ಕುಶಾಲನಗರ: ಸೋಮವಾರ ಪೇಟೆ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಜರ್ಮಿ ಡಿಸೋಜ ಮತ್ತು ಬಿ.ಎಸ್. ಚಂದ್ರಶೇಖರ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವದಾಗಿ ಮಾಹಿತಿ ನೀಡಿದ್ದಾರೆ.

ಕುಶಾಲನಗರ ಸುದ್ದಿಮನೆಯಲ್ಲಿ ನಡೆದ ಗೋಷ್ಠಿಯಲ್ಲಿ ಜಂಟಿಯಾಗಿ ಹೇಳಿಕೆ ನೀಡಿದ ಅವರು, ಮಡಿಕೇರಿ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ. ಚಂದ್ರಕಲಾ ಮತ್ತು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕವಾಗಿರುವ ವಿ.ಪಿ. ಶಶಿಧರ್ ತಮ್ಮನ್ನು ಕಡೆಗಣಿಸುತ್ತಿರುವದು ಗಮನಕ್ಕೆ ಬಂದಿದೆ.

ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಗೊಂಡು ಮರಳಿ ಬಂದ ವಿ.ಪಿ. ಶಶಿಧರ್‍ಗೆ ಪಕ್ಷ ಸ್ಥಳೀಯ ಪ್ರಮುಖರ ಗಮನಕ್ಕೆ ತಾರದೆ ಸ್ಥಾನ ಮಾನಗಳನ್ನು ಕಲ್ಪಿಸಿರುವದು ತಮಗೆ ಅಸಮಾಧಾನ ತಂದಿದೆ ಎಂದಿದ್ದಾರೆ.

ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಎಸ್. ಚಂದ್ರಶೇಖರ್ ಮಾತನಾಡಿ, ಕುಶಾಲನಗರಕ್ಕೆ ಪ್ರತ್ಯೇಕ ಬ್ಲಾಕ್ ರಚನೆಗೆ ಆಗ್ರಹಿಸಿ ತಾವು ಡಿಸಿಸಿಯಲ್ಲಿ ಹೋರಾಟ ನಡೆಸಿ ಕೆಪಿಸಿಸಿ ಮಟ್ಟದಲ್ಲಿ ಪ್ರಭಾವ ಬೀರಿದ ನಂತರ ರಚನೆಯಾದ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಯಾರೊಂದಿಗೂ ಚರ್ಚಿಸದೆ ಏಕಾಏಕಿ ವಿ.ಪಿ. ಶಶಿಧರ್ ನೇಮಕ ಮಾಡಿರುವದು ಅಸಮಾಧಾನ ಉಂಟು ಮಾಡಿದೆ. ವಿಧಾನಸಭಾ ಅಭ್ಯರ್ಥಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪಕ್ಷದ ಯಾವದೇ ಸಭೆಯ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಈ ಹಿನ್ನೆಲೆ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಲಾಗಿದೆ.

ನಮ್ಮ ಮುಂದಿನ ನಡೆಯ ಬಗ್ಗೆ ಬೆಂಬಲಿಗರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವದು ಎಂದು ತಿಳಿಸಿದ್ದಾರೆ. ಈ ಬಗ್ಗೆ ಪಕ್ಷದ ಪ್ರಮುಖರ ಗಮನಕ್ಕೂ ತರಲಾಗಿದೆ ಎಂದು ಹೇಳಿದರು.