ಮಡಿಕೇರಿ, ಮೇ 9: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ತಾ. 12ರಂದು (ನಾಡಿದ್ದು) ಸಾರ್ವತ್ರಿಕ ಚುನಾವಣೆಯು ನಡೆಯಲಿದ್ದು, ಕೊಡಗಿನ ಎರಡು ವಿಧಾನಸಭಾ ಕ್ಷೇತ್ರಗಳ 17 ಅಭ್ಯರ್ಥಿಗಳ ಸಹಿತ ರಾಜ್ಯದ 2655 ಉಮೇದುವಾರರ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ. ಈ ಸಂಬಂಧ ತಾ. 10 ರಂದು (ಇಂದು) ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು, ಸಂಜೆ 6 ಗಂಟೆ ಬಳಿಕ ಕೇವಲ ಮನೆ ಮನೆ ತೆರಳಿ ಮತಯಾಚನೆ ನಡೆಸಬಹುದಾಗಿದೆ.

ಕರ್ನಾಟಕ ವಿಧಾನಸಭೆಯ ಎಲ್ಲಾ 224 ಕ್ಷೇತ್ರಗಳಲ್ಲಿ ಬಿಜೆಪಿ ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದು, ಪ್ರಸಕ್ತ ಆಡಳಿತಾರೂಢ ಕಾಂಗ್ರೆಸ್ 222 ಕ್ಷೇತ್ರಗಳಲ್ಲಿ ಮಾತ್ರ ನಾಮಪತ್ರ ಸಲ್ಲಿಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇನ್ನು ಜೆಡಿಎಸ್ 201 ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸಿದ್ದು, ಇತರ ಪಕ್ಷಗಳಾದ ಸಿಪಿಐಎಂ 19, ಬಿಎಸ್‍ಪಿ 18, ಎನ್‍ಸಿಪಿ 14, ಸಿಪಿಐ 2 ಸ್ಥಾನಗಳಲ್ಲಿ ಚುನಾವಣೆ ಎದುರಿಸುತ್ತಿದೆ.

ಉಳಿದಂತೆ ಬೇರೆ ಬೇರೆ ನೊಂದಾಯಿತ ರಾಜಕೀಯ ಪಕ್ಷಗಳ ಅಡಿಯಲ್ಲಿ 800 ಮಂದಿ ಅಭ್ಯರ್ಥಿಗಳಿದ್ದು, ಸ್ವತಂತ್ರರಾಗಿ 1155 ಮಂದಿ ಚುನಾವಣಾ ಕಣದಲ್ಲಿದ್ದಾರೆ.

ಹೀಗೆ ರಾಜ್ಯದಲ್ಲಿ ಒಟ್ಟು 2655 ಮಂದಿ ಅಭ್ಯರ್ಥಿಗಳ ಪೈಕಿ 2436 ಪುರುಷರು ಹಾಗೂ 219 ಮಹಿಳೆಯರು ಚುನಾವಣೆ ಎದುರಿಸುತ್ತಿದ್ದಾರೆ.

ಕೊಡಗು: ಕೊಡಗು ಜಿಲ್ಲೆಯಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸ್ಪರ್ಧೆಯಲ್ಲಿದ್ದು, ಎಂಇಪಿ ಸೇರಿದಂತೆ ಇತರ ಪಕ್ಷಗಳ ಹೆಸರಿನಲ್ಲಿ ಮತ್ತು ಪಕ್ಷೇತರರಾಗಿ ಒಟ್ಟು 17 ಮಂದಿ ಕಣದಲ್ಲಿದ್ದು, ಇಬ್ಬರು ಮಹಿಳೆಯರು ಚುನಾವಣಾ ಅಖಾಡದಲ್ಲಿದ್ದಾರೆ.

ಮಡಿಕೇರಿ ಕ್ಷೇತ್ರ: ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಇಬ್ಬರು ಮಹಿಳಾ ಅಭ್ಯರ್ಥಿಗಳ ಸಹಿತ ಒಟ್ಟು 11 ಸ್ಪರ್ಧಿಗಳು ಚುನಾವಣೆ ಎದುರಿಸುತ್ತಿದ್ದು, ಈ ಕ್ಷೇತ್ರದಲ್ಲಿ 1,09,399 ಮಹಿಳೆಯರ ಸಹಿತ 1,07,532 ಮಂದಿ ಪುರುಷ ಮತದಾರರು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.

