ಗೋಣಿಕೊಪ್ಪಲು, ಏ. 18: ಕೊಡಗಿನ ಗಿರಿಜನರಲ್ಲಿ ಮೊದಲನೆ ಸಾಲಿನಲ್ಲಿ ನಿಲ್ಲುವ ಯರವ ಸಮುದಾಯದ ಜನಾಂಗವೂ ತನ್ನ ಸಂಸ್ಕøತಿ, ಆಚಾರ-ವಿಚಾರ, ಉಡುಗೆ, ತೊಡುಗೆ, ಭಾಷೆಯ ಮೂಲಕ ವಿಭಿನ್ನ ಎನ್ನಿಸಿಕೊಂಡಿದ್ದಾರೆ. ಪ್ರತಿದಿನ ತೋಟ, ಗದ್ದೆಗಳಲ್ಲಿ ಬೆವರಿಳಿಸುವ ಈ ಮಂದಿಗೆ ಕಾಯಕವೇ ಕೈಲಾಸ. ಬೇಸಿಗೆ ಸಮಯದಲ್ಲಿ ಯರವ ಸಮುದಾಯದವರು ಒಗ್ಗೂಡಿ ಸಂಭ್ರಮಿಸುತ್ತಿದ್ದಾರೆ. ಇದೀಗ ಕಳೆದ ಏಳು ವರ್ಷಗಳಿಂದ ಯರವ ಸಮುದಾಯದ ಯುವಕರು ನಾವು ಕೂಡ ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಕ್ರೀಡಾಕೂಟ ಆಯೋಜಿಸುವ ಮೂಲಕ ಜನಾಂಗದ ಒಗ್ಗಟ್ಟು ಪ್ರದರ್ಶನ ಮಾಡಿ ಜನಾಂಗ ಒಗ್ಗೂಡಿಸುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಿದ್ದು ಯುವಕ-ಯುವತಿಯರು ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಸಂಭ್ರಮಿಸುತ್ತಿದ್ದಾರೆ.
ಸಮುದಾಯದ ಯುವಕರು ಒಟ್ಟಾಗಿ ಸೇರಿಕೊಂಡು ತಮ್ಮ ಯರವ ಮನೆತನದ ಹೆಸರಿನಲ್ಲಿ ಕ್ರೀಡಾಕೂಟವನ್ನು ಆಯೋಜಿಸಿ ಆ ಮೂಲಕ ಜಿಲ್ಲೆಯ ವಿವಿಧೆಡೆ ಇರುವ ಯರವ ಹಾಗೂ ಆದಿವಾಸಿಗಳನ್ನು ಒಂದೆಡೆ ಸಮಾಗಮಗೊಳ್ಳುವ ಕೆಲಸ ಮಾಡುತ್ತಿದ್ದಾರೆ. ಪ್ರತಿ ವರ್ಷ ಏಪ್ರಿಲ್ ಕೊನೆಯ ವಾರದಲ್ಲಿ ಆಯೋಜನೆಗೊಳ್ಳುವ ಈ ಕ್ರೀಡಾಕೂಟದಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಯುವಕ-ಯುವತಿಯರು ಸೇರುವ ಮೂಲಕ ಕ್ರೀಡಾಕೂಟಕ್ಕೆ ಮೆರಗು ನೀಡುತ್ತಿದ್ದಾರೆ. ತಿತಿಮತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಏಪ್ರಿಲ್ 19 ರಿಂದ 22 ರವರೆಗೆ 4 ದಿನಗಳ ಕಾಲ ಕ್ರಿಕೆಟ್, ಹಗ್ಗಜಗ್ಗಾಟ, ವಾಲಗತ್ತಾಟ್, ಪಂದ್ಯಾವಳಿಯಲ್ಲಿ ಭಾಗವಹಿಸಿ ತಮ್ಮ ಕ್ರೀಡಾ ಪ್ರತಿಭೆಯನ್ನು ಹೊರಸೂಸಲಿದ್ದಾರೆ.
