ಕೂಡಿಗೆ, ಮೇ 9: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ಸುರಿದ ಭಾರಿ ಮಳೆ ಗಾಳಿಗೆ ಶಿರಂಗಾಲದ ಮೂಡಲಕೊಪ್ಪಲು, ನಲ್ಲೂರು ವ್ಯಾಪ್ತಿಗಳಲ್ಲಿ ವಿದ್ಯುತ್ ತಂತಿಯ ಮೇಲೆ ಮರ ಬಿದ್ದ ಪರಿಣಾಮ ಹತ್ತು ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

ಅಲ್ಲದೆ, ಶಿರಂಗಾಲ ಗ್ರಾಮದ ಪೇಟೆಬೀದಿಯಲ್ಲಿ ಪರಮೇಶ್ ಎಂಬವರ ಮನೆಯ 10ಕ್ಕೂ ಹೆಚ್ಚು ಸಿಮೆಂಟ್ ಶೀಟ್‍ಗಳು ಗಾಳಿಗೆ ಹಾರಿ ಪುಡಿ ಪುಡಿಯಾಗಿದ್ದು, ಮನೆಯಲ್ಲಿನ ಸಮಾಗ್ರಿಗಳು ಹಾನಿಯಾಗಿವೆ.

ಕೂಡಿಗೆ, ಕೂಡುಮಂಗಳೂರು, ಹೆಬ್ಬಾಲೆ, ತೊರೆನೂರು ವ್ಯಾಪ್ತಿಯಲ್ಲಿ 2.5 ಇಂಚಿಗೂ ಅಧಿಕ ಮಳೆ ಸುರಿದಿದ್ದು, ಕೆಲವು ಪ್ರದೇಶಗಳಲ್ಲಿ ಕೊಟ್ಟಿಗೆಯ ಸಿಮೆಂಟ್ ಶೀಟ್‍ಗಳು ಹಾರಿಹೋಗಿವೆ. ಭಾರಿ ಗಾಳಿಯ ರಭಸಕ್ಕೆ ಅಡಿಕೆ ಮರಗಳು ಮುರಿದು ಬಿದ್ದಿವೆ.

ಶನಿವಾರಸಂತೆ : ಪಟ್ಟಣ ಹಾಗೂ ಹೋಬಳಿಯಾದ್ಯಂತ ಮಂಗಳವಾರ ರಾತ್ರಿ ಉತ್ತಮ ಮಳೆಯಾಗಿದೆ. ಶನಿವಾರಸಂತೆ, ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದೂವರೆ ಇಂಚು ಮಳೆಯಾದರೆ, ಹಂಡ್ಲಿ, ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 3 ಇಂಚು ಮಳೆಯಾಗಿದೆ.

ಸುಡುವ ಬಿಸಿಲಿಗೆ ಕಾದಿದ್ದ ಭೂಮಿ 3 ಗಂಟೆ ಕಾಲ ಸುರಿದ ಮಳೆಯಿಂದ ತಂಪಾಯಿತು. ಮಳೆಗಾಗಿ ಹಂಬಲಿಸುತ್ತಿದ್ದ ರೈತರು ಸಕಾಲದಲ್ಲಿ ಮಳೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿನಲ್ಲಿ ಹಸಿರು ಮೆಣಸಿನಕಾಯಿ ಬೆಳೆ ಮುಕ್ತಾಯ ಹಂತಕ್ಕೆ ಬಂದಿದ್ದು, ಮಂಡಿಯಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಹಾಗಾಗಿ ಮಳೆಯಿಂದಾಗಿ ಕರ್ನಾಟಕದಲ್ಲಿ ಹಸಿರು ಮೆಣಸಿಕಾಯಿ ಬೆಳೆ ಇಳುವರಿ ಹೆಚ್ಚಾದರೆ ದರವೂ ಹೆಚ್ಚಾಗಬಹುದು ಎಂಬ ಆಶಾ ಭಾವನೆ ಬೆಳೆಗಾರರದು.

ಸೋಮವಾರಪೇಟೆ : ಮಂಗಳವಾರ ರಾತ್ರಿ 8.30ರ ಸಮಯದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಸುರಿದ ಪರಿಣಾಮ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿರುವ ಘಟನೆ ಸಮೀಪದ ಶುಂಠಿ ಗ್ರಾಮದಲ್ಲಿ ನಡೆದಿದೆ.

ಶುಂಠಿ ಗ್ರಾಮದ ನಿವಾಸಿ ಕೆಂಚಯ್ಯ ಅವರ ಮನೆ ಮೇಲೆ ಆಲದ ಮರ ಮುರಿದು ಬಿದ್ದಿದೆ. ಇನ್ನೊಂದು ಕೊಠಡಿಯಲ್ಲಿ ಕುಳಿತಿದ್ದ ಕೆಂಚಯ್ಯ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಸತಿ ಯೋಜನೆಯಲ್ಲಿ ಮನೆಯ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು, ಕಾಮಗಾರಿ ಪೂರ್ಣಗೊಂಡಿರುವ ಒಂದು ಕೊಠಡಿಯಲ್ಲಿ ದಂಪತಿ ಮಲಗುತ್ತಿದ್ದರು. ಅದೃಷ್ಟವಶಾತ್ ಪಕ್ಕದ ಗೋಡೆಯ ಮೇಲೆ ಮರ ಬಿದ್ದಿದ್ದರಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ.