ಗೋಣಿಕೊಪ್ಪಲು: ರಾಷ್ಟ್ರೀಯ ಪಕ್ಷಗಳ ಆಡಳಿತದಿಂದ ಜನರು ಬೇಸರಗೊಂಡಿದ್ದು ಪ್ರಾದೇಶಿಕ ಪಕ್ಷದತ್ತ ಜನರ ಒಲವು ಹೆಚ್ಚಾಗಿ ಕಂಡು ಬರುತ್ತಿದೆ. ಇವುಗಳನ್ನು ಮತಗಳಾಗಿ ಪರಿವರ್ತನೆ ಮಾಡಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಸಂಕೇತ್ ಪೂವಯ್ಯ ಅವರನ್ನು ಈ ಬಾರಿ ಆರಿಸಿ ಕಳುಹಿಸುವಂತೆ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ ಅಭಿಪ್ರಾಯಪಟ್ಟರು.

ಟಿ. ಶೇಟ್ಟಿಗೇರಿಯಲ್ಲಿ ಆಯೋಜನೆಗೊಂಡಿದ್ದ ಜೆಡಿಎಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 40 ವರ್ಷಗಳ ಹೋರಾಟಕ್ಕೆ ರಾಷ್ಟ್ರೀಯ ಪಕ್ಷಗಳಿಂದ ಆರಿಸಿ ಹೋದ ಜನಪ್ರತಿನಿಧಿಗಳು ಸ್ಪಂದನ ನೀಡಲಿಲ್ಲ. ಪ್ರಾದೇಶಿಕ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ರೈತರೊಂದಿಗೆ, ಬೆಳೆಗಾರರೊಂದಿಗೆ ಬೆರೆತು ತಮ್ಮ ಸಮಸ್ಯೆಯನ್ನು ಆಲಿಸಿದ್ದಾರೆ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಕಾಫಿ ಬೆಳೆಗಾರರ ಸಂಪೂರ್ಣ ಕೃಷಿ ಸಾಲವನ್ನು ಮನ್ನಾ ಮಾಡುವದಾಗಿ ಭರವಸೆ ನೀಡಿದ್ದಾರೆ. ರಾಷ್ಟ್ರೀಯ ಪಕ್ಷಗಳಿಗೆ ಇಂತಹ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ರೈತನ ಸಮಸ್ಯೆ ಬಗೆ ಹರಿದರೆ ಎಲ್ಲವೂ ಸರಿ ಹೋಗಲಿದೆ ಎಂದು ಹೇಳಿದರು.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಂಕೇತ್ ಪೂವಯ್ಯ ಮಾತನಾಡಿ, ದಕ್ಷಿಣ ಕೊಡಗಿನಲ್ಲಿ ಜೆಡಿಎಸ್ ಪಕ್ಷಕ್ಕೆ ನಿರೀಕ್ಷೆ ಗಿಂತ ಉತ್ತಮ ಬೆಂಬಲ ವ್ಯಕ್ತವಾಗಿದೆ. ಉತ್ತಮ ಸರ್ಕಾರ ನಿರ್ಮಾಣ ವಾಗಲು ಈ ಬಾರಿ ಜೆಡಿಎಸ್‍ಗೆ ಬೆಂಬಲಿಸುವಂತೆ ಮನವಿ ಮಾಡಿದ ಸಂಕೇತ್ ಪೂವಯ್ಯ ಚುನಾವಣೆಗೆ ಸೀಮಿತವಾಗಿ ನಾನು ಎಂದೂ ಕೆಲಸ ಮಾಡಲಾರೆ ಗೆದ್ದರೂ ಸೋತರು ಜನತೆಯ ಕಷ್ಟಗಳಲ್ಲಿ ಭಾಗಿಯಾಗು ತ್ತೇನೆ ಎಂದರು. ಜಿಲ್ಲಾ ಮಹಿಳಾ ಅಧ್ಯಕ್ಷೆ ಅಜ್ಜಮಾಡ ಮುತ್ತಮ್ಮ, ಜೆಡಿಎಸ್ ಮುಖಂಡರಾದ ಮಚ್ಚಮಾಡ ನಾಣಯ್ಯ, ಸ್ಥಾನೀಯ ಅಧ್ಯಕ್ಷ ಉಳುವಂಗಡ ದತ್ತ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಪರಮಾಲೆ ಗಣೇಶ್, ಕ್ಷೇತ್ರ ಅಧ್ಯಕ್ಷ ಎಸ್.ಹೆಚ್. ಮತೀನ್, ಯುವ ಜೆಡಿಎಸ್‍ನ ಅಧ್ಯಕ್ಷ ಅಮ್ಮಂಡ ವಿವೇಕ್, ಬಿರುನಾಣಿ ಸ್ಥಾನೀಯ ಅಧ್ಯಕ್ಷ ಕರ್ತಮಾಡ ನರೇಂದ್ರ, ಹೆಚ್.ಎಂ. ಚಂದ್ರ, ಪಿ.ವಿ. ರೆನ್ನಿ, ಸಜನ್ ಮುಂತಾದವರು ಹಾಜರಿದ್ದರು.