ಕೊಳಕೇರಿ, ಮೇ 4 : ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷಗಳ ನಡುವೆ ಈ ಬಾರಿ ಚುನಾವಣೆ ನಡೆಯುತ್ತಿಲ್ಲ. ಬದಲಾಗಿ ಅಭ್ಯರ್ಥಿಗಳ ನಡುವೆ ಚುನಾವಣೆ ನಡೆಯುತ್ತಿದೆ. ಈ ಬಾರಿ ಕ್ಷೇತ್ರದಲ್ಲಿ ಜೆಡಿಎಸ್‍ಗೆ ಮತದಾರ ಆಶೀರ್ವಾದ ಮಾಡಲಿದ್ದಾನೆ ಎಂದು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಂಕೇತ್ ಪೂವಯ್ಯ ಅಭಿಪ್ರಾಯಪಟ್ಟರು.

ನಾಪೋಕ್ಲು ಪಂಚಾಯಿತಿ ವ್ಯಾಪ್ತಿಯ ಕೊಳಕೇರಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ಬಹಿರಂಗ ಸಭೆಯಲ್ಲಿ ಮಾತನಾಡಿದ ಸಂಕೇತ್ ಪೂವಯ್ಯ; ಈ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳು ಆಡಳಿತ ನಡೆಸಿ ಜವಾಬ್ದಾರಿಯಿಂದ ಇಲ್ಲಿಯ ತನಕ ನಡೆದುಕೊಂಡಿಲ್ಲ. ಸರ್ವಧರ್ಮದ ಶಾಂತಿಯ ತೋಟದಲ್ಲಿ ವಿಷ ಬೀಜ ಬಿತ್ತಿ ಸಾಮರಸ್ಯವನ್ನು ಹಾಳು ಮಾಡಿದ್ದಾರೆ. ಬಡವರ, ಅಲ್ಪ ಸಂಖ್ಯಾತರ ಪರ ಧ್ವನಿಯಾಗಿರುವ ಜೆಡಿಎಸ್ ಪಕ್ಷವನ್ನು ಈ ಬಾರಿ ಅಧಿಕಾರಕ್ಕೆ ತರಬೇಕು ಅಮೂಲ್ಯವಾದ ಮತಗಳಿಗೆ ಗೌರವ ನೀಡುತ್ತೇನೆ. ಸೋತರೂ, ಗೆದ್ದರೂ ಕ್ಷೇತ್ರದಲ್ಲಿ ಜನರೊಂದಿಗೆ ಬೆರೆತು ಕೆಲಸ ಮಾಡುತ್ತೇನೆ. ಬಿಜೆಪಿ ಪಕ್ಷದಲ್ಲಿ ಕಳಂಕಿತರಿಗೆ ಆ ಬಾರಿ ಮತ್ತೆ ಟಿಕೆಟ್ ನೀಡಿರುವದು ಅ ಪಕ್ಷದ ಗೌರವವನ್ನು ತೋರಿಸುತ್ತಿದೆ ಎಂದ ಅವರು ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವೆ ನೇರಾ ಹಣಾಹಣಿ ನಡೆಯುತ್ತಿದೆ. ಪೊಳ್ಳು ಭರವಸೆಗಳಿಗೆ ಮಾರು ಹೋಗದೆ ಪ್ರಾದೇಶಿಕ ಪಕ್ಷಕ್ಕೆ ಈ ಬಾರಿ ಮತ ನೀಡುವಂತೆ ಮನವಿ ಮಾಡಿದರು.

ಕೊಳಕೇರಿ ಜೆಡಿಎಸ್ ಸ್ಥಾನೀಯ ಅಧ್ಯಕ್ಷ ಟಿ.ಎ.ಬಶೀರ್ ಅದ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಸಮಿತಿಯ ಮುಖಂಡ ಮನ್ಸೂರ್ ಆಲಿ, ಕ್ಷೇತ್ರ ಅಧ್ಯಕ್ಷ ಎಸ್.ಎಚ್. ಮತೀನ್, ಕಾಂಗ್ರೆಸ್ ಹಾಗೂ ಬಿಜೆಪಿ ಆಡಳಿತದ ಬಗ್ಗೆ ಯೋಚಿಸಿ ಈ ಬಾರಿ ಜೆಡಿಎಸ್‍ಗೆ ಮತ ನೀಡುವಂತೆ ಮನವಿ ಮಾಡಿದರು. ಬಹಿರಂಗ ಸಭೆಯ ನಂತರ ಅಭ್ಯರ್ಥಿ ಸಂಕೇತ್ ಪೂವಯ್ಯ ಹಾಗೂ ಮುಖಂಡರು ಮತಯಾಚನೆ ಮಾಡಿದರು. ಈ ಸಂದರ್ಭ ರಶೀದ್, ಹಬೀದ್, ಮಜಿದ್, ಸುಲೈಮಾನ್, ಸಂಶು, ಖಾಲಿದ್, ಬಶೀರ್, ಫಾರುಕ್, ಶಮೀರ್ ಮುಂತಾದವರು ಹಾಜರಿದ್ದರು.