ಮಡಿಕೇರಿ, ಮೇ 4 : ಪ್ರಥಮ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಗೆಲ್ಲುವ ವಿಶ್ವಾಸವಿದೆ. ಇದುವರೆಗಿನ ಶಾಸಕರುಗಳು, ಮಾಜಿ ಮಂತ್ರಿಗಳು ಹಾಗೂ ಅವರ ಕಾರ್ಯವೈಖರಿಗೆ ಬೇಸತ್ತಿರುವ ಜನತೆ ಬದಲಾವಣೆ ಬಯಸಿದ್ದಾರೆ. ಸುಳ್ಳು ಹೇಳಿಕೆ, ವದಂತಿಗಳಿಗೆ ಕಿವಿಗೊಡುವದಿಲ್ಲ. ಮಹಿಳೆಯರಿಗೂ ತಾನು ಮಾಡಿದ ಜನಪರ ಕೆಲಸಗಳ ಬಗ್ಗೆ ನಂಬಿಕೆ ಇದೆ. ಮಹಿಳಾ ಮತದಾರರೇ ಹೆಚ್ಚಿರುವದರಿಂದ ಮಹಿಳೆಯರು ಅವರ ಮನೆಯವರನ್ನು ‘ಕೈ’ ಹಿಡಿದು ಕರೆ ತಂದು ಮಹಿಳಾ ಅಭ್ಯರ್ಥಿಗೆ ಮತ ಹಾಕಿಸುತ್ತಾರೆ. ಮಹಿಳೆಯೇ ಇಲ್ಲಿ ಪ್ರಮುಖ ವಹಿಸುತ್ತಾರೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಪಿ. ಚಂದ್ರಕಲಾ ಪ್ರಸನ್ನ ವಿಶ್ವಾಸ ವ್ಯಕ್ತಪಡಿಸಿದರು.‘ಶಕ್ತಿ’ ನಡೆಸಿದ ಸಂದರ್ಶನದಲ್ಲಿ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು.ಶಕ್ತಿ : ನಿಮಗೆ ವಿಚಿತ್ರ ಸನ್ನಿವೇಶದಲ್ಲಿ ಟಿಕೆಟ್ ಸಿಕ್ಕಿದೆ ಪ್ರಥಮ ಹಂತದಲ್ಲೇ ಯಾಕೆ ಸಿಕ್ಕಿಲ್ಲ ?ಕಲಾ : ಮೊದಲೇ ಟಿಕೆಟ್ ಕೊಡಬೇಕಿತ್ತು. ಈ ಬಗ್ಗೆ ಬೇಸರವಿತ್ತು. ಆದರೂ ಇದೀಗ ಅವಕಾಶ ಸಿಕ್ಕಿದ್ದನ್ನು ಬಳಸಿಕೊಂಡು ಜನಪರ ಕೆಲಸ ಮಾಡುತ್ತೇನೆ.
ಶಕ್ತಿ : ಈ ಹಿಂದೆ ದಿನೇಶ್ ಗುಂಡೂರಾವ್ ಅವರ ಮೇಲೇ ಕೋಪಿಸಿಕೊಂಡಿದ್ದೀರಿ ನಿಮ್ಮ ನೇರ ಪ್ರವೃತ್ತಿ ಹಲವೊಮ್ಮೆ ಎಡವಟ್ಟು ಮಾಡಿದೆಯೇ ?
ಕಲಾ : ಇಲ್ಲಿ ವಿರೋಧ, ದ್ವೇಷ ಏನೂ ಇಲ್ಲ. ಕುಶಾಲನಗರಕ್ಕೆ ತನ್ನ ಪ್ರಯತ್ನದಿಂದ ಪೊಲೀಸ್ ಠಾಣೆಗಳು ಮಂಜೂರಾಗಿದ್ದು, ನನ್ನ ಗಮನಕ್ಕೆ ಬಾರದೇ ಉದ್ಘಾಟನೆ ಮಾಡಲು ತೀರ್ಮಾನಿಸಲಾಗಿತ್ತು. ಈ ಬಗ್ಗೆ ಸ್ವಲ್ಪ ಬೇಸರ ವ್ಯಕ್ತಪಡಿಸಿದ್ದೆ.
ಶಕ್ತಿ : ನೀವು ಏಕೈಕ ಮಹಿಳಾ ಅಭ್ಯರ್ಥಿಯಾಗಿ ಕಣದಲ್ಲಿದ್ದೀರಿ, ದೊಡ್ಡ ಕ್ಷೇತ್ರ ದೊಡ್ಡ ಪೈಪೋಟಿ ಇದೆ, ಹೇಗೆ ಎದುರಿಸುವಿರಿ...?
ಕಲಾ : ಇಬ್ಬರು ಅಭ್ಯರ್ಥಿಗಳು ಕೂಡ ನನಗೆ ದೊಡ್ಡ ಪೈಪೋಟಿ ಅಂತ ಅನ್ಸಿಲ್ಲ; ನನ್ನ ಜೊತೆ ಮಹಿಳಾ ಕಾರ್ಯಕರ್ತೆಯರು ಇದ್ದಾರೆ; ನೋವನ್ನು ಹಂಚಿಕೊಳ್ಳೋಕೆ ಗೆಲವು ಸುಲಭವಿದೆ.
ಶಕ್ತಿ : ನಿಮ್ಮೊಳಗೆ ವಿರೋಧ ಪಡೆಗಳಿವೆಯಲ್ಲ. ನಿಮಗೆ ವಿಪಕ್ಷಕ್ಕಿಂತ ಸ್ವಪಕ್ಷದವರೇ ವಿರೋಧ ಮಾಡ್ತಿದ್ದಾರಲ್ಲ ?
ಸಾಕಷ್ಟು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದರು. ಆಗ ಪರಸ್ಪರ ಅಸಮಾಧಾನ ಇರುತ್ತದೆ. ಆದರೆ ಇದೀಗ ನನಗೆ ಟಿಕೆಟ್ ಸಿಕ್ಕಿದೆ. ಎಲ್ಲರೂ ಜೊತೆಗೂಡಿ ಕೆಲಸ ಮಾಡುತ್ತಿದ್ದೇವೆ.
ಶಕ್ತಿ : ಈ ಬಾರಿ ವಿಚಿತ್ರ ಸನ್ನಿವೇಶ ಸೃಷ್ಟಿಯಾಗಿದೆ. ದ. ಕೊಡಗಿನಲ್ಲಿ ಜಾತಿ ವ್ಯವಸ್ಥೆಯಡಿ ಟಿಕೆಟ್ ಕೇಳಿದ್ದರು. ಅದರ ಪರಿಣಾಮ ಮಡಿಕೇರಿ ಕ್ಷೇತ್ರದಲ್ಲೂ ಬೀರಲಿದೆಯೇ?
ಕಲಾ : ಜಾತಿ ವ್ಯವಸ್ಥೆಯಡಿ ಚುನಾವಣೆ ಬರಬಾರದು. (ಮೊದಲ ಪುಟದಿಂದ) ನಮ್ಮದು ಜಾತ್ಯತೀತ ನಿಲವು. ಆದರೆ ಜಾತ್ಯತೀತ ಪಕ್ಷದ ಅಭ್ಯರ್ಥಿ ಜಾತಿ ಆಧಾರದಲ್ಲಿ ಮತ ಕೇಳುತ್ತಿದ್ದಾರೆ. ನಾವು ಎಲ್ಲರನ್ನು ಸಮಾನವಾಗಿ ಕಾಣುತ್ತಿದ್ದೇವೆ. ಜಾತಿ ಆಧಾರದಲ್ಲಿ ಮತ ಕೇಳೋದು ತಪ್ಪು.
ಶಕ್ತಿ : ನಿಮ್ಮ ಮಾತಿನಿಂದ ನಿಮಗೆ ಜೀವಿಜಯ ಪ್ರಬಲ ಪೈಪೋಟಿ ಎಂದೆನಿಸುತ್ತಿದೆ.?
ಕಲಾ : ಅಪ್ಪಚ್ಚುರಂಜನ್ ಅವರು ನನಗೆ ಪ್ರಬಲ ಪೈಪೋಟಿ. ಜೀವಿಜಯ ಅಲ್ಲ.
ಶಕ್ತಿ : ಕಾಂಗ್ರೆಸ್ ಧರ್ಮವನ್ನು ಒಡೆದಿದೆ ಎಂಬ ಆರೋಪವಿದೆ. ಲಿಂಗಾಯುತ, ವೀರಶೈವ ಧರ್ಮದ ವಿಚಾರದಲ್ಲಿ ಪರ-ವಿರೋಧ ಕೇಳಿ ಬರುತ್ತಿದೆ. ಇದು ಪರಿಣಾಮ ಬೀರಲಿದೆಯಾ?
ಕಲಾ : ಅದರ ಬಿಸಿ ಇಲ್ಲಿವರೆಗೆ ಮುಟ್ಟಿಲ್ಲ. ಲಿಂಗಾಯುತರ ಮತ ಬಂದೇ ಬರುತ್ತದೆ. ನನ್ನ ಅಳಿಯ ಕೂಡ ಲಿಂಗಾಯುತ ಆಗಿರುವದರಿಂದ ಈ ಬಗ್ಗೆ ಆತಂಕವಿಲ್ಲ.
ಶಕ್ತಿ : ಈ ಬಾರಿ ಜೆಡಿಎಸ್ ಪರ ಒಲವು ಹೆಚ್ಚಾಗಿದೆ ಎಂದು ಸಾರ್ವಜನಿಕವಾಗಿ ಮಾತು ಕೇಳಿ ಬರುತ್ತಿದೆ. ನಿಮ್ಮ ಅಭಿಪ್ರಾಯವೇನು ?
ಕಲಾ : ಜೀವಿಜಯ ಅವರು 12ನೇ ಬಾರಿಗೆ ಚುನಾವಣೆಗೆ ನಿಲ್ಲುತ್ತಿರೋದು. 5 ವರ್ಷಕೊಮ್ಮೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾಣಿಸಿಕೊಳ್ಳೊ ಅವರು, ಜಿಲ್ಲೆಯ ಆಗು ಹೋಗುಗಳು, ರೈಲು, ಅರಣ್ಯ, ದೇವಟಿಪರಂಬು, ಟಿಪ್ಪು ಜಯಂತಿಯಂತಹ ಸಮಸ್ಯೆಗಳು ಎದುರಾದಾಗ ಗಂಭೀರವಾಗಿ ಪ್ರತಿಕ್ರಿಯಿಸಿಲ್ಲ. ಈ ಬಗ್ಗೆ ಮತದಾರರು ಅರಿತುಕೊಂಡಿದ್ದಾರೆ.
ಶಕ್ತಿ : ಟಿಪ್ಪು ಜಯಂತಿ ಬೇಕು-ಬೇಡವೆಂದು ವಿವಾದವಿದೆ. ನವೆಂಬರ್ ಬಂತೆಂದರೆ ಒಂದು ರೀತಿಯ ಆತಂಕದ ಪರಿಸ್ಥಿತಿ ಇದೆ ನೀವು ಟಿಪ್ಪು ಜಯಂತಿಯನ್ನು ಬೆಂಬಲಿಸಿದ್ದೀರಿ?
ಕಲಾ : ಇದು ಸರಕಾರದ ತೀರ್ಮಾನ, ಕಾಂಗ್ರೆಸ್ಸಿಗಳಾಗಿ ಸ್ವಾಗತಿಸುತ್ತೇನೆ. ಎಲ್ಲ ನಾಯಕರ ಜಯಂತಿ ಆಚರಿಸುವಾಗ ಟಿಪ್ಪು ಜಯಂತಿ ಏಕೆ ಬೇಡ. ಬೇರೆ ಎಲ್ಲೂ ಇಲ್ಲದ್ದು ಕೊಡಗಿನಲ್ಲೇ ಏಕೆ ಗಲಾಟೆ? ಇದು ಹಿಂದೂ ಮುಸ್ಲಿಂ ನಡುವೆ ಜಾತಿಯ ಭಿನ್ನಾ ಭೇದ ಉಂಟುಮಾಡುವ ಉದ್ದೇಶ. ಸರಕಾರ ಬಂದರೆ ಟಿಪ್ಪು ಜಯಂತಿ ಮಾಡುತ್ತೇವೆ.
ಶಕ್ತಿ : ನಿಮ್ಮ ವಿರುದ್ಧ ಅಪಪ್ರಚಾರ ಕೂಡ ನಡಿತ್ತಿದೆಯಲ್ಲ. ಈ ಬಗ್ಗೆ ತಮ್ಮ ನಿಲುವು ?
ಕಲಾ : ಅಪಪ್ರಚಾರದ ಕೆಲಸ ಮಾಡಿದರೆ ಏನು ಮಾಡೋದು ? ಅನುಭವಿಸ್ತಾರೆ. ವ್ಯಾಟ್ಸಪ್‍ನಲ್ಲಿ ನನ್ನ ಹಾಗೂ ರಂಜನ್ ಅವರ ಫೋಟೋ ಹಾಕಿ ಬಿಜೆಪಿಯೊಂದಿಗೆ ಲಿಂಕ್ ಆಗಿದೆ ಎಂದು ಬಿಂಬಿಸುತ್ತಿದ್ದಾರೆ. ಈ ಬಗ್ಗೆ ದೂರು ನೀಡಲಾಗಿದೆ. ನಾವು ಎಂದಿಗೂ ಕಾಂಗ್ರೆಸ್. ಬಿಜೆಪಿ ಮತ್ತು ಜೆಡಿಎಸ್ ಜೊತೆಯಾಗಿದೆ.
ಶಕ್ತಿ : ಶಾಸಕಿಯಾಗಿ ಆಯ್ಕೆಯಾಗಿ ಬಂದರೆ ಯಾವದಕ್ಕೆ ಪ್ರಾಮುಖ್ಯತೆ ನೀಡುವಿರಿ ?
