ಕುಶಾಲನಗರ: ಮಡಿಕೇರಿ ವಿಧಾನಸಭಾ ಕ್ಷೇತ್ರದ ಪ್ರಜ್ಞಾವಂತ ಮತದಾರರು ಈ ಬಾರಿ ಭಾರತೀಯ ರಿಪಬ್ಲಿಕನ್ ಪಾರ್ಟಿಗೆ ಮತ ನೀಡುವಂತೆ ಪಕ್ಷದ ಅಭ್ಯರ್ಥಿ ಕೆ.ಬಿ. ರಾಜು ಕೋರಿದ್ದಾರೆ.

ಕುಶಾಲನಗರದ ಸುದ್ದಿಮನೆಯಲ್ಲಿ ನಡೆದ ಗೋಷ್ಠಿಯಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರಿಂದ ನಿರೀಕ್ಷಿತ ಮಟ್ಟದಲ್ಲಿ ಸಾಧನೆಗಳಾಗಿಲ್ಲ. ರಾಜ್ಯದ ಕಾಂಗ್ರೆಸ್ ಸರಕಾರ ಕೂಡ ಧರ್ಮ, ಜಾತಿಗಳ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ದಲಿತರ ಮೇಲಿನ ದೌರ್ಜನ್ಯ, ಕಾವೇರಿ ನೀರಿನ ಸಮಸ್ಯೆ, ಟಿಪ್ಪು ಜಯಂತಿ ವಿವಾದ ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂದರು.

ಕುಶಾಲನಗರವನ್ನು ಕೇಂದ್ರವಾಗಿಸಿಕೊಂಡು ಕಾವೇರಿ ತಾಲೂಕು ರಚನೆಯ ಆಗ್ರಹ ಕೂಡ ಈಡೇರಿಲ್ಲ. ಒಳಚರಂಡಿ ಯೋಜನೆ ಪೂರ್ಣಗೊಂಡಿಲ್ಲ. ಪಟ್ಟಣದ ಹಲವು ಸಮಸ್ಯೆಗಳ ನಿವಾರಣೆಗೆ ನಡೆದ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ತನಗೆ ಕ್ಷೇತ್ರದ ಜನತೆ ಮತ ನೀಡುವಂತೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ಡಿಎಸ್‍ಎಸ್ ಜಿಲ್ಲಾ ಉಪಾಧ್ಯಕ್ಷ ಎಲ್.ಎಂ. ನಾಗರಾಜು, ಕುಶಾಲನಗರ ಹೋಬಳಿ ಅಧ್ಯಕ್ಷ ಕೀರ್ತಿರಾಜು, ಪ್ರಮುಖರಾದ ಬಸವರಾಜು, ಸಂದೀಪ್ ಇದ್ದರು.