ಮಡಿಕೇರಿ, ಮೇ 18: ಪ್ರವಾಸೋದ್ಯಮ ಇಲಾಖೆಯ ನಿಯಮಗಳ ಪಾಲನೆಯೊಂದಿಗೆ ಜಿಲ್ಲೆಯ ಹೋಂ ಸ್ಟೇಗಳನ್ನು ಸಂಬಂಧಿಸಿದ ಮಾಲೀಕರು ಕಡ್ಡಾಯ ನೊಂದಾಯಿಸಿಕೊಳ್ಳುವಂತೆ ಇಲಾಖೆಯ ಅಧಿಕಾರಿ ಜಗನ್ನಾಥ್ ಸಲಹೆ ನೀಡಿದ್ದಾರೆ. ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಅವರು, ನೂತನ ನಿಯಮಗಳ ಅಡಿಯಲ್ಲಿ ಈಗಾಗಲೇ 127 ಹೋಂ ಸ್ಟೇಗಳು ಮಾತ್ರ ನೊಂದಾಯಿಸಲ್ಪಟ್ಟಿದ್ದು, ಕಳೆದ ಅಕ್ಟೋಬರ್‍ನಿಂದ ಹೊಸ ನೀತಿ ಜಾರಿಗೊಂಡಿರುವದಾಗಿ ಸ್ಪಷ್ಟಪಡಿಸಿದ್ದಾರೆ.

ಜಿಲ್ಲೆಯಲ್ಲಿ ಈ ಹಿಂದೆ ಸುಮಾರು 800ಕ್ಕೂ ಅಧಿಕ ಹೋಂ ಸ್ಟೇಗಳಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಕೇವಲ 127 ಮಂದಿ ಮಾತ್ರ ನೂತನ ನಿಯಮಗಳಡಿ ನೋಂದಾವಣೆ ಮಾಡಿಸಿಕೊಂಡಿರುವದಾಗಿ ಸುಳಿವು ನೀಡಿದ್ದಾರೆ. ಕಾನೂನಿನ ಅಡಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಮಾರ್ಗಸೂಚಿಯಂತೆ ಹೋಂ ಸ್ಟೇಗಳ ನೋಂದಾವಣೆ ಕಡ್ಡಾಯವೆಂದು ನೆನಪಿಸಿರುವ ಅವರು, ನಿಯಮಾನುಸಾರ ನೊಂದಾಯಿಸಿಕೊಳ್ಳದಿದ್ದರೆ ಅಥವಾ ಅಕ್ರಮಗಳ ಬಗ್ಗೆ ಇಲಾಖೆ ಗಮನಕ್ಕೆ ಬಂದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವದು ಎಂದು ಮುನ್ಸೂಚನೆ ನೀಡಿದ್ದಾರೆ.

ಸಂಬಂಧಪಟ್ಟ ಎಲ್ಲ ಹೋಂ ಸ್ಟೇಗಳ ಮಾಲೀಕರು ಕೂಡ ಈ ಹಿಂದಿನ ನೋಂದಾವಣೆ ಹೊರತಾಗಿ ನೂತನ ನಿಯಮ ಪಾಲನೆಗೆ ತಕ್ಷಣ ಮುಂದಾಗಬೇಕೆಂದು ತಿಳಿ ಹೇಳಿದ ಅಧಿಕಾರಿ ಜಗನ್ನಾಥ್ ಈಗಾಗಲೇ ಮಾಲೀಕರಿಗೆ ಅಧಿಕೃತ ಮಾಹಿತಿಗಳನ್ನು ಹಿಂದಿನ ಸಭೆಯಲ್ಲೂ ತಿಳಿಸಲಾಗಿದೆ ಎಂಬದಾಗಿ ನೆನಪಿಸಿದ್ದಾರೆ.

ಪೊಲೀಸ್ ಇಲಾಖೆ ಕ್ರಮ : ನಗರಕ್ಕೆ ರಾತ್ರಿ ವೇಳೆ ಬರುವಂತಹ ಪ್ರವಾಸಿಗರನ್ನು ಕೆಲವು ಹೋಂ ಸ್ಟೇಗಳ ಮಧ್ಯವರ್ತಿಗಳು ಏಕಾಏಕಿ ರಸ್ತೆಯಲ್ಲಿ ಅಡ್ಡಗಟ್ಟಿ ತಮ್ಮ ಹೋಂ ಸ್ಟೇಗಳಿಗೆ ಬರುವಂತೆ ಒತ್ತಾಯಿಸಿ ಪ್ರವಾಸಿಗರಿಗೆ ಭಯದ ವಾತಾವರಣವನ್ನು

ಉಂಟು ಮಾಡುತ್ತಿರುವ ಘಟನೆಗಳು ಇತ್ತೀಚೆಗೆ ನಡೆಯುತ್ತಿರುವ ಬಗ್ಗೆ ತಿಳಿದುಬಂದಿದೆ.

(ಮೊದಲ ಪುಟದಿಂದ) ಪ್ರವಾಸಿಗರು ತಮ್ಮೊಂದಿಗೆ ಬರಬೇಕೆಂದು ಬೇರೆ ಬೇರೆ ಹೋಂ ಸ್ಟೇಗಳ ಮಧ್ಯವರ್ತಿಗಳು ತಮ್ಮೊಳಗೆ ಗಲಾಟೆ ಮಾಡಿಕೊಳ್ಳುವದರ ಜೊತೆಗೆ ಪ್ರವಾಸಿಗರಿಗೂ ತೊಂದರೆ ನೀಡುವ ಘಟನೆಗಳು ತಡವಾಗಿ ಬೆಳಕಿಗೆ ಬಂದಿವೆ.

ತಾ. 10ರಂದು ರಾತ್ರಿ ಸಮಯ 2 ಗಂಟೆಗೆ ನಗರದ ಫೋರ್ಟ್ ವ್ಯೂ ಲಾಡ್ಜ್‍ಗೆ ಹೋದಂತಹ ಕೆಲವು ಪ್ರವಾಸಿಗರನ್ನು ಅಶ್ರಫ್ ಎಂಬ ಹೋಂ ಸ್ಟೇ ಮಧ್ಯವರ್ತಿಯು ಫೋರ್ಟ್ ವ್ಯೂ ಲಾಡ್ಜ್‍ನ ಕಾಂಪೌಂಡ್‍ನ ಒಳಗೆ ಹೋಗಿ ಪ್ರವಾಸಿಗರುಗಳು ತನ್ನೊಂದಿಗೆ ಹೋಂ ಸ್ಟೇಗೆ ಬರಬೇಕೆಂದು ಒತ್ತಾಯಿಸಿದ್ದಾನೆ. ಈ ವಿಚಾರವಾಗಿ ಫೋರ್ಟ್ ವ್ಯೂ ಲಾಡ್ಜ್‍ನ ವ್ಯವಸ್ಥಾಪಕ ಜುಬೇರ್ ಎಂಬವರು ಅಶ್ರಫ್‍ರನ್ನು ಪ್ರಶ್ನಿಸಿದಾಗ ಅಶ್ರಫ್ ಜುಬೇರ್‍ಗೆ ಬೈದು ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿರುವದಾಗಿ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಅಶ್ರಫ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ತಾ. 16ರಂದು ರಾತ್ರಿ ರಿಜ್ವಾನ್ ಎಂ.ಹೆಚ್. ತಂದೆ ಎಂ.ಎಂ. ಹಮೀದ್, ಜೈನುದ್ದೀನ್ ತಂದೆ ಉಮ್ಮರ್, ಮುಸ್ತಾಫ ತಂದೆ ಜಕ್ರಿಯಾ, ರಾಜೇಶ್ ಕೆ., ತಂದೆ ಲೇಟ್ ಕಾವೇರಪ್ಪ ಮುಂತಾದವರು ಮಡಿಕೇರಿ ನಗರದಲ್ಲಿ ಹೋಂ ಸ್ಟೇಗಾಗಿ ಗಿರಾಕಿಗಳನ್ನು ಹುಡುಕುತ್ತಾ ಪ್ರವಾಸಿಗರನ್ನು ಅಡ್ಡಗಟ್ಟಿ ಭಯದ ವಾತಾವರಣವನ್ನು ನಿರ್ಮಾಣ ಮಾಡುತ್ತಿದ್ದು, ಇವರುಗಳಿಗೆ ಪೊಲೀಸ್ ಠಾಣೆಯಲ್ಲಿ ಎಚ್ಚರಿಕೆ ನೀಡಿ ಕಳುಹಿಸಲಾಗಿರುತ್ತದೆ. ಆದರೂ ಸಹ ರಿಜ್ವಾನ್, ಜೈನಿದ್ದೀನ್, ಮುಸ್ತಾಫ, ರಾಜೇಶ್ ತಾ. 17ರಂದು ಬೆಳಗ್ಗಿನ ಜಾವ ಮತ್ತೆ ಮಡಿಕೇರಿ ನಗರಕ್ಕೆ ರಾತ್ರಿ ವೇಳೆ ಬರುವಂತಹ ಪ್ರವಾಸಿಗರನ್ನು ಏಕಾಏಕಿ ಅಡ್ಡಗಟ್ಟಿ ತಮ್ಮೊಂದಿಗೆ ಬರುವಂತೆ ಒತ್ತಾಯಿಸಿ ಪ್ರವಾಸಿಗರಿಗೆ ಭಯದ ವಾತಾವರಣ ಉಂಟು ಮಾಡುತ್ತಿದ್ದ ಮೇರೆಗೆ ಅವರನ್ನು ದಸ್ತಗಿರಿ ಮಾಡಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.

ಮಡಿಕೇರಿ ನಗರದಲ್ಲಿ ಯಾವದೇ ಸಮಯದಲ್ಲಿ ಯಾರೇ ಹೋಂ ಸ್ಟೇ ಮಧ್ಯವರ್ತಿಗಳು ಪ್ರವಾಸಿಗರನ್ನು ಅಡ್ಡಗಟ್ಟಿ ತೊಂದರೆ ನೀಡುವದು ಕಂಡು ಬಂದಲ್ಲಿ ಸಾರ್ವಜನಿಕರು ಮಡಿಕೇರಿ ನಗರ ಪೊಲೀಸ್ ಠಾಣೆ (08272-229333), ಪಿಎಸ್‍ಐ ಮಡಿಕೇರಿ ನಗರ ಠಾಣೆ (9480804945) ಅಥವಾ ಪೊಲೀಸ್ ಕಂಟ್ರೋಲ್ ರೂಂ (08272-229330)ಗೆ ಮಾಹಿತಿಯನ್ನು ನೀಡಿದರೆ ಕಾನೂನು ಉಲ್ಲಂಘಿಸಿ ವರ್ತಿಸುವ ಹೋಂ ಸ್ಟೇ ಮಧ್ಯವರ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವದು ಎಂಬದಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.