ಮಡಿಕೇರಿ, ಮೇ 9: ವಿಧಾನಸಭಾ ಚುನಾವಣೆ ನಿಷ್ಪಕ್ಷಪಾತವಾಗಿ ನಡೆಯಲು ಚುನಾವಣಾಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿರುವ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡ ಟಿ.ಪಿ. ರಮೇಶ್, ಗಿರಿಜನ ಹಾಡಿ ಹಾಗೂ ದುರ್ಬಲ ವರ್ಗದ ಮತದಾರರು ಇರುವ ಭಾಗದಲ್ಲಿ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಬೇಕೆಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಿರಿಜನ ಹಾಡಿ ಮತ್ತು ದುರ್ಬಲ ವರ್ಗದ ಮತದಾರರು ಮತಗಟ್ಟೆಗೆ ಬಾರದಂತೆ ತಡೆಯುವ ಕುತಂತ್ರಗಳು ಹಿಂದಿನ ಚುನಾವಣೆಯಲ್ಲಿ ನಡೆದಿದ್ದು, ಈ ಬಾರಿ ಅದು ಮರುಕಳಿಸದಂತೆ ಚುನಾವಣಾಧಿಕಾರಿಗಳು ಇಂತಹ ಪ್ರದೇಶಗಳಲ್ಲಿ ಕಣ್ಗಾವಲು ಇರಿಸಬೇಕೆಂದು ಆಗ್ರಹಿಸಿದರು.

ಈಗಾಗಲೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್. ಅರುಣ್ ಮಾಚಯ್ಯ ಅವರು ಲಿಖಿತ ರೂಪದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಗಮನ ಸೆಳೆದಿದ್ದಾರೆ. ಅಕ್ರಮಗಳನ್ನು ತಡೆಯುವ ಸಲುವಾಗಿ ರೂಪಿಸಲಾಗಿರುವ ಫ್ಲೈಯಿಂಗ್ ಸ್ಕ್ವಾಡ್ ಎಷ್ಟೇ ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಿಸಿದರು ಕಾಫಿ ತೋಟದೊಳಗೆ, ಹಾಡಿಗಳಿರುವ ಪ್ರದೇಶ ಮತ್ತು ದುರ್ಬಲ ಮಂದಿ ಹೆಚ್ಚಾಗಿ ವಾಸಿಸುವ ಭಾಗದಲ್ಲಿ ಅಕ್ರಮಗಳನ್ನು ನಿಯಂತ್ರಿಸುತ್ತಾರೆ ಎನ್ನುವ ಬಗ್ಗೆ ಸಂಶಯವಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮೂಡಾ ಅಧ್ಯಕ್ಷ ಚುಮ್ಮಿ ದೇವಯ್ಯ, ವಕ್ಫ್ ಬೋರ್ಡ್ ಅಧ್ಯಕ್ಷ ಅಬ್ದುಲ್ ರೆಹೆಮಾನ್, ನಾಪೋಕ್ಲು ಬ್ಲಾಕ್ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್, ಎಐಸಿಸಿ ವೀಕ್ಷಕ ವರ್ಕಳ ಕಹಾರ್ ಹಾಗೂ ಪ್ರಮುಖರಾದ ಶೌಕತ್ ಆಲಿ ಉಪಸ್ಥಿತರಿದ್ದರು.