಂಡಗಳು ನೋಂದಣಿ ಮಾಡಿದ್ದು 6 ತಂಡಗಳು ಮಾತ್ರ ವಾಕ್ ಓವರ್ ನೀಡಲಾಗಿದೆ. ಸೋತ ಪ್ರತಿ ತಂಡಗಳಿಗೆ ಕುಲ್ಲೇಟಿರ ಪಡೆಬೀರ ಪೆÇನ್ನಣ್ಣ ಮತ್ತು ಮಾಣಿಚ್ಚ ಅವರ ಹೆಸರಿನಲ್ಲಿ ಒಡಿಕತ್ತಿ ನೀಡಲಾಗಿದೆ. ಪಂದ್ಯದಲ್ಲಿ ಜಯಗಳಿಸಿದ ತಂಡಕ್ಕೆ ಮಧುಮಗಳ ವಸ್ತ್ರ ಆಭರಣ ಮತ್ತು ರನ್ನರ್ಸ್ ತಂಡಕ್ಕೆ ಮಧು ಮಗನ ವಸ್ತ್ರಾಭರಣವನ್ನು ನೀಡಲಾಗುವದು ಎಂದರು. ಮ್ಯಾನ್ ಆಪ್ ದ ಮ್ಯಾಚ್, ಮ್ಯಾನ್ ಆಪ್‍ದ ಸೀರಿಯಸ್, ಬೆಸ್ಟ್ ಫಾರ್‍ವರ್ಡ್, ಬೆಸ್ಟ್ ಗೋಲ್ ಕೀಪರ್, ಬೆಸ್ಟ್ ಫೀಮೆಲ್ ಪ್ಲೇಯರ್, ಬೆಸ್ಟ್ ಬ್ಯಾಕ್, ಬೆಸ್ಟ್ ಹಾಫ್ ಪ್ರಶಸ್ತಿಗಳನ್ನು ಇದರೊಂದಿಗೆ ನೀಡಲಾಗುವದು ಹಲವು ದಾನಿಗಳು ಈ ಬಹುಮಾನ ಪ್ರಾಯೋಜಿಸಿದ್ದಾರೆ ಎಂದರು.
ಗೋಷ್ಠಿಯಲ್ಲಿ ಕುಲ್ಲೇಟಿರ ಶಂಕರಿ ಚಂಗಪ್ಪ, ವಿಠಲ ಚಿಣ್ಣಪ್ಪ, ನಂದಾ ನಾಚಪ್ಪ, ಉತ್ತಯ್ಯ, ಪರಶು ಚಂಗಪ್ಪ, ಶ್ಯಾಮ್ ಪೆÇನ್ನಪ್ಪ, ಮತ್ತಿತರರು ಇದ್ದರು.