ವೀರಾಜಪೇಟೆ ಕ್ಷೇತ್ರ: ಅಂತೆಯೇ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಆರು ಮಂದಿ ಕಣದಲ್ಲಿದ್ದು, ಈ ಕ್ಷೇತ್ರದ 1,08,318 ಮಹಿಳೆಯರು ಹಾಗೂ 1,08,590 ಮಂದಿ

(ಮೊದಲ ಪುಟದಿಂದ) ಪುರುಷರು ತಾ. 12ರಂದು ಮತದಾನದೊಂದಿಗೆ ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಶನಿವಾರ ಬೆಳಿಗ್ಗೆ 7ರಿಂದ ಸಂಜೆ 6 ಗಂಟೆಯ ತನಕ ಮತದಾನ ನಡೆಯಲಿದೆ.

ಮನೆ ಮನೆ ಪ್ರಚಾರ: ಒಂದೆಡೆ ರಾಜಕೀಯ ಪಕ್ಷಗಳಿಂದ ಮನೆ ಮನೆಗಳಲ್ಲಿ ಮತಬೇಟೆ ನಡೆಯುತ್ತಿದ್ದರೆ, ಚುನಾವಣಾ ಆಯೋಗದ ನಿರ್ದೇಶನದಂತೆ ಕೊಡಗು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮಾರ್ಗದರ್ಶನದೊಂದಿಗೆ ಪ್ರಾಮಾಣಿಕ ಮತದಾನಕ್ಕಾಗಿ ವಿಶೇಷ ಪ್ರಚಾರ ಹಮ್ಮಿಕೊಳ್ಳಲಾಗಿದೆ.

ವಿಶೇಷ ಪ್ರಚಾರ: ಈ ದಿಸೆಯಲ್ಲಿ ಕೆಲವು ಸ್ವಯಂ ಸೇವಾ ಸಂಸ್ಥೆಗಳ ನೆರವು ಪಡೆದಿರುವ ಜಿಲ್ಲಾ ಪಂಚಾಯತ್, ಪ್ರಜಾ ಪ್ರಭುತ್ವ ಸಬಲೀಕರಣ ಅಭಿಯಾನದೊಂದಿಗೆ ಕೊಡಗಿನ ಗಿರಿಜನ ಹಾಡಿಗಳು, ದಲಿತ ಕಾಲೋನಿಗಳು, ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷ ಪ್ರಚಾರ ಕೈಗೊಂಡಿದೆ. ಆ ಮೂಲಕ ‘‘ನಾನು ಪ್ರಾಮಾಣಿಕ ಮತದಾರ’’ ಎಂಬ ಸಂಕಲ್ಪದೊಂದಿಗೆ ಅಲ್ಲಲ್ಲಿ ಜಾಗೃತಿ ಮೂಡಿಸುತ್ತಿರುವದು ಕಾಣಬರುತ್ತಿದೆ. ಅಲ್ಲದೆ, ಕಡ್ಡಾಯ ಮತದಾನದ ಅವಶ್ಯಕತೆ ಹಾಗೂ ಮತ ಚಲಾವಣೆಯಿಂದ ಸಮರ್ಥ ಜನಪ್ರತಿನಿಧಿಯ ಆಯ್ಕೆ ಕುರಿತು ಮನವರಿಕೆ ಮಾಡಿಕೊಡುತ್ತಿದೆ. ಒಟ್ಟಿನಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆ ಕರ್ನಾಟಕದತ್ತ ದೇಶ ಗಮನಹರಿಸಿದಂತೆ ಭಾಸವಾಗತೊಡಗಿದ್ದು, ಕೊಡಗು ಕೂಡ ತನ್ನದೇ ವಿಶಿಷ್ಟತೆಗಳೊಂದಿಗೆ ಮತದಾರರು ಮತ್ತು ಕಣದಲ್ಲಿರುವ ಅಭ್ಯರ್ಥಿಗಳು ಹಾಗೂ ಜಿಲ್ಲಾಡಳಿತ ತಾ.12ರ ಸಾರ್ವತ್ರಿಕ ಮತದಾನಕ್ಕೆ ಪೂರ್ವ ತಯಾರಿ ಮಾಡಿಕೊಂಡಿರುವದು ದೃಢಪಟ್ಟಿದೆ.