ಮಡಿಕೇರಿ, ಮೇ. 4: ಇಲ್ಲಿನ ಕೋಟೆ ಆವರಣ ದಲ್ಲಿರುವ ಹಳೆಯ ಜೈಲು ಕಟ್ಟಡದಲ್ಲಿದ್ದ ಜಿಲ್ಲಾ ಬಾಲಕಿಯರ ಬಾಲಮಂದಿರವನ್ನು ಇಂದು ನಗರದ ಫೀ.ಮಾ. ಕಾರ್ಯಪ್ಪ ಕಾಲೇಜು ಬಳಿ ಇರುವ ನೂತನ ಕಟ್ಟಡಕ್ಕೆ ಸ್ಥಳಾಂತರ ಗೊಳಿಸಲಾಯಿತು. ಇತ್ತೀಚೆಗೆ ಚುನಾವಣಾ ನೀತಿ ಸಂಹಿತೆ ಜಾರಿಗೊಳ್ಳುವ ಪೂರ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ನೂತನ ಕಟ್ಟಡ ಉದ್ಘಾಟಿಸಿದ್ದರು.

ಇದುವರೆಗೆ ಹಳೆಯ ಜೈಲು ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಬಾಲಕಿಯರ ಮಂದಿರವನ್ನು ಇಂದು ಸ್ಥಳಾಂತರಗೊಳಿಸುವ ಕಾರ್ಯ ನಡೆಯಿತು. ನೂತನ ಕಟ್ಟಡದಲ್ಲಿ ಎಲ್ಲಾ ಮೂಲಭೂತ ಸೌಕರ್ಯದೊಂದಿಗೆ ಮಕ್ಕಳ ಮನಸ್ಸಿಗೆ ಮುದ ನೀಡುವ ವಾತಾವರಣ ರೂಪಿಸಿದ್ದು, ಉತ್ತಮ ವ್ಯವಸ್ಥೆ ಕಲ್ಪಿಸಲಾಗಿದೆ. ಕಟ್ಟಡ ಒಳಾಂಗಣದೊಳಗೆ ಗೋಡೆಗಳಲ್ಲಿ ಗಮನ ಸೆಳೆಯುವ ಹಾಗೂ ಮಕ್ಕಳ ಪ್ರತಿಭೆ ಬೆಳಗುವ ಕಲೆಗಳನ್ನು ರೂಪಿಸಿದ್ದು, ಹಳೆಯ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವ ಪುಟಾಣಿಗಳಿಗೆ ಇಲ್ಲಿ ಹಲವಷ್ಟು ಸ್ಫೂರ್ತಿಯ ಅಂಶಗಳು ಗಮನ ಸೆಳೆಯುವಂತಿವೆ.

ಹಿನ್ನೆಲೆ : 6 ರಿಂದ 18 ವರ್ಷದೊಳಗೆ ದೌರ್ಜನ್ಯಕ್ಕೆ ಒಳಗಾಗುವಂತಹ ಹೆಣ್ಣು ಮಕ್ಕಳ ಸಹಿತ ಶಿಕ್ಷಣ ವಂಚಿತ ನಿರ್ಗತಿಕ ಅಥವಾ ಅನಾಥ ಮಕ್ಕಳಿಗೆ ಇಲ್ಲಿ ಆಸರೆ ಕಲ್ಪಿಸಲಾಗುತ್ತಿದೆ. 2011 ರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಹಿಂದಿನ ರಿಮ್ಯಾಂಡ್ ಹೋಂನಲ್ಲಿ ಆರಂಭಗೊಂಡ ಈ ಬಾಲಕಿಯರ ಬಾಲಮಂದಿರ ಒಂದೆರಡು ವರ್ಷ ದೇಚೂರುವಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ನಡೆಯಿತು.

ಆ ಬಳಿಕ ಇದುವರೆಗೆ ಇಲ್ಲಿನ ಹಳೆಯ ಜೈಲು ಕಟ್ಟಡದಲ್ಲಿ ಮುಂದುವರಿಯುವದರೊಂದಿಗೆ, ಪ್ರಸಕ್ತ ದಿನದಿಂದ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ನೂತನ ಕಟ್ಟಡದಲ್ಲಿ ಎಲ್ಲಾ ಮೂಲಭೂತ ಸೌಲಭ್ಯ ಸಹಿತ ಸೂಕ್ತ ಭದ್ರತಾಕ್ರಮಗಳಿದ್ದು, ಉತ್ತಮ ಪರಿಸರ ಗೋಚರಿಸಿದೆ. ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧೀಕ್ಷಕಿ ಮುಮ್ತಾಜ್ ಯೋಜನೆ ಇದಾಗಿದೆ. ಪ್ರಸಕ್ತ 30ಕ್ಕೂ ಅಧಿಕ ಹೆಣ್ಣು ಮಕ್ಕಳು ಆಸರೆ ಹೊಂದಿದ್ದಾರೆ.