ಮಡಿಕೇರಿ: ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ವತಿಯಿಂದ ವಿವಿಧೆಡೆ ಬಿರುಸಿನ ಪ್ರಚಾರ ಕಾರ್ಯ ನಡೆಯಿತು. ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ. ಚಂದ್ರಕಲಾ ಅವರ ಪರ ಮತಯಾಚಿಸಿದ ಪಕ್ಷದ ಕಾರ್ಯಕರ್ತರು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

ನಗರಸಭಾ ವ್ಯಾಪ್ತಿಯ ಬಡವಾಣೆಗಳಿಗೆ ಭೇಟಿ ನೀಡಿದ ಅಭ್ಯರ್ಥಿ ಕೆ.ಪಿ. ಚಂದ್ರಕಲಾ, ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಯು. ಅಬ್ದುಲ್ ರಜಾóಕ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರವೀಂದ್ರ ಅಪ್ರು ಸೇರಿದಂತೆ ಪಕ್ಷದ ಪ್ರಮುಖರು ಮತಯಾಚಿಸಿದರು.

ಈ ಸಂದರ್ಭ ಮಾತನಾಡಿದ ಕೆ.ಪಿ. ಚಂದ್ರಕಲಾ ಮಡಿಕೇರಿ ಕ್ಷೇತ್ರದ ಜನ ಬದಲಾವಣೆಯನ್ನು ಬಯಸಿದ್ದು, ಮಹಿಳಾ ಅಭ್ಯರ್ಥಿಯಾಗಿರುವ ನನ್ನನ್ನು ಬಹುಮತದಿಂದ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮತಯಾಚಿಸಿ ಹೋದ ಕಡೆಯಲೆಲ್ಲ ಜನರು ಅಭೂತಪೂರ್ವ ಬೆಂಬಲವನ್ನು ಸೂಚಿಸುವ ಮೂಲಕ ಚುನಾವಣಾ ಉತ್ಸಾಹವನ್ನು ಹೆಚ್ಚಿಸಿದ್ದಾರೆ ಎಂದು ಕೆ.ಪಿ. ಚಂದ್ರಕಲಾ ಅಭಿಪ್ರಾಯಪಟ್ಟರು.

ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಯು. ಅಬ್ದುಲ್ ರಜಾóಕ್ ಮಾತನಾಡಿ, ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಚಂದ್ರಕಲಾ ಅವರ ಪರವಾಗಿ ಮಹಿಳೆಯರು ನಿಂತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ಅಪ್ರು ಮಾತನಾಡಿ, ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಪರ ಜನರ ಒಲವು ಹೆಚ್ಚಾಗುತ್ತಿದ್ದು, ಕೆ.ಪಿ. ಚಂದ್ರಕಲಾ ಅವರ ಗೆಲುವು ಖಚಿತವೆಂದರು.

ನಗರಸಭಾ ಅಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ, ಮಾಜಿ ಅಧ್ಯಕ್ಷೆ ಜುಲೇಕಾಬಿ, ಮೂಡಾ ಅಧ್ಯಕ್ಷ ಚುಮ್ಮಿ ದೇವಯ್ಯ, ಪಕ್ಷದ ಪ್ರಮುಖರಾದ ಚಂದ್ರಶೇಖರ್, ಮ್ಯಾಥ್ಯು, ಅಂಬೆಕಲ್ಲು ನವೀನ್ ಕುಶಾಲಪ್ಪ, ಮುನೀರ್ ಅಹಮ್ಮದ್, ನಗರಸಭೆಯ ಸದಸ್ಯರುಗಳು ಮತ್ತು ಕಾರ್ಯಕರ್ತರು ಮತಯಾಚನೆ ಸಂದರ್ಭ ಹಾಜರಿದ್ದರು.