ಕಲಾ : ಜನತೆಗೆ ಶುದ್ಧ ನೀರು ಕೊಡುವದು, ಪ್ರವಾಸೀ ತಾಣಗಳ ಅಭಿವೃದ್ಧಿ ಮಾಡುವದು, ಇದನ್ನೇಲ್ಲ ಶಾಸಕರಾಗಿದ್ದವರು ಮಾಡಬೇಕಿತ್ತು. ಅಧಿಕಾರಿಗಳಿಂದ ಕೆಲಸ ಮಾಡಿಸಬೇಕಿತ್ತು.
ಆದರೆ ಅದು ಆಗಿಲ್ಲ. ಕಾವೇರಿ ಇಲ್ಲಿ ಹುಟ್ಟಿ ಹರಿದರೂ ಇಲ್ಲಿನವರಿಗೆ ನೀರಿಲ್ಲ. ಬೆಂಗಳೂರು, ಮಂಡ್ಯಕ್ಕೆ ಹೋಗುತ್ತದೆ. ತೊರೆನೂರಿಗೆ ಹಾರಂಗಿಯಿಂದ ನೀರೊದಗಿಸುವ ಯೋಜನೆ ಮಾಡಿಸಿಕೊಟ್ಟರೂ ನಿರ್ವಹಣೆ ಮಾಡದೆ ಇರುವದು ಬೇಸರ ತಂದಿದೆ.
ಶಕ್ತಿ : ನಿಮ್ಮ ಸರಕಾರದಿಂದ ಕೊಡಗಿಗೆ ಕೊಡುಗೆ ಏನು ?
ಕಲಾ : ಕಾಂಗ್ರೆಸ್ ಸರಕಾರದಿಂದ ಕೊಡಗಿಗೆ ಸಾಕಷ್ಟು ಕೊಡುಗೆ ಸಿಕ್ಕಿದೆ. ಸಿದ್ದರಾಮಯ್ಯ ನೇತೃತ್ವದ ಸರಕಾರದಿಂದಲೂ ಹೆಚ್ಚಿನ ಅನುದಾನ ಬಂದಿದೆ. ಈ ಬಾರಿ ಕೂಡ ಜನತೆ ಸಿದ್ದರಾಮಯ್ಯ ಅವರನ್ನು ಗೆಲ್ಲಿಸುತ್ತಾರೆ.
ಜಿಲ್ಲೆಗೆ ಪ್ರಮುಖವಾಗಿ ತಲಕಾವೇರಿ ಕ್ಷೇತ್ರದ ಅಭಿವೃದ್ಧಿಗೆ ನೀಡಿರುವ ರೂ. 17 ಕೋಟಿ ಅನುದಾನ ಸೇರಿದಂತೆ ರಾಜ್ಯ ಹೆದ್ದಾರಿ 91, ಕೂಡಿಗೆ-ಕೋವರ್‍ಕೊಲ್ಲಿ 18 ಕೋಟಿ, ಸ್ಪೋಟ್ರ್ಸ್ ಸ್ಕೂಲ್ ಪೊನ್ನಂಪೇಟೆ, ಮಡಿಕೇರಿಯ ಬಸ್ ಸ್ಟ್ಯಾಂಡ್‍ಗೆ ಜಾಗ ಮಂಜೂರಾತಿ, ಒಳಚರಂಡಿ ವ್ಯವಸ್ಥೆಗೆ 50 ಕೋಟಿ, ಗ್ರಾಮಾಂತರ ನಿಯಂತ್ರಣ ಠಾಣೆ, ಮಡಿಕೇರಿ ಮಹಿಳಾ ಪೊಲೀಸ್ ಠಾಣೆ, ಖಾಸಗಿ ಬಸ್ ನಿಲ್ದಾಣ ಕುಶಾಲನಗರಕ್ಕೆ ಜಾಗ ಮಂಜೂರಾತಿ, ಕೂಡಿಗೆ ಡೈರಿ ಅಭಿವೃದ್ಧಿ 1 ಕೋಟಿ 35 ಲಕ್ಷ, ಸೋಮವಾರಪೇಟೆ ವಿದ್ಯುತ್ ಸಂಪರ್ಕಕ್ಕೆ ಮೇಲ್ದರ್ಜೆ 33 ಕೆ.ವಿ.ಯಿಂದ 66 ಕೆವಿಗೆ, ಕಾವೇರಿ ನದಿಯಿಂದ 12 ಹಳ್ಳಿಗೆ ಕುಡಿಯುವ ನೀರಿನ ಯೋಜನೆ 12 ಕೋಟಿ, ಹಾರಂಗಿಯಿಂದ ಸೋಮವಾರಪೇಟೆಗೆ ಕುಡಿಯುವ ನೀರಿನ ಯೋಜನೆ ಮಂಜೂ ರಾತಿ, ಶುದ್ಧ ನೀರಿನ ಘಟಕ ಪ್ರಾರಂಭ.