ಸ್ಥಳೀಯ ದಾನಿಗಳ ಸಹಕಾರ ಪಡೆದು ಸತತ 7ನೇ ವರ್ಷದತ್ತ ದಾಪುಗಾಲು ಹಾಕುತ್ತಿರುವ ಯರವ ಸಮಾಜದ ಈ ಕ್ರೀಡಾಕೂಟವೂ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಜನಾಭಿಪ್ರಾಯ ಪಡೆಯುತ್ತಿದೆ. ಪ್ರಸ್ತುತ ವರ್ಷ ಕಾಳಕೊಟ್ಲಾತ್ಲೆರಂಡ ಮನೆತನದ ಹೆಸರಿನಲ್ಲಿ ಕ್ರೀಡಾಕೂಟ ನಡೆಯುತ್ತಿದೆ. ಸರ್ಕಾರದ ಅನುದಾನವಿಲ್ಲದಿದ್ದರೂ ನಾಡಿನ ಜನತೆಯ, ದಾನಿಗಳ ಸಹಕಾರವನ್ನು ನಂಬಿಕೊಂಡೆ ಈ ಕ್ರೀಡಾಕೂಟ ನಡೆಯುತ್ತಿರುವದು ವಿಶೇಷ.
7 ನೇ ವರ್ಷದ ಕಾಳಕೊಟ್ಲತೇರಂಡ ಕ್ರಿಕೆಟ್ ಕಪ್ ಉದ್ಘಾಟನೆಯನ್ನು ತಾ. 19 ರಂದು (ಇಂದು) ಬೆಳಿಗ್ಗೆ 10.30ಕ್ಕೆ ತಿತಿಮತಿಯ ಸರ್ಕಾರಿ ಪ್ರೌಢ ಶಾಲೆಯ ಮೈದಾನದಲ್ಲಿ ನಡೆಯಲಿದ್ದು ಕರ್ನಾಟಕ ರಾಜ್ಯ ಅರಣ್ಯ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ, ಪಂದ್ಯಾಟ ಉದ್ಘಾಟಿಸಲಿದ್ದಾರೆ. ಬೆಂಗಳೂರು ಬಿಬಿಎಂಪಿ ಮಾಜಿ ಕಾರ್ಪೋರೇಟರ್, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸೀತರಾಮ್ ಅವರ ಆಪ್ತರಾದ ಕದ್ದಣಿಯಂಡ ಹರೀಶ್ ಬೋಪಣ್ಣ, ತಿತಿಮತಿ ಜಿ.ಪಂ. ಸದಸ್ಯರಾದ ಪಿ.ಆರ್. ಪಂಕಜ, ಮೂಕೊಂಡ ವಿಜು ಸುಬ್ರಮಣಿ, ಸಿ.ಕೆ. ಬೋಪಣ್ಣ, ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್, ತಾ.ಪಂ. ಸದಸ್ಯರಾದ ಆಶಾ ಜೇಮ್ಸ್, ಪ್ರಕಾಶ್, ಪೊನ್ನಂಪೇಟೆ ತಾಲೂಕು ಪಂಚಾಯಿತಿ ಪ್ರಬಾರ ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ದಾನಿಗಳಾದ ಜಯಲಕ್ಷ್ಮಿ ಜ್ಯುವೆಲ್ಲರಿ ಮಾಲೀಕ ಎಂ.ಜಿ. ಮೋಹನ್, ಅತಿಥಿಗಳಾಗಿ ಭಾಗವಹಿಸಲಿದ್ದು, ತಾ. 22 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಸಮುದಾಯದ ಸಾಧಕರಿಗೆ ಸನ್ಮಾನ, ಮಹಿಳೆಯರಿಗೆ ಹಗ್ಗ-ಜಗ್ಗಾಟ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಮಾಜಿ ಎಂಎಲ್‍ಸಿ ಅರುಣ್ ಮಾಚಯ್ಯ, ಸಮಾಜ ಸೇವಕರಾದ ಮೇರಿಯಂಡ ಸಂಕೇತ್ ಪೂವಯ್ಯ, ತಿತಿಮತಿ ಗ್ರಾ.ಪಂ. ಅಧ್ಯಕ್ಷ ಶಿವು ಕುಮಾರ್, ಕುಟ್ಟ ಜಿ.ಪಂ. ಸದಸ್ಯ ಶಿವು ಮಾದಪ್ಪ, ತಾ.ಪಂ. ಸದಸ್ಯೆ ಬಿ.ಕೆ. ಸುಮಾ, ದಾನಿಗಳಾದ ಅಬ್ದುಲ್ ರೆಹಮಾನ್ ಬಾಪು ತಿತಿಮತಿ ಗ್ರಾ.ಪಂ. ಸದಸ್ಯರಾದ ಚುಬ್ರು ಭಾಗವಹಿಸಿಲಿದ್ದಾರೆ. ಯರವ ಸಮಾಜದ ಅಧ್ಯಕ್ಷ ಶಾಂತ ಕುಮಾರ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
- ಹೆಚ್.ಕೆ. ಜಗದೀಶ್